Advertisement

ಗಂಗವ್ವ ಸ್ಟಾರ್‌ @ 60

09:15 AM Sep 12, 2019 | mahesh |

ಯಶಸ್ಸು ಯಾರನ್ನು, ಯಾವ ಹೊತ್ತಿನಲ್ಲಿ ಹುಡುಕಿಕೊಂಡು ಬರುತ್ತದೋ ಹೇಳಲಾಗದು ಅಂತಾರೆ. ಆ ಮಾತಿಗೆ ತೆಲಂಗಾಣದ ಗಂಗವ್ವ ಅವರನ್ನು ಉದಾಹರಣೆಯಾಗಿ ಕೊಡಬಹುದು. ಅರವತ್ತು ವರ್ಷದ ಗಂಗವ್ವ ಈಗ ತೆಲಂಗಾಣದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌! ಜನ ಆಕೆಯ ನಟನೆ, ಭಾಷೆಯ ಶೈಲಿಗೆ ಫಿದಾ ಆಗಿದ್ದಾರೆ.

Advertisement

ಯೂ ಟ್ಯೂಬ್‌ ಚಾನೆಲ್‌ ಮೂಲಕ ಮನೆಮಾತಾಗಿರುವ ಗಂಗವ್ವ, ಮೂಲತಃ ಬಡ ರೈತ ಕುಟುಂಬದ ಮಹಿಳೆ. ಯೂ ಟ್ಯೂಬ್‌ ಬಿಡಿ, ಮೊಬೈಲ್‌ ಬಳಸಲು ಕೂಡಾ ಗೊತ್ತಿರದ ಅನಕ್ಷರಸ್ಥ ಮಹಿಳೆ. ತನ್ನೊಳಗೊಬ್ಬ ಕಲಾವಿದೆ ಇದ್ದಾಳೆಂಬ ವಿಷಯ ಸ್ವತಃ ಆಕೆಗೇ ಗೊತ್ತಿರಲಿಲ್ಲ. ಮನೆಗೆಲಸ, ಹೊಲದಲ್ಲಿ ದುಡಿತ, ಕೆಲವೊಮ್ಮೆ ಹೊಟ್ಟೆಪಾಡಿಗಾಗಿ ಕೂಲಿ, ಬೀಡಿ ಕಟ್ಟುವುದು… ಹೀಗೆ, ಉದರ ನಿಮಿತ್ತ ನಾನಾ ರೀತಿಯಲ್ಲಿ ದುಡಿದು ಹೈರಾಣಾಗಿದ್ದ ಗಂಗವ್ವಳ ಪ್ರತಿಭೆ ಜಗತ್ತಿಗೆ ಪರಿಚಯವಾಗಿದ್ದು 2016ರಲ್ಲಿ. ಮೈ ವಿಲೇಜ್‌ ಶೋ ಎಂಬ ಯೂ ಟ್ಯೂಬ್‌ ಚಾನೆಲ್‌, ಗಂಗವ್ವಳನ್ನು ಗುರುತಿಸಿ, ತನ್ನ ಚಾನೆಲ್‌ಗೆ ಸೇರಿಸಿಕೊಂಡಿತು. ಆ ಚಾನೆಲ್‌ನ ಮುಖ್ಯ ಉದ್ದೇಶ, ಹಳ್ಳಿಯ ಜನಜೀವನ ಮತ್ತು ಭಾಷೆಯ ಸೊಗಡನ್ನು ಬಿಚ್ಚಿಡುವುದು. ದಿನ ಕಳೆದಂತೆ ಆ ಚಾನೆಲ್‌ ಮೂಲಕ ಗಂಗವ್ವ ಎಷ್ಟು ಜನಪ್ರಿಯರಾದರು ಎಂದರೆ, ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶವೂ ಅವರಿಗೆ ಸಿಕ್ಕಿತು. ಅವರ ನೈಜ ನಟನೆ, ಹೊಸತನ್ನು ಕಲಿಯಲು ಅವರು ತೋರಿಸುವ ಶ್ರದ್ಧೆಯೇ ಈ ಯಶಸ್ಸಿಗೆ ಕಾರಣ ಅನ್ನುತ್ತದೆ ಯೂಟ್ಯೂಬ್‌ ಚಾನೆಲ್‌. ಜೀವನದಲ್ಲಿ ಬಹಳ ನೋವುಂಡಿರುವ ಗಂಗವ್ವ, ಒಂದು ಕಾಲದಲ್ಲಿ ಕುಡುಕ ಗಂಡನಿಂದ ದೈಹಿಕ-ಮಾನಸಿಕ ಹಿಂಸೆಗೆ ಒಳಗಾದವರಂತೆ. ಕೆಲ ವರ್ಷಗಳ ಹಿಂದೆ ಗಂಡ ತೀರಿಕೊಂಡಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next