ಗಂಗಾವತಿ: ತುಂಗಭದ್ರಾ ಯೋಜನೆಯ ಕಾಡಾ ಅಧ್ಯಕ್ಷ ಸ್ಥಾನ ಮತ್ತೂಮ್ಮೆ ಕೊಪ್ಪಳ ಜಿಲ್ಲೆಯಿಂದ ಕೈತಪ್ಪಿದ್ದು, ಅಧಿಕಾರ ವಂಚಿತರ ಪಾಲಾಗಿದೆ.
Advertisement
ತುಂಗಭದ್ರಾ ಡ್ಯಾಂ ಹೂಳು ಸೇರಿ ಹಲವಾರು ಸಮಸ್ಯೆಗಳಿರುವ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿರುವ ನೀರಾವರಿ ತಜ್ಞ ಅಥವಾ ರೈತ ಹೋರಾಟಗಾರರಿಗೆ ಕಾಡಾ ಅಧ್ಯಕ್ಷ ಸ್ಥಾನವನ್ನು ವಹಿಸುವ ಮೂಲಕ ಡ್ಯಾಂ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಹುದಾಗಿತ್ತು. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಸಮರ್ಥ ರೈತ ಹೋರಾಟಗಾರರು ಮತ್ತು ನೀರಾವರಿ ತಜ್ಞರಿದ್ದರೂ ಸರಕಾರ ಮಾತ್ರ ಕಾಡಾ ಅಧ್ಯಕ್ಷ ಸ್ಥಾನವನ್ನು ಉಪಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೀಡಲಾಗಿದೆ.
Related Articles
Advertisement
ಕಾಂಗ್ರೆಸ್, ಸಮಿಶ್ರ ಹಾಗೂ ಸದ್ಯ ಬಿಜೆಪಿ ಸರಕಾರ ಅವಧಿಯಲ್ಲಿ ರಾಯಚೂರು ಜಿಲ್ಲೆಯವರಿಗೆ ಆದ್ಯತೆ ನೀಡಲಾಗಿದೆ. ರಾಜ್ಯ ಸರಕಾರ ತುಂಗಭದ್ರಾ ಕಾಡಾವನ್ನು ಅನುಷ್ಠಾನ ಮಾಡಿದ ನಂತರ ಕೊಪ್ಪಳ ಜಿಲ್ಲೆಯ ಶ್ರೀರಂಗದೇವರಾಯಲು, ಎಚ್.ಆರ್. ಶ್ರೀನಾಥ, ಎಚ್. ಗಿರೇಗೌಡ ಮಾತ್ರ ಅಧ್ಯಕ್ಷರಾಗಿದ್ದು, ಹೆಚ್ಚಿನ ಅವಕಾಶ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸರಕಾರ ಆದ್ಯತೆ ನೀಡುತ್ತಿವೆ. ಈ ಮೂಲಕ ಕೊಪ್ಪಳ ಜಿಲ್ಲೆಯ ರೈತ ಮುಖಂಡರನ್ನು ಮತ್ತು ನೀರಾವರಿ ತಜ್ಞರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಕಾಡಾ ಅಧ್ಯಕ್ಷ ಸ್ಥಾನಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ರೈತ ಮುಖಂಡ ತಿಪ್ಪೇರುದ್ರಸ್ವಾಮಿ, ಎಚ್. ಗಿರೇಗೌಡ, ಶಾಸಕರಾದ ದಡೇಸುಗೂರು ಬಸವರಾಜ, ಪರಣ್ಣ ಮುನವಳ್ಳಿ, ಬಿಲ್ಗಾರ ನಾಗರಾಜ ಸೇರಿ ಹಲವು ಮುಖಂಡರು ಪೈಪೋಟಿ ನಡೆಸಿದ್ದರು. ಆದರೆ ಮಸ್ಕಿ ಕ್ಷೇತ್ರದ ಬಸವನಗೌಡ ತುರ್ವಿಹಾಳ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ಲಭಿಸಿದೆ.
ಮುಂಬರುವ ಉಪಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಸನಗೌಡ ಅವರನ್ನು ಸಮಾಧಾನ ಪಡಿಸಲು ಕಾಡಾ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸನಗೌಡ ತುರ್ವಿಹಾಳ ಅಲ್ಪ ಮತಗಳಿಂದ ಪ್ರತಾಪಗೌಡ ಪಾಟೀಲ ವಿರುದ್ಧ ಸೋಲುಂಡಿದ್ದರು. ಅಚ್ಚುಕಟ್ಟು ಪ್ರದೇಶದ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡದೇ ಟಿಕೆಟ್ ವಂಚಿತರನ್ನು ತೃಪ್ತಿಪಡಿಸಲು ಕಾಡಾ ಅಧ್ಯಕ್ಷ ಸ್ಥಾನ ಬಳಕೆಯಾಗಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.