Advertisement

ಕೃಷಿಯನ್ನೇ ನಂಬಿದ ಅನ್ನದಾತರ ಬದುಕು ಮೂರಾಬಟ್ಟೆ

12:57 PM Mar 05, 2020 | Naveen |

ಗಂಗಾವತಿ: ಅಕ್ರಮ ಚಟುವಟಕೆ ಕಾರಣಕ್ಕಾಗಿ ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್‌ ಸೇರಿದಂತೆ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶದಂತೆ ಎರಡು ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ರೆಸಾರ್ಟ್‌ ಅನಧಿಕೃತ ಕಟ್ಟಡ, ಇಲ್ಲಿದ್ದ ಕೃಷಿಕರ ಮನೆಗಳನ್ನು ಹಂಪಿ ಅಭಿವೃದ್ಧಿ ಪ್ರಾ ಧಿಕಾರದ ನೇತೃತ್ವದಲ್ಲಿ ಜಿಲ್ಲಾಡಳಿತ ಸಂಪೂರ್ಣ ನೆಲಸಮ ಮಾಡಿದೆ. ಆದರೆ ಕೃಷಿಯನ್ನೇ ನಂಬಿದ ಇಲ್ಲಿನ ಅನ್ನದಾತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

Advertisement

ಹಂಪಿ ಸುತ್ತಲಿನ ಸ್ಮಾರಕಗಳ ಸಂರಕ್ಷಣೆ ದೃಷ್ಟಿಯಿಂದ ಗಡ್ಡಿಯಲ್ಲಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ನೀಡಿದ ಆದೇಶ ಜಿಲ್ಲಾಡಳಿತ ಪಾಲನೆ ಮಾಡಿದೆ. ಈ ಮಧ್ಯೆ 1960 ದಶಕದಿಂದಲೂ ಗಡ್ಡಿಯಲ್ಲಿ ಕೃಷಿ ವ್ಯವಸಾಯ ಮಾಡಿಕೊಂಡಿದ್ದ ಕೃಷಿಕರ ಮನೆಗಳನ್ನೂ ಸಹ ನೆಲಕ್ಕುರುಳಿಸಿದೆ. ಹೀಗಾಗಿ ರೈತರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

ವಿರೂಪಾಪೂರಗಡ್ಡಿಯಲ್ಲಿ ಎರಡು ಭಾಗಗಳಿದ್ದು ಹಂಪಿಗೆ ಹೊಂದಿಕೊಂಡರುವ ಗದ್ದೆಗಳ ಮಾಲೀಕರು ತಮ್ಮ ಗದ್ದೆಯ ಸ್ವಲ್ಪ ಭಾಗದಲ್ಲಿ ರೆಸಾರ್ಟ್‌ ರೂಂಗಳನ್ನು ನಿರ್ಮಿಸಿಕೊಂಡು ಕಳೆದ 30 ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದರು. ಹನುಮನಹಳ್ಳಿ ಕಡೆ ಇರುವ ಭೂಮಿಯಲ್ಲಿ ಕೃಷಿಕರು ಕೃಷಿ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಹಂಪಿ ಕಡೆ ಇರುವ ರೆಸಾರ್ಟ್‌ಗಳಲ್ಲಿ ಕೆಲವರು ಅನೈತಿಕ ಚಟುವಟಕೆ ಮಾಡುತ್ತಿರುವ ಬಗ್ಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ವರದಿ ಸಂಗ್ರಹಿಸಿ ತೆರವು ಕಾರ್ಯಕ್ಕೆ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ರೆಸಾರ್ಟ್‌ ಮಾಲೀಕರು ಕೋಟ್ಯಂತರ ರೂ. ಖರ್ಚು ಮಾಡಿ ಹೈಕೋರ್ಟ್‌ -ಸುಪ್ರೀಂಕೋರ್ಟಿಗೆ ಹೋಗಿ ಹಂಪಿ ಅಭಿವೃದ್ಧಿ ಪ್ರಾ ಧಿಕಾರದ ಅಸ್ತಿತ್ವದ ಕುರಿತು ವಿಚಾರಿಸುವಂತೆ ಮನವಿ ಮಾಡಿದ್ದರು.

