ಗಂಗಾವತಿ: ಕೋವಿಡ್-19 ಹಿನ್ನೆಲೆಯಲ್ಲಿ ಹಳೇ ಬೈಕ್ ಮಾರಾಟ ಮಾಡುವ ದಂಧೆಯನ್ನು ನಿಲ್ಲಿಸುವಂತೆ ಸಂಡೇ ಮಾರ್ಕೆಟ್ ವ್ಯವಹಾರ ನಡೆಸುವವರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಭಾನುವಾರ ಸೇರಿದಂತೆ ಪ್ರತಿದಿನವೂ ಹಳೆ ಬೈಕ್ ಗಳ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.
ನಾಮಕಾವಸ್ತೆ ಎನ್ನುವಂತೆ ನಗರಸಭೆ ಮತ್ತು ಪೊಲೀಸ್ ಇಲಾಖೆ ಒಂದೆರಡು ಕೇಸ್ ಮಾಡಿ ಬೈಕ್ ಮಾರಾಟ ಮಾಡುವವರನ್ನು ಬಿಟ್ಟಿದ್ದು ಜುಲೈನಗರ ಮತ್ತು ಬೈಪಾಸ್ ರಸ್ತೆಯುದ್ದಕ್ಕೂ ಇರುವ ಗ್ಯಾರೇಜ್ ಗಳಲ್ಲಿ ಹಳೆ ಬೈಕ್ ಗಳ ಮಾರಾಟ ಮಾಡಲಾಗುತ್ತಿದೆ.
ಕೋವಿಡ್ ಎಚ್ಚರಿಕೆಗೆ ಡೊಂಟ್ ಕೇರ್: ಕೋವಿಡ್ ರೋಗ ಹರಡದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಗುಂಪು ಸೇರಿದಂತೆ ಕ್ರಮ ವಹಿಸಿದರೂ ಸಂಡೇ ಮಾರ್ಕೆಟ್ ವ್ಯವಹಾರ ನಡೆಸುವವರು ಡೋಂಟ್ ಕೇರ್ ಎಂದು ತಮ್ಮ ಗ್ಯಾರೇಜ್ ಗಳಲ್ಲಿ ನಿತ್ಯವೂ ಬೈಕ್ ಗಳ ಮಾರಾಟ ನಡೆಸುತ್ತಿರುವುದರಿಂದ ಕಂಪ್ಲಿ, ಬಳ್ಳಾರಿ, ಸಿಂಧನೂರು, ಜಿಂದಾಲ್, ತೋರಣಗಲ್, ದಾವಣಗೆರೆ, ಹುಬ್ಬಳ್ಳಿ, ಕಲಬುರ್ಗಿ ಸೇರಿ ಬೇರೆ ಊರುಗಳಿಂದ ಬೈಕ್ ಖರೀದಿದಾರರು ಗಂಗಾವತಿಗೆ ಆಗಮಿಸುತ್ತಿದ್ದು ಇದರಿಂದ ಸೋಂಕು ಹರಡುವ ಭೀತಿಯುಂಟಾಗಿದೆ.
ಹಳೆಯ ಬೈಕ್ ಗಳಿಗೆ ಡಿಮ್ಯಾಂಡ್: ಬೈಕ್ ತಯಾರಿಕಾ ಕಂಪನಿಗಳು ಬಿಎಸ್ 4 ಬೈಕ್ ತಯಾರಿಸುವುದನ್ನು ನಿಲ್ಲಿಸಿರುವುದರಿಂದ ಹಳೆಯ ಬೈಕ್ ಗಳನ್ನು ದಲ್ಲಾಳಿಗಳು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಕೆಲವರು ಮಾತ್ರ ಬೈಕ್ ರಿಪೇರಿ ಮಾಡುವ ಪರವಾನಿಗೆ ಪಡೆದಿದ್ದು ಅಕ್ರಮವಾಗಿ ಬೈಕ್ ವ್ಯಾಪಾರ ನಡೆಸುವ ಮೂಲಕ ಅಕ್ರಮವೆಸಗಿ ನಗರಸಭೆಗೆ ತೆರಿಗೆ ವಂಚನೆ ಮಾಡಲಾಗುತ್ತಿದೆ.
ನಗರಸಭೆ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನಕ್ರಮ ಕೈಗೊಳ್ಳುವ ಮೂಲಕ ಅಕ್ರಮ ದಂಧೆಗೆ ಕಡಿವಾಣ ಹಾಕಲು ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.