ಗಂಗಾವತಿ: ನಗರಸಭೆಯ 30 ನೇ ವಾರ್ಡಿನ ಬಿಜೆಪಿ ಸದಸ್ಯೆ ಸುಚೇತಾ ಶಿರಿಗೇರಿ ನಿವಾಸಕ್ಕೆ ಸೋಮವಾರ ಬೆಳಗ್ಗೆ ಶಾಸಕ ಹಾಗೂ ಕೆಆರ್‌ಪಿ ಪಾರ್ಟಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿ ಉಪಹಾರ ಸೇವಿಸಿ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. ಇದರ ಬೆನ್ನೆಲ್ಲೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಶಿರಿಗೇರಿಯವರ ನಿವಾಸಕ್ಕೆ ತೆರಳಿ ಯಾವುದೇ ಕಾರಣಕ್ಕೂ ಬಿಜೆಪಿ ತ್ಯಜಿಸದಂತೆ ಮನವಿಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿಯೇ ಮುಂದುವರಿಲು ಸುಚೇತನ ಶಿರಿಗೇರಿ ನಿರ್ಧರಿಸಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು ಗೊಂದಲಕ್ಕೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.
ಮೊದಲು ಕೆಆರ್‌ಪಿ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನಗರಸಭೆ ಸದಸ್ಯೆ ಸುಚೇತ ಶಿರಿಗೇರಿ ಸೋಮವಾರ ಕೆಆರ್‌ಪಿ ಪಕ್ಷ ಸೇರ್ಪಡೆಗೊಂಡರು.ಶಾಸಕ ಗಾಲಿ ಗಾಲಿ ಜನಾರ್ದನ ರೆಡ್ಡಿ ಸುಚೆತಾ ಶಿರಿಗೇರಿ ಅವರನ್ನು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನಗರದ ರಾಜಕೀಯ ಚಟುವಟಿಕೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ಮುಖಂಡರಾದ ಪಂಪಾಪತಿ ಸಿಂಗನಾಳ, ಸಂಜಯ ಬೆಟಗೇರಿ, ಪ್ರಕಾಶ್ ರೆಡ್ಡಿ, ಕಾಶಿನಾಥ ಸಿರಿಗೆರೆ, ವೀರೇಶ್ ಬಲಕುಂದಿ, ಯಮನೂರು ಚೌಡಕಿ, ರಾಜೇಶ್ ರೆಡ್ಡಿ ಇದ್ದರು.
ಬಿಜೆಪಿ ಮುಖಂಡರ ಭೇಟಿ
ಸುಚೇತಾ ಶಿರಿಗೇರಿ ಕೆಆರ್ ಪಿ ಪಕ್ಷ ಸೇರ್ಪಡೆಯ ಸುದ್ದಿ ಹಿನ್ನೆಲೆಯಲ್ಲಿ ಶಿರಿಗೇರಿಯವರ ನಿವಾಸಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು, ನಗರಸಭೆ ಸದಸ್ಯರು ಹೋಗಿ ವಿಚಾರಿಸಿದಾಗ ನಮ್ಮ ವಾರ್ಡಿಗೆ ತಮ್ಮ ಬೆಂಬಲಿಗರೊಂದಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ವಾರ್ಡಿನ ಕೆಲ ಸಮಸ್ಯೆಗಳನ್ನು ಆಲಿಸಲು, ಹಾಗೇ ಅಭಿವೃದ್ಧಿ ವಿಷಯವಾಗಿ ನಮ್ಮ ಮನೆಗೆ ಮಾತನಾಡಲು ಬಂದಿದ್ದು ಆ ಕ್ಷಣದಲ್ಲಿ ಅಚಾತುರ್ಯದಿಂದ ಹಾಗೂ ಅವಸರವಸರವಾಗಿ ನನಗೆ ಅವರ ಪಕ್ಷದ ಶಾಲು ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಹೊರತು ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಿಲ್ಲ ಮುಂದೆಯೂ ಹೋಗುವದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಕಾಶಿನಾಥ ಚಿತ್ರಗಾರ, ನವೀನ್ ಮಾಲಿಪಾಟೀಲ, ವಾಸುದೇವ ನವಲಿ, ಉಮೇಶ ಸಿಂಗನಾಳ, ಪರಶುರಾಮ ಮಡ್ಡೇರ್ ರಾಘವೇಂದ್ರ ಶೆಟ್ಟಿ, ಶಿವಕುಮಾರ ಅರಿಕೇರಿ, ಜೋಗದ ಹನುಮಂತಪ್ಪ ನಾಯಕ, ಹೊಸಮಲಿ ಮಲ್ಲೇಶಪ್ಪ, ಚೌಡ್ಕಿ ಹನುಮಂತಪ್ಪ, ವೀರಭದ್ರಪ್ಪ ನಾಯಕ, ಟಿ.ಆರ್ ರಾಯಬಾಗಿ, ಮಹೇಶ ಜವಳಿ, ಸಂಗಮೇಶ ಪತ್ತಾರ, ಶ್ರೀನಿವಾಸ ಧೂಳ ಇದ್ದರು.