ಸಣ್ಣ ಪುಟ್ಟ ಹೋಟೆಲ್‌ ತೆರವು: ತಡೆಯಾಜ್ಞೆ ಮೂಲಕ 30 ವರ್ಷಗಳಿಂದ ರೆಸಾರ್ಟ್‌ ವ್ಯವಹಾರ ನಡೆಸುತ್ತಿದ್ದರು. ಪ್ರತಿ ವರ್ಷ ನ್ಯಾಯಾಲಯದಲ್ಲಿರುವ ರೆಸಾರ್ಟ್‌ ಹೊರತುಪಡಿಸಿ ಗಡ್ಡಿ ಹಾಗೂ ಸುತ್ತಲಿನ ಗ್ರಾಮಗಳನ್ನು ಪ್ರಾಧಿ ಕಾರದ ಅಧಿಕಾರಿಗಳು ಸಣ್ಣ ಪುಟ್ಟ ಹೋಟೆಲ್‌ಗ‌ಳನ್ನು ತೆರವು ಮಾಡಿಸುತ್ತಿದ್ದರು. ಫೆ.11ರಂದು ಸುಪ್ರೀಂಕೋರ್ಟಿನ ಆದೇಶ ಪ್ರಾ ಧಿಕಾರಕ್ಕೆ ಆನೆ ಬಲ ಬಂದಂತಾಗಿದ್ದು, ಕಳೆದೆರಡು ದಿನಗಳಿಂದ ಇಡೀ ಗಡ್ಡಿಯಲ್ಲಿರುವ ಎಲ್ಲ ರೆಸಾರ್ಟ್ ಗಳು, ಜನವಸತಿ ಮನೆಗಳನ್ನು ಸಂಪೂರ್ಣ ಕೆಡವಲಾಗಿದೆ. ಯಾವುದೇ ರೆಸಾರ್ಟ್‌ ವ್ಯವಹಾರ ಮಾಡದೇ ಕೇವಲ ಕೃಷಿ ಮಾಡುವವರ ಮನೆಗಳನ್ನು ಕೆಡವಿ ಹಾಕಲಾಗಿದ್ದು, ಕಳೆದ
1960ರಿಂದ ತಮ್ಮ ಗದ್ದೆಗಳಲ್ಲಿ ವಾಸ ಮಾಡುವವರ ಮನೆಗಳನ್ನು ಸಂರಕ್ಷಿಕೊಳ್ಳುವಲ್ಲಿ ಜನಪ್ರತಿನಿಧಿ ಗಳು ವಿಫಲರಾಗಿದ್ದಾರೆ. ಕೇವಲ ಕೃಷಿ ಮಾಡಿ ಬದುಕುತ್ತಿರುವವರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಭೇಟಿ ನೀಡದ ಜನಪ್ರತಿನಿಧಿಗಳು
ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಿರೂಪಾಪೂರಗಡ್ಡಿಯಲ್ಲಿರುವ ಅನಧಿಕೃತ ಕಟ್ಟಡ
ತೆರವು ಕಾರ್ಯ ಮುಕ್ತಾಯವಾಗಿದೆ. ರೆಸಾರ್ಟ್‌ ಮಾಲೀಕರು ಮತ್ತು ಕೇವಲ ಕೃಷಿ ಮಾಡಿ ಬದುಕು ನಡೆಸುತ್ತಿರುವವರು ಯಾವುದೇ ವ್ಯತ್ಯಾಸವಿಲ್ಲದೇ ಮನೆ-ರೆಸಾರ್ಟ್‌- ಹೋಟೆಲ್‌ ಕೆಡವಲಾಗಿದೆ. ಕೃಷಿಕರ ಮನೆ ರಿಯಾಯ್ತಿ ಕೊಡದೇ ಕೋರ್ಟಿನ ಆದೇಶ ತೋರಿಸಿ ಕೃಷಿಕರ ಮನೆಗಳನ್ನೂ ಕೆಡವಲಾಗಿದೆ. ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ವಿರೂಪಾಪೂರಗಡ್ಡಿ ನಿವಾಸಿಗಳನ್ನು ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು ಭೇಟಿ ಮಾಡಿ ಪರ್ಯಾಯ ವ್ಯವಸ್ಥೆ ಕುರಿತು ಭರವಸೆ ನೀಡಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.

Advertisement

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next