ಗಂಗಾವತಿ: ಮುಡಾ ಹಗರಣದ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರಿದ್ದು, ಕಳೆದ 40 ವರ್ಷಗಳಿಂದ ಸ್ವಚ್ಛ ರಾಜಕಾರಣ ಮಾಡುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಸಿ ಬಳಿಯುವ ಕಾರ್ಯ ಸಫಲವಾಗುವುದಿಲ್ಲ. ಇದರಿಂದ ಏನು ಪ್ರಯೋಜನವಿಲ್ಲ ಎಂದು ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಅವರು ಸೋಮನಾಳ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಮುಡಾ ಹಗರಣವನ್ನು ಮುನ್ನೆಲೆಗೆ ತರಲಾಗಿದೆ. ಬಿಜೆಪಿ ಆಡಳಿತದ ಕಾಲಾವಧಿಯಲ್ಲಿ ಪಾರ್ವತಮ್ಮನವರ ಭೂಮಿಗೆ ಪರ್ಯಾಯವಾಗಿ 14 ನಿವೇಶನ ನೀಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಎಲ್ಲಿ ಪ್ರಭಾವ ಬೀರಲು ಸಾಧ್ಯ. ಐದು ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಮತ್ತು ದೀನ ದಲಿತರಿಗೆ ಮಹಿಳೆಯರಿಗೆ ರಾಜ್ಯ ಸರ್ಕಾರ ನೆರವಾಗುತ್ತಿದ್ದು, ಬಡವರ ಏಳಿಗೆಯನ್ನು ಭಾರತೀಯ ಜನತಾ ಪಾರ್ಟಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸಹಿಸುವುದಿಲ್ಲ. ಬಡವರು ಬಡವರಾಗಿ ಇರಬೇಕು ಎನ್ನುವುದು ಇವರ ಲೆಕ್ಕಾಚಾರವಾಗಿದೆ ಎಂದು ಹೇಳಿದರು.
ಆದ್ದರಿಂದ ಶಾಸಕರನ್ನು ಸೆಳೆಯುವ ಯತ್ನ ಫಲಿಸದ ಕಾರಣ ಈಗ ಮುಡಾ ಹಗರಣವನ್ನು ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರು ಯಾರು ಪಾಲ್ಗೊಂಡಿಲ್ಲ. ಬಿಜೆಪಿ ದೆಹಲಿ ನಾಯಕರನ್ನು ಮೆಚ್ಚಿಸಲು ಪಾದಯಾತ್ರೆ ಮಾಡುತ್ತಿದ್ದು ಪಾದಯಾತ್ರೆಯಲ್ಲಿ ಅವರ ಪಕ್ಷದ ಕಾರ್ಯಕರ್ತರೆ ಇಲ್ಲ. ಪಿಎಸ್ ಐ ಪರಶುರಾಮ ಸಾವು ಅಪಾರ ನಷ್ಟವುಂಟು ಮಾಡಿದ್ದು ಸರಕಾರ ಸಿಓಡಿ ತನಿಖೆಗೆ ನೀಡಿದ್ದು ಎಲ್ಲರು ಅಗತ್ಯ ಮಾಹಿತಿ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮುಖಂಡರಾದ ಮುಕುಂದರಾವ್ ಭವಾನಿಮಠ, ದೊಡ್ಡಬೋಜಪ್ಪ, ಸರ್ವೇಶ ಮಾಂತಗೊಂಡ, ಸಾತ್ವಿಕ ಮಾಂತಗೊಂಡ, ರಮೇಶ ಗೌಳಿ, ಶಾಮೀದ್ ಮನಿಯಾರ್, ಐಲಿ ಬಸವರಾಜ, ಸುರೇಶ ಗೌರಪ್ಪ, ಬಸವರಾಜ ಪೂಜಾರಿ, ಹನುಮಂತರಾಯ, ವೀರನಗೌಡ,ಅಯೂಬಖಾನ್, ಹುಲುಗಪ್ಪ ಮಾಗಿ, ರಮೇಶ ನಿರತಡಿ, ರವಿ ಪವಾಡಶೆಟ್ಟಿ ಸೇರಿ ಅನೇಕರಿದ್ದರು.