ಗಂಗಾವತಿ: ತುಂಗಭದ್ರಾ ಡ್ಯಾಮ್‌ನಲ್ಲಿ ಸಂಗ್ರಹವಾದ ಹೂಳಿನ ಪ್ರಮಾಣದ ನೀರು ಹರಿದು ಸಮುದ್ರ ಸೇರುವುದನ್ನು ತಪ್ಪಿಸಲು ನವಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಒಪ್ಪಿಗೆ ಅಗತ್ಯವಿದೆ. ಸರಕಾರ ಈ ನಿಟ್ಟಿನಲ್ಲಿ ಸಭೆ ಕರೆದು ಶೀಘ್ರ ಯೋಜನೆ ಅನುಷ್ಠಾನಕ್ಕೆ ಯತ್ನಿಸಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಅವರು ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಡ್ಯಾಮ್ ಅಂತರ್ ರಾಜ್ಯ ಯೋಜನೆಯಾಗಿದೆ. ಜಲಾಶಯಕ್ಕೆ ಹೊಂದಿಕೊಂಡಂತೆ ನೂತನ ಯೋಜನೆ ಅನುಷ್ಠಾನಕ್ಕೆ ತೆಲಂಗಾಣ, ಆಂಧ್ರಪ್ರದೇಶದ ಪರವಾನಗಿ ಅಗತ್ಯವಿದ್ದು, ಆಯಾ ರಾಜ್ಯಗಳ ನೀರಾವರಿ ಇಲಾಖೆಯ ಮುಖ್ಯಸ್ಥರ ಸಭೆ ನಡೆಸಲಾಗುತ್ತದೆ. ನೂತನವಾಗಿ ನಿರ್ಮಿಸುವ ನವಲಿ ಜಲಾಶಯದಲ್ಲಿ ಶೇ. 35ರಷ್ಟು ನೀರನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಕೊಡಬೇಕಿದೆ.
ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಯೋಜನೆ ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ ಎಂದರುವರದಿಗೆ ಸೂಚನೆ: ರಾಯಚೂರು, ಬಳ್ಳಾರಿ ಕೊಪ್ಪಳ ಜಿಲ್ಲೆಗಳಲ್ಲಿ ಭತ್ತದ ಬೆಳೆ ನಾಟಿ ಮಾಡಿದ 25 ದಿನಕ್ಕೆ ತೆನೆ ಬಿಚ್ಚಿದ್ದು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಲಿದೆ. ಭತ್ತದ ಬೆಳೆ ಹವಾಮಾನ ವೈಪರಿತ್ಯ ಅಥವಾ ನಕಲಿ ಬೀಜಗಳ ಕಾರಣಕ್ಕಾಗಿ ಹೀಗಾಗಿದೆ ಎನ್ನುವ ಕುರಿತು ಜಿಲ್ಲಾಡಳಿತದಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಿಬ್ಬಂದಿ ನೇಮಕ ಶೀಘ್ರ: ಸಮಾಜಕಲ್ಯಾಣ ಇಲಾಖೆ ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ನಡೆಸಲಾಗುತ್ತದೆ. ಈಗಾಗಲೇ 1005 ಹಾಸ್ಟೆಲ್ ವಾರ್ಡನ್‌ಗಳ ನೇಮಕ ಮಾಡಲಾಗುತ್ತಿದೆ. 660 ವಾರ್ಡನ್ ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದವರ ಸಿಂಧುತ್ವ ಪ್ರಮಾಣ ಪತ್ರದ ಕಾರಣಕ್ಕಾಗಿ ಆದೇಶ ಪತ್ರ ಕೊಟ್ಟಿಲ್ಲ. ಶೀಘ್ರ ಉಳಿದವರಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. 824 ಮೊರಾರ್ಜಿ ವಸತಿ ಶಾಲೆಗಳಿದ್ದು, ಇದರಲ್ಲಿ 435 ಸ್ವಂತ ಕಟ್ಟಡವಿದ್ದು 300 ಕೋಟಿ ವೆಚ್ಚದಲ್ಲಿ ಉಳಿದ ವಸತಿ ಶಾಲೆ ಕಟ್ಟಡ
ನಿರ್ಮಿಸಲಾಗುತ್ತದೆ ಎಂದರು.
ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಸಿಂಗನಾಳ ವಿರೂಪಾಕ್ಷಪ್ಪ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ತಿಪ್ಪೆರುದ್ರಸ್ವಾಮಿ, ಸಿಂಗನಾಳ ಪಂಪಾಪತಿ, ಎಚ್. ಗಿರೇಗೌಡ, ಜಿಪಂ ಮಾಜಿ ಸದಸ್ಯ ಪರಶುರಾಮ, ಕಾಮದೊಡ್ಡಿ ದೇವಪ್ಪ, ಮುಸ್ಟೂರು ಮಾರೇಶ, ಶಿವಪ್ಪ ಪೂಜಾರಿ, ಮಲ್ಲಿಕಾರ್ಜುನ ಕಾಮದೊಡ್ಡಿ, ನರಸಿಂಹಲು ಸಾಣಾಪೂರ, ಸಿಂಗನಾಳ ಸುರೇಶ ಸೇರಿ ಅನೇಕರಿದ್ದರು.