ಗಂಗಾವತಿ: ಹೈದ್ರಾಬಾದ್ ಕರ್ನಾಟಕ ಮತ್ತು ಗಣಿ ಜಿಲ್ಲೆ ಸೇರಿ ಮಧ್ಯೆ ಕರ್ನಾಟಕವನ್ನು ಸಂಪರ್ಕಿಸುವ ಗಂಗಾವತಿ-ಕಂಪ್ಲಿ ಸೇತುವೆ ತುಂಗಭದ್ರಾ ನದಿಯ ಪ್ರವಾಹಕ್ಕೆ ಸಿಲುಕಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸದ್ಯ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ. ತುಂಗಭದ್ರಾ ಡ್ಯಾಂನಿಂದ ಈ ಭಾರಿ 3 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಸಿದ್ದು, ಹೆಚ್ಚಿನ ಪ್ರವಾಹ ಬಂದಿದ್ದರಿಂದ ಸೇತುವೆ ಮೇಲ್ಭಾಗದಲ್ಲಿ ಹಾಕಿರುವ ಕಾಂಕ್ರೀಟ್ ಕೊಚ್ಚಿಹೋಗಿದೆ. ಸೇತುವೆಯ ಎರಡು ಭಾಗದಲ್ಲಿ ರಕ್ಷಣಾ ಕಬ್ಬಿಣದ ಸರಳುಗಳು ನೀರಿನ ರಭಸಕ್ಕೆ ಕಿತ್ತು ಹೋಗಿದ್ದು, ಎರಡೂ ಬದಿ ನದಿಗುಂಟ ಬಂದ ಕಸ ಸಂಗ್ರಹವಾಗಿದೆ. ಇದರಿಂದ ನೀರಿನ ರಭಸ ಹೆಚ್ಚಾಗಿ ಸುಮಾರು ಒಂದು ಕಿ.ಮೀ. ಉದ್ದದ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ಬೀದರ, ಕಲಬುರಗಿ, ಯಾದಗಿರಿ ಮತ್ತು ಹೈದ್ರಾಬಾದ್‌ನಿಂದ ಬೆಂಗಳೂರು, ಹೊಸಪೇಟೆ, ಬಳ್ಳಾರಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತಿದ್ದು, 1961ರಲ್ಲಿ ಅಂದಿನ ಮೈಸೂರು ಸರಕಾರ ಇದನ್ನು ನಿರ್ಮಿಸಿದೆ. ಲೋಕೊಪಯೋಗಿ ಇಲಾಖೆ ಸಚಿವರಾಗಿದ್ದ ವೀರಣ್ಣಗೌಡರು ಉದ್ಘಾಟಿಸಿದ್ದರು. ಸೇತುವೆ ನಿರ್ಮಾಣಗೊಂಡು 58 ವರ್ಷ ಗತಿಸಿದರೂ ಇನ್ನೂ ಸಂಚಾರಕ್ಕೆ ಯೋಗ್ಯವಾಗಿದೆ. 2008ರಿಂದ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಣಿಗಾರಿಕೆಯಿಂದ ಗಣಿ ಅದಿರನ್ನು ವಿಶಾಖಪಟ್ಟಣ ಮತ್ತು ಗೋವಾಗೆ ಸಾಗಿಸಲು ಲಾರಿಗಳು ಹೆಚ್ಚಾಗಿ ಸಂಚಾರ ನಡೆಸಿದ್ದರಿಂದ ಸೇತುವೆ ಸ್ವಲ್ಪ ಪ್ರಮಾಣದಲ್ಲಿ ಹಾನಿಗೀಡಾಯಿತು. ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರಿಂದ ಗಣಿ ಅದಿರು ಸಾಗಿಸುವ ಲಾರಿಗಳ ಸಂಚಾರ ತಡೆಯಲಾಗಿತ್ತು. ಕಳೆದ ಐದು ವರ್ಷಗಳಿಂದ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಸಾಗಿಸುವ ಲಾರಿಗಳು ಇದೇ ಸೇತುವೆ ಅವಲಂಬಿಸಿದ್ದು, ಸೇತುವೆ ಅಭದ್ರಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ.
ತುಂಗಭದ್ರಾ ನದಿಯಲ್ಲಿ ಪ್ರತಿ ವರ್ಷ ಪ್ರವಾಹ ಬಂದಾಗ ಕಂಪ್ಲಿ ಸೇತುವೆ ಮುಳುಗಡೆಯಾಗುತ್ತದೆ. ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕಳೆದ ವರ್ಷ ಜನಪ್ರತಿನಿಧಿಗಳ ಶಿಫಾರಸ್ಸಿನಂತೆ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಕಂಪ್ಲಿ ಸೇತುವೆ ಮೇಲ್ಭಾಗದಲ್ಲಿ ನೂತನ ಸೇತುವೆ ನಿರ್ಮಿಸಲು ಸರಕಾರಕ್ಕೆ 100 ಕೋಟಿ ರೂ. ಪ್ರಸ್ತಾವನೆ ಕಳುಹಿಸಿದ್ದಾರೆ. ಚಿಕ್ಕಜಂತಗಲ್ ಸರಕಾರಿ ಶಾಲೆಯ ಹತ್ತಿರದಿಂದ ಕಂಪ್ಲಿ ಕೋಟೆ ಪ್ರದೇಶದ ಹೊರಭಾಗದಿಂದ ಸೇತುವೆ ರಸ್ತೆ ಬರುವಂತೆ ಯೋಜನೆಯಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಇದರಿಂದ ಚಿಕ್ಕಜಂತಗಲ್ ಮತ್ತು ಕಂಪ್ಲಿ ಹೊರಭಾಗದಲ್ಲಿ ರಸ್ತೆ ಹೋಗುವಂತೆ ಯೋಜನೆ ರೂಪಿಸಲಾಗಿದ್ದು, ಇದರಿಂದ ವಾಹನ ಮತ್ತು ಜನದಟ್ಟಣೆ ಕಡಿಮೆಯಾಗಲಿದೆ. ತುಂಗಭದ್ರಾ ನದಿಯಲ್ಲಿ ಎಷ್ಟು ಪ್ರವಾಹ ಬಂದರೂ ಸೇತುವೆ ಮುಳುಗುವುದಿಲ್ಲ.
ಸೇತುವೆಯನ್ನು ಹಂಪಿ ಎಎಸ್‌ಪಿ ಹಾಗೂ ಪ್ರೊಬೇಷನರಿ ಐಪಿಎಸ್ ಅಧಿಕಾರಿ ಡಾ| ಸಿಮಿ ಮರಿಯಮ್ ಜಾರ್ಜ್, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ರೇಣುಕಾ ಪಾಟೀಲ್, ಕಂಪ್ಲಿ ಸಿಪಿಐ ಹುಲುಗಪ್ಪ, ಪಿಎಸ್‌ಐ ವಾಸು, ಲೋಕೊಪಯೊಗಿ ಇಲಾಖೆ ಎಇಇ ನಶ್ರತ್ ಅಲಿ, ಎ.ಇ. ರಾಜಪ್ಪ, ದೇವೇಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.