Advertisement

ಶೀಘ್ರ ಕಾಮಗಾರಿಗೆ ಎಂಜಿನಿಯರ್‌ ಸೂಚನೆ

10:19 PM Jun 03, 2020 | Sriram |

ಗಂಗೊಳ್ಳಿ: 2 ವರ್ಷಗಳ ಹಿಂದೆ 102 ಕೋ. ರೂ. ವೆಚ್ಚದ ಗಂಗೊಳ್ಳಿಯಲ್ಲಿ ನಿರ್ಮಾಣಗೊಂಡ ಬ್ರೇಕ್‌ ವಾಟರ್‌ ತಡೆಗೋಡೆಯ ದಕ್ಷಿಣ ಭಾಗದಲ್ಲಿ ಕುಸಿತಕ್ಕೊಳಗಾಗುತ್ತಿದ್ದು, ಉಡುಪಿಯ ಬಂದರು ಮತ್ತು ಮೀನು ಗಾರಿಕೆ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಉದಯ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಕುಸಿದ ಪ್ರದೇಶವನ್ನು ಪರಿಶೀಲಿಸಿದರು.

Advertisement

ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಉದಯ ಕುಮಾರ್‌, ಕುಸಿತಕ್ಕೊಳಗಾದ ಸ್ಥಳವನ್ನು ತುರ್ತಾಗಿ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಗಂಗೊಳ್ಳಿ ಬ್ರೇಕ್‌ ವಾಟರ್‌ ತಡೆಗೋಡೆಯ ಕುಸಿತ ಪ್ರಕರಣವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗುವುದು. ತಡೆಗೋಡೆ ಕುಸಿಯದಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದವರು ಭರವಸೆ ನೀಡಿದರು.

ಮೀನುಗಾರರ ಎಚ್ಚರಿಕೆ
ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯ ಮೀನುಗಾರರು, ತಡೆಗೋಡೆಯ ದಕ್ಷಿಣ ಭಾಗದಲ್ಲಿ ಕಲ್ಲುಗಳು ಜಾರಿ ಕಡಲ ಒಡಲು ಸೇರಿ ಕುಸಿಯಲಾರಂಭಿಸಿದೆ. ತಡೆಗೋಡೆ ಮೇಲೆ ಹಾಸಲಾದ ಕಾಂಕ್ರೀಟ್‌ ಸ್ಲ್ಯಾಬ್ ಕೂಡ ಕುಸಿಯುತ್ತಿದ್ದರೆ, ಭದ್ರತೆಗಾಗಿ ಅಳವಡಿಸಲಾಗಿರುವ ಟೆಟ್ರಾಫೈಡ್‌ ಕೂಡ ಕುಸಿಯುತ್ತಿದೆ. ಸಿಡಬ್ಲ್ಯುಪಿಆರ್‌ಎಸ್‌ ಪುಣೆ ಅವರು ನೀಡಿದ ವಿನ್ಯಾಸವನ್ನು ಬದಲಿಸಿ ಕಾಮಗಾರಿ ನಡೆಸಿರುವುದು ಮತ್ತು ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸದಿರುವುದು ಈ ದುರಂತಕ್ಕೆ ಕಾರಣ. ಎರಡು ವರ್ಷದಲ್ಲೇ ಈ ಪರಿಸ್ಥಿತಿಯಾದರೆ ಮುಂದೆ ಹೇಗೆ ಎಂಬ ಚಿಂತೆಯಾಗಿದೆ. ಸರಿಯಾಗಿ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಕುಸಿತಕ್ಕೊಳಗಾಗುತ್ತಿರುವ ತಡೆಗೋಡೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಮೀನುಗಾರರ ನಿಯೋಗ ಮೀನುಗಾರಿಕೆ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದೆ ಎಂದು ಎಚ್ಚರಿಸಿದರು.

ತಡೆಗೋಡೆಯ ಕಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಕುಸಿತಕ್ಕೊಳ ಗಾಗುತ್ತಿರುವುದರಿಂದ ಮಳೆಗಾಲದಲ್ಲಿ ತಡೆ ಗೋಡೆ ಅಪಾಯಕ್ಕೆ ಸಿಲುಕಿ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ತುರ್ತು ಕಾಮಗಾರಿ ನಿರ್ವಹಿಸಿ ಬ್ರೇಕ್‌ ವಾಟರ್‌ ಕಾಮಗಾರಿಯನ್ನು ರಕ್ಷಿಸಬೇಕು ಎಂದು ಮೀನುಗಾರರು ಒತ್ತಾಯಿಸಿದರು.

ಗಂಗೊಳ್ಳಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಎಂಜಿನಿಯರ್‌ ವಿಜಯ ಕುಮಾರ್‌ ಶೆಟ್ಟಿ, ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸಂದೀಪ ಜಿ.ಎಸ್‌., ಪರ್ಸಿನ್‌ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್‌, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ , ಭಾಸ್ಕರ ಆರ್ಕಾಟಿ, ಸೌಪರ್ಣಿಕಾ ಬಸವ ಖಾರ್ವಿ, ರಾಘವೇಂದ್ರ ಮೇಸ್ತ, ಅರುಣ್‌ ಕುಮಾರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next