ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿ ಕೆರೆ ಬರಿದಾಗಿ ಕುಡಿಯಲು ನೀರಿಲ್ಲದೇ ಪ್ರಾಣಿ, ಪಕ್ಷಿ, ಜಾನುವಾರುಗಳು ಪರದಾಡುವಂತಾಗಿದೆ. ಕೆರೆಯಲ್ಲಿ ನೀರಿಲ್ಲದಿರುವುದು ದಾಹ ತೀರಿಸಿಕೊಳ್ಳಲು ಜಾನುವಾರುಗಳ ನೋವಾದರೆ, ಪ್ರಾಣಿ ಪಕ್ಷಿಗಳಿಗೆ ತಿನ್ನಲು ಆಹಾರವೂ ಇಲ್ಲವಾಗಿದೆ. ನೀರು ಇಲ್ಲದಂತಾಗಿ ಹನಿ ನೀರಿಗೂ ಜೀವಸೆಲೆ ಹುಡುಕಾಟ ನಡೆಸುವಂತಾಗಿದೆ. ಕೆರೆಯಲ್ಲಿನ ಗುಂಡಿಗಳಲ್ಲಿದ್ದ ಅಲ್ಪಸ್ವಲ್ಪ ಗುಟುಕು ನೀರು ಬರಿದಾಗಿ ಭೂಮಿ ಬೀಟು ಬಿಟ್ಟಿದೆ.
30ಎಕರೆ ವಿಸ್ತಾರದ ಕೆರೆ ಇಂದು ಎತ್ತ ನೋಡಿದರೂ ವಿಶಾಲ ಮೈದಾನದಂತೆ ಕಾಣುವಂತಾಗಿದೆ. ಕೆರೆ ಅವಲಂಬಿಸಿ 490 ಎಕರೆಯಷ್ಟು ಕೃಷಿ ಭೂಮಿ ಕೆರೆಯ ತಳಭಾಗದಲ್ಲಿದೆ. ಕೆರೆಯ ಆಸುಪಾಸಿನಲ್ಲಿ 300ಕ್ಕೂ ಹೆಚ್ಚು ರೈತರ ಕೃಷಿ ಪಂಪು ಸೆಟ್‌ಗಳಿವೆ. ಕೆರೆಯ ತಳಭಾಗದ ರೈತರು ಬೇಸಿಗೆಯಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದ ಬೇಸಾಯವೂ ಈ ಬಾರಿ ಇಲ್ಲವಾಗಿದೆ. ಈ ಬಾರಿ ಮಳೆಗಾಲದಲ್ಲಿಯೂ ಮಳೆ ಬೀಳದೆ ಬಿಡು ಬೇಸಿಗೆಯಾಗಿದೆ.
ಪರಿಣಾಮ ಮಳೆಗಾಲದಲ್ಲಿಯೇ ಕೆರೆ ಬಟಬಯಲಾಗಿ, ಕೃಷಿಕರ ಪಂಪ್ ಸೆಟ್‌ಗಳು ಸದ್ದು ಮಾಡಲಾರದೆ ನಿಂತು ಹೋಗುತ್ತಿವೆ. ಅಂರ್ತಜಲ ಕುಸಿತದಿಂದ ದಿನಕ್ಕೆ ಎರಡು ಪಂಪು ಸೆಟ್‌ಗಳು ಮೌನವಾಗುತ್ತಿದ್ದು, ರೈತರು ಆಗಸದತ್ತ ಮಳೆಗಾಗಿ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕಬ್ಬು ಬೆಳೆಯುತ್ತಿದ್ದ ರೈತರ ಮೊಗ ಬಾಡುವಂತಾಗಿದೆ.
