ಗಂಗಾವತಿ: ತುಂಗಭದ್ರಾ ಕಾಲುವೆಗಳಿಗೆ ಬುಧವಾರ ಬೆಳಗ್ಗೆ 9:00 ಗಂಟೆಯಿಂದ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂ ಒಳಹರಿವು ಹೆಚ್ಚಳವಾಗಿದೆ. ಬುಧವಾರ ಸಂಜೆ ವೇಳೆಗೆ ಡ್ಯಾಂ ಒಳಹರಿವು 50 ಸಾವಿರ ಕ್ಯೂಸೆಕ್ ದಾಟಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಮುಂಗಾರು ತಡವಾಗಿದ್ದರಿಂದ ಜುಲೈ ಕಳೆದರೂ ಡ್ಯಾಂಗೆ ಒಳಹರಿವು ಬಂದಿರಲಿಲ್ಲ. ಆಗಸ್ಟ್ ಮೊದಲ ವಾರದಲ್ಲಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಒಳಹರಿವು 18 ಸಾವಿರ ಕ್ಯೂಸೆಕ್‌ನಿಂದ ಸದ್ಯ 43 ಸಾವಿರ ಕ್ಯೂಸೆಕ್‌ವರೆಗೆ ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಆ. 15ರ ವೇಳೆಗೆ ಡ್ಯಾಂ ಭರ್ತಿಯಾಗುವ ಸಂಭವವಿದೆ. ಕಳೆದ ವರ್ಷವೂ ಡ್ಯಾಂ ಭರ್ತಿಯಾಗಿತ್ತು. ಆದರೆ ನೀರಿನ ಸರಿಯಾದ ನಿರ್ವಹಣೆ ಇಲ್ಲದೇ ನದಿ ಮತ್ತು ಕಾರ್ಖಾನೆಗಳಿಗೆ ನೀರನ್ನು ಕಳ್ಳತನದಿಂದ ಬಿಡಲಾಗಿತ್ತೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಭಾರಿ ಸಂಗ್ರಹವಾಗುವ ನೀರನ್ನು ಪೋಲಾಗದಂತೆ ಬಳಕೆ ಮಾಡಿ ಜತೆಗೆ ಡಿಸ್ಟಿಬ್ಯೂಟರಿಗಳ ಮೂಲಕ ನದಿಗೆ ನೀರು ಹರಿದು ಹೋಗದಂತೆ ತಡೆಯಬೇಕಾಗಿದೆ.
ಹಂತಹಂತವಾಗಿ ನೀರು: ಎಡದಂಡೆ ಕಾಲುವೆಗೆ ಬುಧವಾರ ಬೆಳಗಿನಿಂದ 250 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದ್ದು, ಎರಡು ತಾಸಿಗೊಮ್ಮೆ 100 ಕ್ಯೂಸೆಕ್ ನೀರಿನ ಪ್ರಮಾಣ ಹೆಚ್ಚಳ ಮಾಡಿ 3500 ಕ್ಯೂಸೆಕ್ ನೀರನ್ನು ಹರಿಸಿ ರಾಯಚೂರಿನ ಕೊನೆ ಭಾಗದ ರೈತರಿಗೆ ತಲುಪಿಸಲಾಗುತ್ತದೆ.
ತುಂಗಭದ್ರಾ ಡ್ಯಾಂ ಕಾಲುವೆಗಳಿಗೆ ಬುಧವಾರ ನೀರು ಹರಿಸಲಾಗಿದ್ದು, ತಾಲೂಕಿನ ಸಾಣಾಪೂರ ಎಡದಂಡೆ ಕಾಲುವೆಯಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಗಂಗಾಪೂಜೆ ನೆರವೇರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಪೂಜೆ ಸಲ್ಲಿಸಿ. ಡ್ಯಾಂನಲ್ಲಿ ನೀರು ಸಂಗ್ರಹವಾದ ತಕ್ಷಣ ಜಿಲ್ಲೆಯ ಸಂಸದರು, ಶಾಸಕರ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕಾಲುವೆಗಳಿಗೆ ನೀರು ಹರಿಸಿದ್ದಾರೆ. ಒಳಹರಿವು ಉತ್ತಮವಾಗಿದ್ದು ಡ್ಯಾಂ ಭರ್ತಿಯಾಗಲಿದೆ. ನೀರನ್ನು ಪೋಲು ಮಾಡದೇ ಬೇಸಿಗೆ ಬೆಳೆಗೂ ಉಳಿಸುವಂತೆ ರೈತರಲ್ಲಿ ಮನವಿ ಮಾಡಿದರು. ರೈತ ಹೋರಾಟಗಾರ ತಿಪ್ಪೇರುದ್ರಸ್ವಾಮಿ ಮಾತನಾಡಿ, ನಾಲ್ಕೈದು ವರ್ಷಗಳಿಂದ ರೈತರ ಸಂಕಷ್ಟ ತಿಳಿದು ಸಂಸದ, ಶಾಸಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗಿದೆ. ಕಾಂಗ್ರೆಸ್‌ನವರ ಬೆದರಿಕೆಗೆ ಹೆದರುವ ಜಾಯಮಾನ ಬಿಎಸ್‌ವೈಗೆ ಇಲ್ಲ. ರೈತರ ಹಿತಕ್ಕಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ ಎಂದರು. ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಬಿಜೆಪಿ ಮುಖಂಡರಾದ ದುರುಗಪ್ಪ ಆಗೋಲಿ, ಗೌರೀಶ ಬಾಗೋಡಿ ಮತ್ತು ಹೊನ್ನಪ್ಪ ಇದ್ದರು.