Advertisement

ಗಂಗಾವತಿ: ಮುಂಗಾರಿಗೆ ಕೆರೆ, ಕೊಳ್ಳಗಳು ಸಂಪೂರ್ಣ ಭರ್ತಿ

05:55 PM Jun 22, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ನರೇಗಾ ಯೋಜನೆಯಡಿ ಹೂಳೆತ್ತುವ ಕೆಲಸ ಮಾಡಿದ್ದರಿಂದ ಕೆರೆ, ಕಟ್ಟೆಗಳಲ್ಲಿ ಮುಂಗಾರು ಮಳೆ ನೀರು ನಿಲ್ಲುವಂತಾಗಿದೆ. ಬರದಿಂದ ಬತ್ತಿ ಹೋಗಿದ್ದ ಕೆರೆಗಳು, ನಾಲಾಗಳಲ್ಲಿ ತಾಲೂಕಿನ ಗ್ರಾಮೀಣ ಭಾಗದ ಕೂಲಿಕಾರರು ಹೂಳೆತ್ತುವ ಕೆಲಸ ಮಾಡಿದ್ದರ ಪರಿಣಾಮ ಇದೀಗ ಕಾಲುವೆ, ಹಳ್ಳ, ಕೊಳ್ಳಗಳು ಮೈದುಂಬಿಕೊಂಡು ಹರಿಯುತ್ತಿವೆ.

Advertisement

ತಾಲೂಕಿನ ಬಹುತೇಕ ಪ್ರದೇಶ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು ಇಳಿಜಾರು ಪ್ರದೇಶದಿಂದ ಬರುವ ಮಳೆ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದೆ. ದನಕರು-ಕಾಡುಪ್ರಾಣಿಗಳಿಗೆ ನೀರು ದೊರೆತಂತಾಗಿದೆ. ಜತೆಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.

ತಾಲೂಕಿನ ಸೂರ್ಯನಾಯಕ ತಾಂಡಾ ಕೆರೆ, ಮಲ್ಲಾಪುರ ಬಳಿಗಾರ ಊಟಿಕೆರೆ, ಗಡ್ಡಿ ಕೆರೆ, ಹಂಪಸದುರ್ಗಾದ ತುರುಕನಕೊಳ್ಳ,
ತಿರುಮಲಾಪುರ ಕೆರೆ, ಬಸವನದುರ್ಗಾದ ಡುಮ್ಕಿಕೊಳ್ಳದಲ್ಲಿ ಮಳೆನೀರು ಸಂಗ್ರಹಗೊಂಡಿದೆ. ಜತೆಗೆ ಚಿಕ್ಕಬೆಣಕಲ್‌, ಆಗೋಲಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರು ಹೂಳೆತ್ತಿದ್ದ ಹಳ್ಳಗಳು, ನಾಲಾಗಳು ಮಳೆ ನೀರಿನಿಂದ ತುಂಬಿಕೊಂಡು ಮೈದುಂಬಿ ಹರಿಯುತ್ತಿವೆ.ವಿಠಲಾಪುರದಲ್ಲಿ ಕಂದಕು ಬದುವುಗಳಲ್ಲಿ ಮಳೆ ನೀರು ಇಂಗಿಸಲಾಗಿದ್ದು, ಮಣ್ಣಿನ ಸವಕಳಿ ತಡೆಯಲಾಗಿದೆ.

ಅಮೃತ ಸರೋವರ: ಕಳೆದೆರೆಡು ವರ್ಷಗಳ ಹಿಂದೆ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ  ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳನ್ನು ಅಮೃತ ಸರೋವರಗಳನ್ನಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ವೇಳೆ ಕೆರೆಗಳ ಹೂಳು ತೆಗೆದು
ಒಡ್ಡು, ಪಿಚ್ಚಿಂಗ್‌ ಮಾಡಿ ಅಭಿವೃದ್ಧಿ ಸ್ಪರ್ಶ ನೀಡಲಾಗಿತ್ತು. ಅಲ್ಲದೇ ಈ ಕೆರೆಗಳಲ್ಲಿ 2023-2024, 2024-25 ನೇ ಸಾಲಿನಲ್ಲಿ ಕೂಲಿಕಾರರು ಹೂಳೆತ್ತುವ ಕೆಲಸ ಮಾಡಿದ್ದರಿಂದ ಸದ್ಯ ಅಪಾರ ಪ್ರಮಾಣದ ನೀರು ಕೆರೆಯಲ್ಲಿ ಸಂಗ್ರಹಗೊಂಡಿದೆ. ಕೆರೆಗಳ ಸುತ್ತಲಿನ ರೈತರ ಜಮೀನುಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅನುಕೂಲವಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.