ಹೈನುಗಾರಿಕೆ ನಂಬಿದ ಜೀವಗಳಿಗೆ ಸದ್ಯಕ್ಕೆ ಜಾನುವಾರುಗಳಿಗೆ ಮೇಯಿಸಲು ಮೇವಿದೆ. ಆದರೆ, ನೀರಿಲ್ಲ ಎಂದು ಹಪಹಪಿಸುವಂತಾಗಿದೆ. ಮಳೆ ಕೈಕೊಟ್ಟರೆ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಬೇಕಾದ ಧಾರಣ ಸ್ಥಿತಿ ಸೃಷ್ಟಿಯಾಗಲಿದೆ. ಕೆರೆ ಬರಿದಾದ ಪರಿಣಾಮ ಗಂಗೇನಹಳ್ಳಿ, ಸಿದ್ಧಾಪುರದಂಥ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಯಲ್ಲಿ ನೀರು ಸಿಗುತ್ತಿತ್ತು. ಆದರೆ , ಈ ಬಾರಿ ಅಲ್ಲಿಯೂ ನೀರಿನ ಹರಿವು ಕ್ಷೀಣವಾಗಿದೆ.10 ವರ್ಷಗಳ ಹಿಂದೆ ಈ ಕೆರೆಗೆ ಮಳೆಯ ನೀರು ಆಶ್ರಯವಾಗಿತ್ತು. ಸ್ವಲ್ಪ ಜೋರು ಮಳೆ ಬಂದರೆ ಸಾಕಿತ್ತು. ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿ ಸರಾಗವಾಗಿ ಹರಿದು ಬರುತ್ತಿತ್ತು. ಸಾಕಷ್ಟು ಒಡ್ಡು, ಜೀವಸೆಲೆಗಳಿದ್ದವು. ಇಂದು ಎಲ್ಲವೂ ಮಾಯವಾಗಿದೆ. ಹಳ್ಳ ಕೊಳ್ಳಗಳು ಎಗ್ಗಿಲ್ಲದೆ ಮುಚ್ಚಿಹೋಗಿವೆ. ಒತ್ತುವರಿ ತೆರವು ಮಾಡಿ ಟ್ರಂಚ್ ತೆಗೆದ ಗುಂಡಿಗಳು ಪ್ರಭಾವಿ ರೈತರಿಂದ ಮುಚ್ಚಿವೆ. ಕೆರೆ ತುಂಬ ಊಳು ತುಂಬಿಕೊಂಡು ಕೆರೆಯ ನೀರು ಹಿಡಿಯುವ ಸಾಮರ್ಥ್ಯವನ್ನು ಕುಗ್ಗಿಸಿದೆ.
ಹೇಮಾವತಿ ನಾಲುವೆ ನೀರು ಮಾತ್ರ ಆಶ್ರಯವಾಗಿದೆ. ಈ ಬಾರಿ ತಡವಾಗಿ ಹೇಮಾವತಿಯಿಂದ ಕೆರೆಗೆ ನೀರು ಹರಿದ ಪರಿಣಾಮ ರೈತರು ಅರೆಬರೆ ಬೆಳೆ ಬೆಳೆಯುವಂತಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಒತ್ತುವರಿ ತೆರವು ಎನ್ನುವುದು ಕಾಟಾಚಾರವಾಗಬಾರದು. ಭೂಗಳ್ಳರಿಗೆ ಕಠಿಣ ಶಿಕ್ಷೆಯಾಗಬೇಕಿದೆ. ಒತ್ತುವರಿ ತೆರವು ಮಾಡಿ ಗಡಿರೇಖೆ ಗುರುತಿಸಿ ತೆಗೆದ ಗುಂಡಿ ಬದಲು ತಡೆಗೋಡೆ ಅವಶ್ಯವಿದೆ. ಊಳು ತೆಗೆಯುವ ಕ್ರಿಯೆ ಸರ್ಕಾರದ ಜತೆ ರೈತರ ಸಾಮೂಹಿಕ ಕಾಯಕವಾದಲ್ಲಿ ಮಾತ್ರ ಕೆರೆ ಉಳಿವು ಸಾಧ್ಯ.
● ಸಿಪಾಯಿ ಲೋಕೇಶ್, ಗ್ರಾಮಸ್ಥ
ಗಂಗೇನಹಳ್ಳಿ ಕೆರೆ ವ್ಯಾಪ್ತಿ ಲಕ್ಷ್ಮೀಪುರ ಗ್ರಾಪಂಗೆ ಬರಲಿದ್ದು, ಕೆರೆ ತುಂಬಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು.
-ಸುರೇಶ್‌ಬಾಬು, ಲಕ್ಷ್ಮೀಪುರ ಗ್ರಾಪಂ ಪಿಡಿಒ
-ತ್ರಿವೇಣಿ