ಗಂಗಾವತಿ: ತಾಲೂಕಿನ ಆನೆಗುಂದಿ-ಸಾಣಾಪುರ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಹುಲುಗಿ, ಅಂಜನಾದ್ರಿಗೆ ತೆರಳುವವರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್ ಗಳನ್ನು ಗಂಗಾವತಿ, ಕೊಪ್ಪಳ ಮತ್ತು ಹೊಸಪೇಟೆಯಿಂದ ಓಡಿಸುವಂತೆ ಸಾರಿಗೆ ಸಚಿವ ಬಿ. ಶ್ರೀ ರಾಮುಲು ಹಾಗೂ ಶಾಸಕ ಪರಣ್ಣ ಮುನವಳ್ಳಿ ಮಾಡಿದ ಆದೇಶಕ್ಕೆ ಗಂಗಾವತಿ ಕೊಪ್ಪಳ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.
ಇದರಿಂದ ಹರ್ಲಾಪೂರ, ಹಿಟ್ನಾಳ ಮತ್ತು ಹುಲಿಗಿಯಲ್ಲಿ ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ. ಶನಿವಾರ, ರವಿವಾರ, ಮಂಗಳವಾರ ಮತ್ತು ಹುಣ್ಣಿಮೆ ಅಮವಾಸ್ಯೆಯಂದು ಹುಲುಗಿ ಮತ್ತು ಅಂಜನಾದ್ರಿಗೆ ಬರುವವರ ಸಂಖ್ಯೆ ಅಧಿಕವಾಗಿರುವುರಿಂದ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ಸೀಟುಗಳ ಕೊರತೆಯಿಂದ ಬಾಗಿಲಿನಲ್ಲಿ ನಿಂತುಕೊಂಡು ಅಪಾಯಕಾರಿ ರೀತಿಯಲ್ಲಿ ಪ್ರಯಾಣಿಸುವ ಸ್ಥಿತಿಯುಂಟಾಗಿದೆ.
ನಿಗದಿತ ಸಮಯಕ್ಕೆ ಬಸ್ ಗಳ ಓಡಾಟ ನಡೆಯದೇ ಇರುವುದರಿಂದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಶಾಲಾ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗಿದೆ. ಆನೆಗುಂದಿ, ಸಾಣಾಪುರ, ಜಂಗ್ಲಿ, ರಂಗಾಪುರ, ಹನುಮನಹಳ್ಳಿ, ತಿರುಮಲಾಪುರ, ಬಸಾಪುರ ಗ್ರಾಮಗಳಿಂದ ಹರ್ಲಾಪುರ ಗ್ರಾಮದ ಬೋರುಖಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಗೆ ನಿತ್ಯವೂ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ಸಮಯದಲ್ಲಿ 2-3 ಬಸ್ಸುಗಳು ಈ ಭಾಗದಲ್ಲಿ ಸಂಚಾರ ಮಾಡಿದರೆ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಹೋಗಲು ಅನುಕೂಲವಾಗುತ್ತದೆ.
ಈಗಾಗಲೇ ಸಾಣಾಪುರ ಆನೆಗುಂದಿಪುರ ಗ್ರಾಮಸ್ಥರ ಮನವಿ ಮೇರೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ಹೆಚ್ಚುವರಿ ಬಸ್ ಗಳನ್ನು ಓಡಿಸುವಂತೆ ಸೂಚನೆ ನೀಡಿದರೂ ಸಾರಿಗೆ ಸಚಿವರ ಆದೇಶಕ್ಕೆ ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.
ಕೂಡಲೇ ಕೊಪ್ಪಳ, ಗಂಗಾವತಿ ಕೆ.ಎಸ್.ಆರ್.ಆರ್.ಟಿ.ಸಿ. ಡಿಪೋದಿಂದ ಆನೆಗೊಂದಿ-ಸಾಣಾಪೂರ ಭಾಗದಲ್ಲಿ ಹೆಚ್ವುವರಿ ಬಸ್ ಓಡಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸಿ ಹೋರಾಟ ನಡೆಸಲಾಗುತ್ತದೆ ಎಂದು ವಿದ್ಯಾರ್ಥಿಗಳ ಪಾಲಕರು ಒತ್ತಾಯಿಸಿದ್ದಾರೆ.