Advertisement

ಗಂಗಾವತಿ: ನಗರಸಭೆ ಬಜೆಟ್; ಪೂರ್ವಭಾವಿ ಸಭೆ

10:47 AM Jan 17, 2023 | Team Udayavani |

ಗಂಗಾವತಿ: ವಾಣಿಜ್ಯವಾಗಿ ಬೆಳೆದಿರುವ ಗಂಗಾವತಿ ನಗರದ ಆದಾಯ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರಬೇಕಿತ್ತು. ತೆರಿಗೆ ಪಾವತಿಸುವ ನಿಯಮಗಳ ಉಲ್ಲಂಘನೆ ಇಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಶೇ.60-70 ರಷ್ಟು ಮಾತ್ರ ತೆರಿಗೆ ವಸೂಲಿಯಾಗುತ್ತಿದ್ದು, ರೈಸ್‌ಮಿಲ್, ಲಾಡ್ಜ್, ಚಿತ್ರಮಂದಿರ, ಖಾಸಗಿ ಶಾಲಾ-ಕಾಲೇಜುಗಳ ಕೋಟ್ಯಾಂತರ ರೂ. ತೆರಿಗೆ ಬಾಕಿ ಉಳಿಸಿರುವ ಕುರಿತು ಧಾರವಾಡ ಹೈಕೋರ್ಟ್ ನಲ್ಲಿ ವ್ಯಾಜ್ಯ ಪರಿಹಾರವಾಗಿದ್ದು, ಇನ್ನೂ ಮುಂದೆ ತೆರಿಗೆ ವಸೂಲಿಗೆ ತಂಡಗಳನ್ನು ರಚಿಸಿ ವಸೂಲಿಗೆ ಕಟ್ಟುನಿಟ್ಟಿನಿಂದ ಮಾಡಲಾಗುತ್ತದೆ ಎಂದು ಪೌರಾಯುಕ್ತ ವಿರೂಪಾಕ್ಷ ಮೂರ್ತಿ ತಿಳಿಸಿದರು.

Advertisement

ಅವರು ನಗರಸಭೆಯ ಸಭಾಂಗಣದಲ್ಲಿ ಬಜೆಟ್ ಪೂರ್ವ ಸಲಹಾ ಸಭೆಯಲ್ಲಿ ಪತ್ರಕರ್ತರು ಸಾರ್ವಜನಿಕರು ಮತ್ತು ನಗರಸಭೆ ಹಾಲಿ ಮಾಜಿ ಸದಸ್ಯರ ಸಲಹೆ ಸ್ವೀಕರಿಸಿ ಮಾತನಾಡಿದರು.

ನಗರದಲ್ಲಿ 2021ರ ಜನಗಣತಿ ಪ್ರಕಾರ 29 ಸಾವಿರ ಆಸ್ತಿಗಳಿದ್ದು, ಅಧಿಕೃತ ಲೇಔಟ್‌ಗಳಲ್ಲಿ ಸುಮಾರು 15 ಸಾವಿರ ಆಸ್ತಿಗಳಿವೆ ಅವುಗಳಿಂದ ತೆರಿಗೆ ವಸೂಲಿ ಮಾಡಬಹುದಾಗಿದೆ. ಸರಕಾರದ ನಿಯಮಾನುಸಾರ ಅನಧಿಕೃತ ಲೇಔಟ್‌ಗಳಲ್ಲಿ ತೆರಿಗೆ ವಸೂಲಿಗೆ ಕ್ರಮ ವಹಿಸಲಾಗುತ್ತದೆ. ಶೀಘ್ರವೇ ನಗರಸಭೆ ಮತ್ತು ನಗರಯೋಜನಾ ಪ್ರಾಧಿಕಾರದ ಅಧಿಕಾರಿಗಳು ಜಂಟಿಯಾಗಿ ಇಡೀ ನಗರವನ್ನು ಸರ್ವೇ ಮಾಡಿ ಅಧಿಕೃತ, ಅನಧಿಕೃತ ಆಸ್ತಿಗಳ ಪತ್ತೆ ಕಾರ್ಯ ಮಾಡಲಾಗುತ್ತದೆ ಎಂದರು.

ನಗರಸಭೆಯ ಇನ್ನೊಂದು ಆದಾಯದ ಪ್ರಮುಖ ಮೂಲ ವಾಣಿಜ್ಯ ಲೈಸೆನ್ಸ್ (ಟ್ರೇಡ್) ಕೇವಲ ಶೇ.20 ರಷ್ಟಿದ್ದು ಶೇ.80 ರಷ್ಟು ವಾಣಿಜ್ಯ ವ್ಯವಹಾರ ಲೈಸೆನ್ಸ್ ಇಲ್ಲದೇ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳ ಕಚೇರಿ ಮತ್ತು ನೌಕರರ ವಸತಿ ಗೃಹಗಳಲ್ಲಿ ನಗರಸಭೆ ನಳ ಹಾಗೂ ಸ್ವಚ್ಛತೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಕೋಟ್ಯಾಂತರ ರೂ. ತೆರಿಗೆ ಬಾಕಿ ಇದ್ದು ವಸೂಲಿಗೆ ಕ್ರಮ ವಹಿಸಲಾಗುತ್ತದೆ ಎಂದರು.

