Advertisement
ಸುಮಾರು 33 ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹವಾಗಿರುವ ಕಾರಣ ಜಲಾಶಯದಲ್ಲಿ ಎರಡು ಬೆಳೆಗಾಗುವಷ್ಟು ನೀರನ್ನು ಸಂಗ್ರಹಿಸಲು ಆಗುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರಿನಲ್ಲಿ ಒಂದೇ ಬೆಳೆ ಬೆಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತುಂಗಭದ್ರಾ ಜಲಾಶಯ 123 ಟಿಎಂಸಿ ಅಡಿ ನೀರಿನ ಸಂಗ್ರಹ ಸಾರ್ಮಥ್ಯ ಹೊಂದಿದ್ದು, ಇದರಲ್ಲಿ ಹೂಳಿನ ಪರಿಣಾಮ ನಾಲ್ಕೈದು ವರ್ಷಗಳಿಂದ 97 ಟಿಎಂಸಿ ಅಡಿಗೂ ಕಡಿಮೆ ನೀರು ಸಂಗ್ರಹವಾಗುತ್ತಿದೆ. ಹೂಳನ್ನು ತೆಗೆಸುವ ಕುರಿತು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅನೇಕ ಬಾರಿ ಭರವಸೆ ಮತ್ತು ಹೋರಾಟ ಮಾಡುವ ನೆಪದಲ್ಲಿ ಜನರಿಂದ ಮತಗಳನ್ನು ಪಡೆದಿವೆ. ಅಧಿಕಾರಕ್ಕೆ ಬಂದ ನಂತರ ಹೂಳಿನ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರ ಮಂಡನೆ ಮಾಡಿದ ಬಜೆಟ್‌ಗಳಲ್ಲಿಯೂ ಹೂಳಿನ ಸಮಸ್ಯೆ ನಿವಾರಣೆಗೆ ಪ್ರಸ್ತಾಪಿಸಿಲ್ಲ. 2012ರಲ್ಲಿ ತಜ್ಞರ ಸಮಿತಿ ಹೂಳು ತೆಗೆಯುವುದು ಅವೈಜ್ಞಾನಿಕ. ಇದರ ಬದಲಿಗೆ ಮಳೆಗಾಲದಲ್ಲಿ ಪೋಲಾಗುವ ನೀರನ್ನು ಸಮಾನಾಂತರ ಜಲಾಶಯ ನಿರ್ಮಿಸುವ ಸಂಗ್ರಹಿಸಬೇಕು. ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆರೆ, ಕಟ್ಟೆಗಳನ್ನು ತುಂಬಿಸಿ ಬೇಸಿಗೆಯಲ್ಲಿ ಸಂಗ್ರಹಿಸಿದ ನೀರನ್ನು ಬಳಕೆ ಮಾಡಿಕೊಳ್ಳಲು ವರದಿಯಲ್ಲಿ ಸಲಹೆ ನೀಡಲಾಗಿದೆ. ಅದರಂತೆ ಕನಕಗಿರಿ ತಾಲೂಕಿನ ನವಲಿ ಗ್ರಾಮದ ಹತ್ತಿರ 37 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಲು ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ವರದಿ ಸಿದ್ಧಪಡಿಸಲಾಗಿದೆ. ತುಂಗಭದ್ರಾ ಜಲಾಶಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸಂಬಂಧಿಸಿರುವುದರಿಂದ ಮೂರು ರಾಜ್ಯಗಳ ಒಪ್ಪಿಗೆ ಅಗತ್ಯವಾಗಿದೆ. ರಾಜ್ಯ ಸರಕಾರ ಮೂರು ರಾಜ್ಯಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ಕರೆದು ಸಮನಾಂತರ ಜಲಾಶಯ ನಿರ್ಮಾಣ ಕುರಿತು ಮಾತುಕತೆ ನಡೆಸಬೇಕು. ಕಳೆದ 10 ವರ್ಷಗಳಿಂದ ಸಮಾಂತರ ಜಲಾಶಯದ ಕುರಿತು ಮುಖಂಡರು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಕಾರ್ಯ ಮಾಡುತ್ತಿಲ್ಲ. ಪ್ರತಿ ಬಜೆಟ್ ಮಂಡನೆ ವೇಳೆ ಅಚ್ಚುಕಟ್ಟು ರೈತರು ಹೂಳು ಮತ್ತು ಸಮನಾಂತರ ಜಲಾಶಯ ನಿರ್ಮಾಣದ ಕುರಿತು ಆಶಾಭಾವ ಹೊಂದಿರುತ್ತಾರೆ. ನಂತರ ನಿರಾಸೆಯಾಗುತ್ತಾರೆ.
•ಕನಕರೆಡ್ಡಿ ಕುಮಾರಪ್ಪ, ಸಿಂಗನಾಳ ರೈತ