ಬರಗಾಲದಿಂದ ನೀರಿಗೆ ಹಾಹಾಕಾರ ಅನುಭವಿಸಿದ್ದ ಮೂಕ ಪ್ರಾಣಿಗಳು ನಿಟ್ಟುಸಿರು ಬಿಟ್ಟಿವೆ. ದನಕರ, ಕಾಡುಪ್ರಾಣಿಗಳಿಗೂ ಕುಡಿವ ನೀರಿನ ನೆಲೆ ಸಿಕ್ಕಂತಾಗಿದೆ. ಪ್ರಸಕ್ತ 2024-25 ನೇ ಸಾಲಿನಲ್ಲಿ ತಾಲೂಕಿನ 18 ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರಿಗೆ ನೀರಿನ ಮೂಲಗಳಾದ ಕೆರೆ, ನಾಲಾ, ಹಳ್ಳದ ಹೂಳೆತ್ತುವ ಕೆಲಸ ಹೆಚ್ಚಾಗಿ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 5,03,249 ಮಾನವ ದಿನಗಳ ಸೃಷ್ಟಿಸಿ ಕೂಲಿ ಕೆಲಸ ಕಲ್ಪಿಸಲಾಗಿದೆ.

Advertisement

ಮುಂಗಾರು ಮಳೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ರಾಮೀಣ ಜನರಿಗೆ ಉದ್ಯೋಗ ನೀಡುವಾಗ ಕೆರೆಯ ಹೂಳು ತೆಗೆಯಿಸಿದ್ದರಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ನರೇಗಾ ಕೂಲಿಕಾರರು ಹೂಳೆತ್ತಿದ್ದ ಕೆರೆಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ಇದರಿಂದ ಜಾನುವಾರು, ಕಾಡುಪ್ರಾಣಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಗುಡ್ಡದಿಂದ ವ್ಯರ್ಥವಾಗಿ ಹರಿಯುತ್ತಿದ್ದ ಮಳೆ ನೀರನ್ನು ಕೆರೆಯಲ್ಲಿ ಸಂಗ್ರಹಿಸುವ ಮಹತ್ಕಾರ್ಯ ಮಾಡಲಾಗಿದೆ. ಅಮೃತ ಸರೋವರಗಳಿಗೆ ಇದೀಗ ಜೀವಕಳೆ ಬಂದಿದೆ.
ರಾಹುಲ್‌ ರತ್ನಂ ಪಾಂಡೆಯ, ಸಿಇಒ, ಕೊಪ್ಪಳ

ಮಹಾತ್ಮ ಗಾಂ ಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಂದ ಕೆರೆ, ನಾಲಾಗಳ ಹೂಳೆತ್ತಲು ಹೆಚ್ಚು ಒತ್ತು ನೀಡಲಾಗಿತ್ತು. ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದುದರಿಂದ ಕೆರೆ, ನಾಲಾಗಳು ತುಂಬಿ ಹರಿಯುತ್ತಿದ್ದು, ಅಂತರ್ಜಲ ವೃದ್ಧಿಗೆ ಅನುಕೂಲವಾಗಿದೆ.
*ಲಕ್ಷ್ಮೀದೇವಿ, ತಾಪಂ ಇಒ, ಗಂಗಾವತಿ

ಮೂಕ ಪ್ರಾಣಿಗಳು ಕುಡಿಯಲು ನೀರಿಲ್ಲದೇ ಪರದಾಡಬೇಕಿತ್ತು. ಸತತ ಮಳೆಯಿಂದ ಕೆರೆ, ಹಳ್ಳಗಳಲ್ಲಿ ನೀರು ಸಂಗ್ರಹಗೊಂಡಿದ್ದು, ತುಂಬಾ ಸಂತಸ ತಂದಿದೆ. ಕುರಿಗಳಿಗೆ ನೀರು ಹಾಗೂ ಮೇವಿಗಾಗಿ ಅಲೆಯುವುದು ತಪ್ಪುತ್ತದೆ.
*ರಾಯಪ್ಪ ಅಲೇಮಾರಿ,ಕುರಿಗಾಹಿ ಸಿದ್ದಿಕೇರಿ

*ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next