ಗಂಗಾವತಿ: ಕೋವಿಡ್-19 ವೈರಸ್ ಹರಡದಂತೆ ಜನತೆ ಸಾಮೂಹಿಕವಾಗಿ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಈ ನಿಯಮ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಅಲಲ್ಲಿ ಮಸೀದಿಗಳಲ್ಲಿ ನಮಾಜ್ ಮಾಡುವುದು ಕಂಡುಬರುತ್ತಿದ್ದು, ಕಠಿಣ ಕ್ರಮ ಅನಿವಾರ್ಯವಾಗಿದೆ. ಜನರು ಮನೆಯಲ್ಲಿ ಭೌತಿಕ ಅಂತರ ಕಾಪಾಡಿಕೊಂಡು ನಮಾಜ್ ಮಾಡುವಂತೆ ಡಿವೈಎಸ್ ಪಿ ಡಾ.ಚಂದ್ರಶೇಖರ ಹೇಳಿದರು.
ಪೊಲೀಸ್ ಠಾಣೆ ಆವರಣದಲ್ಲಿ ರವಿವಾರ ಜರುಗಿದ ವಿವಿಧ ಸಮಾಜಗಳ ಮುಖಂಡ ಸಭೆಯಲ್ಲಿ ಮಾತನಾಡಿದರು.
ಕೋವಿಡ್-19 ವೈರಸ್ ಹರಡದಂತೆ ಪ್ರತಿಯೊಬ್ಬರು ಭೌತಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ. ಮಸೀದಿಗಳಲ್ಲಿ ಮುಂದಿನ ಬಾಗಿಲಿಗೆ ಬೀಗ ಹಾಕಿ ಹಿಂದಿನ ಬಾಗಿಲಿನ ಮೂಲಕ ಮಸೀದಿ ಒಳಗಡೆ ನಮಾಜ್ ಮಾಡುವ ಕುರಿತು ದೂರುಗಳಿದ್ದು ಇಂತಹ ಕೃತ್ಯವೆಸಗುವ ಮೂಲಕ ಸೋಂಕು ಹರಡಿದಂತಾಗುತ್ತದೆ.ಇದರಿಂದ ವೈಯಕ್ತಿಕ ಮತ್ತು ಇಡೀ ಕುಟುಂಬಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಸರಕಾರದ ಆದೇಶ ಪಾಲನೆ ಮಾಡಲೇ ಬೇಕೆಂದು ತಾಕೀತು ಮಾಡಿದರು.
ಸಭೆಯಲ್ಲಿ ತಹಶೀಲ್ದಾರ್ ಚಂದ್ರಕಾಂತ, ಇಒ ಡಾ.ಮೋಹನ ಕುಮಾರ, ಪೌರಾಯುಕ್ತ ಶೇಖರಪ್ಪ ಈಳಿಗೇರ್, ಪೊಲೀಸ್ ಅಧಿಕಾರಿಗಳಾದ ವೆಂಕಟಸ್ವಾಮಿ, ಸುರೇಶ್ ತಳವಾರ, ಅವಿನಾಶ್, ನಾಗರಾಜ ಸೇರಿ ವಿವಿಧ ಸಮಾಜದ ಮುಖಂಡರಿದ್ದರು.