ಜಾಹೀರಾತು ಫಲಕ ಮತ್ತು ಬಂಟಿಂಗ್ಸ್, ನಿಂದ ಇದುವರೆಗೂ ಆದಾಯ ಸೋರಿಕೆಯಾಗುತ್ತಿತ್ತು. ಸರಕಾರದ ಕಟ್ಟುನಿಟ್ಟಿನ ನಿಯಮ ಪಾಲನೆ ಮೂಲಕ ಇವುಗಳಿಂದ ಆದಾಯವನ್ನು ನಿರೀಕ್ಷೆ ಮಾಡಲಾಗುತ್ತದೆ. ಬ್ಯಾರ‍್ಸ್ ಮತ್ತು ಬಂಟಿಂಗ್ಸ್ ಪ್ರಿಂಟ್ ಮಾಡುವ ಮುಂಚೆ ನಗರಸಭೆಯ ಪರವಾನಿಗೆಯನ್ನು ನೋಡಬೇಕು ಇಲ್ಲದಿದ್ದರೆ ಮುದ್ರಣ ಮಾಡುವವರ ವಿರುದ್ಧ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

Advertisement

ಕೆಲವರು ರೈಸ್ ಮಿಲ್ ಹಾಗೂ ಚಿತ್ರಮಂದಿರಗಳನ್ನು ಮಾಲ್ ಹಾಗೂ ಗೋಡೌನಗಳಾಗಿ ಪರಿವರ್ತಿಸುತ್ತಿದ್ದು, ಇದಕ್ಕೆ ನಗರಸಭೆ ಪರವಾನಿಗೆ ಅಗತ್ಯವಾಗಿದ್ದು ನಿಯಮ ಉಲ್ಲಂಘಿಸಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುತ್ತದೆ ಎಂದರು.

ಅಧಿಕೃತ ಲೇಔಟ್‌ಗಳಲ್ಲಿ ಶೇ.100 ರಷ್ಟು ಅಭಿವೃದ್ಧಿ ಮಾಡಿದವರಿಗೆ ಎಲ್ಲಾ ನಿವೇಶನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಅನಧಿಕೃತ ಲೇಔಟ್‌ಗಳ ನಿವೇಶನಗಳನ್ನು 20 ರೂ.ಗಳ ಬಾಂಡ್ ಮೇಲೆ ನೊಂದಣಿ ಮಾಡಿದ್ದರೂ ಖಾತೆ ಮಾಡಲಾಗಿದ್ದು ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

ಇನ್ನೂ ಅಧಿಕೃತ ಲೇಔಟ್ ಗಳಲ್ಲಿ ಶೇ.100 ರಷ್ಟು ಅಭಿವೃದ್ಧಿ ಮಾಡದೇ ಇದ್ದರೂ ನಗರಸಭೆಯಲ್ಲಿ ಖಾತೆ ಮಾಡಲಾಗಿದೆ. ಇಂತಹ ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುತ್ತದೆ. ಮಳಿಗೆ, ಬಾಡಿಗೆ, ಟ್ರೇಡ್ ಲೈಸೆನ್ಸ್, ನೀರಿನ ಕರ, ಮನೆ ನಿರ್ಮಾಣ ತೆರಿಗೆ, ಸೇರಿ ಒಟ್ಟಾರೆ ನಗರಸಭೆಗೆ ವಾರ್ಷಿಕ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸಲಹೆಗಳು ಬಂದಿದ್ದು ಆಡಳಿತ ಮಂಡಳಿಯ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಪೌರಾಯುಕ್ತ ವಿರೂಪಾಕ್ಷ ಮೂರ್ತಿ, ಸ್ಥಾಯಿ ಸಮಿತಿ ಚೇರಮನ್ ಜಬ್ಬಾರ್ ಖಾನ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಶಿವಪ್ಪ ಪೂಜಾರಿ, ಪತ್ರಕರ್ತರಾದ ಕೆ.ನಿಂಗಜ್ಜ, ಪ್ರಸನ್ನ ದೇಸಾಯಿ, ವೀರಾಪೂರ ಕೃಷ್ಣ, ಗಂಗಲ ತಿರುಪಾಲಯ್ಯ, ದೇವದಾನಂ, ನಗರಸಭೆ ಸದಸ್ಯರಾದ ಪರಶುರಾಮ ಮಡ್ಢೇರ, ವಾಸುದೇವ ನವಲಿ, ಉಮೇಶ ಸಿಂಗನಾಳ, ರಮೇಶ ಚೌಡ್ಕಿ, ಮೌಲಸಾಬ,ಮೊಹಮದ್ ಉಸ್ಮಾನ್ ಸೇರಿ ನಗರಸಭೆಯ ಕಂದಾಯ, ನೈರ್ಮಲ್ಯ, ಲೆಕ್ಕಪತ್ರ ಸೇರಿ ಹಲವು ವಿಭಾಗದ ಅಧಿಕಾರಿಗಳು ನೌಕರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next