Advertisement

ವಿಜಯನಗರ ಕಾಲುವೆ ದುರಸ್ತಿಗೆ ಚಾಲನೆ

11:23 AM May 12, 2019 | Naveen |

ಗಂಗಾವತಿ: ತುಂಗಭದ್ರಾ ಡ್ಯಾಂ ನಿರ್ಮಾಣಕ್ಕೂ ಮೊದಲೇ ನದಿಗೆ ನೈಸರ್ಗಿಕವಾಗಿ ನಿರ್ಮಿಸಿದ್ದ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ಕೊನೆಗೂ ಸರಕಾರ ಹಾಗೂ ಏಷಿಯನ್‌ ಅಭಿವೃದ್ಧಿ ಬ್ಯಾಂಕು ಚಾಲನೆ ನೀಡಿದ್ದು, ಮುಂದಿನ ಜನವರಿಯಲ್ಲಿ ದುರಸ್ತಿ ಕಾರ್ಯ ಆರಂಭಿಸುವಂತೆ ರೈತರು ಸಲಹೆ ನೀಡಿದ್ದಾರೆ. ಇದಕ್ಕಾಗಿ ಒಂದು ಬೆಳೆಯನ್ನು ಬೆಳೆಯದಿರಲು ರೈತರು ತೀರ್ಮಾನಿಸಿದ್ದಾರೆ.

Advertisement

2007-08ನೇ ಸಾಲಿನಲ್ಲಿ ಕಲಬುರ್ಗಿಯಲ್ಲಿ ಜರುಗಿದ ರಾಜ್ಯ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಜಯನಗರ ಕಾಲುವೆಗಳ ದುರಸ್ತಿ ಮಾಡುವ ನಿರ್ಣಯ ಕೈಗೊಂಡಿದ್ದರು. ಬೃಹತ್‌ ಕಾಮಗಾರಿ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಜಲಸಂಪನ್ಮೂಲ ಇಲಾಖೆ ಮತ್ತು ಪರಿಸರ ಇಲಾಖೆಗಳ ಪರವಾನಗಿ ಅಗತ್ಯವಿತ್ತು. ಕೇಂದ್ರ ಸರಕಾರದ ಪರವಾನಗಿ ಪಡೆದು ಏಷಿಯನ್‌ ಅಭಿವೃದ್ಧಿ ಬ್ಯಾಂಕ್‌ ಹಣಕಾಸು ನೆರವಿನೊಂದಿಗೆ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿದೆ. 432 ಕೋಟಿ ವೆಚ್ಚದಲ್ಲಿ ವಿಜಯನಗರ ಕಾಲುವೆಗಳ ದುರಸ್ತಿ ನಡೆಯಲಿದ್ದು, ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ಮತ್ತು ಕಂಪನಿ ಕಾಲುವೆ ಶಾಶ್ವತ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದಿದೆ.

ಹಂಪಿ, ಆನೆಗೊಂದಿ, ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ವಿಜಯನಗರ ಕಾಲುವೆಗಳು ಇರುವುದರಿಂದ ಅಲ್ಲಿಯ ಪರಿಸರಕ್ಕೆ ಧಕ್ಕೆಯಾಗದಂತೆ ಮತ್ತು ತುಂಗಭದ್ರಾ ನದಿಯಲ್ಲಿರುವ ಚೀರ್‌ ನಾಯಿ ಸೇರಿ ಜಲಚರಗಳಿಗೆ ಹಾನಿಯಾದಂತೆ ಕಾಮಗಾರಿ ನಿರ್ವಹಿಸಬೇಕಿದ್ದು, ಈಗಾಗಲೇ ಏಷಿಯನ್‌ ಬ್ಯಾಂಕಿನ ಅಧಿಕಾರಿಗಳು ಆನೆಗೊಂದಿ, ಸಾಣಾಪೂರ, ಹನುಮನಹಳ್ಳಿ ಜನರು ಮತ್ತು ರೈತರ ಜತೆ ಹಲವು ಸುತ್ತಿನ ಮಾತುಕತೆ ಸಲಹೆ ಸೂಚನೆ ಪಡೆದಿದೆ. ಇದೀಗ ಅಂತಿಮವಾಗಿ ಕಾಮಗಾರಿಯನ್ನು 2019 ಡಿಸೆಂಬರ್‌ನಲ್ಲಿ ಕಾಲುವೆ ದುರಸ್ತಿ ಕಾರ್ಯ ನಡೆಸಲು ಆರ್‌.ಎನ್‌. ಶೆಟ್ಟಿ ಕಂಪನಿ ನಿರ್ಧರಿಸಿತ್ತು. ರೈತರ ಜತೆ ನಡೆಸಿದ ಮಾತುಕತೆ ವೇಳೆ ಡಿಸೆಂಬರ್‌ ಬದಲಿಗೆ 2020 ಜನವರಿ ಕೊನೆಯ ವಾರದಲ್ಲಿ ಕಾಮಗಾರಿ ನಡೆಸುವ ಮೂಲಕ ಬೆಳೆದು ನಿಂತ ಬೆಳೆಗಳನ್ನು ಕಟಾವು ಮಾಡಿದ ನಂತರ ಕೆಲಸ ಆರಂಭಿಸುವಂತೆ ರೈತರ ಸಲಹೆ ಹಿನ್ನೆಲೆಯಲ್ಲಿ ಮುಂದಿನ ವರ್ಷ ಕಾಮಗಾರಿ ಆರಂಭಿಸಲು ಈಗಾಗಲೇ ಅಗತ್ಯ ಕಾರ್ಯ ನಡೆದಿದೆ.

ಶಿವಪೂರ, ಸಾಣಾಪೂರ, ಕಂಪ್ಲಿ, ದೇವಘಾಟನಲ್ಲಿ ತುಂಗಭದ್ರಾ ನದಿಯಲ್ಲಿ ನಿರ್ಮಿಸಿರುವ ಅಣೆಕಟ್ಟು, ಮುಖ್ಯಕಾಲುವೆ, ಕಾಲುವೆ ಮೇಲಿನ ರಸ್ತೆ ಹಾಗೂ ಉಪಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗಿದ್ದು, ಸ್ಥಳೀಯವಾಗಿ ರೈತರ ಸಲಹೆಯಂತೆ ಡಿಪಿಆರ್‌ನಂತೆ ಕಾಮಗಾರಿ ನಡೆಸಲು ಸರಕಾರ ಸೂಚನೆ ನೀಡಿದೆ. ಹೊಸಪೇಟೆ, ಕಂಪ್ಲಿ, ಕೊಪ್ಪಳ, ಗಂಗಾವತಿ, ಸಿರಗುಪ್ಪಾ ತಾಲೂಕುಗಳಲ್ಲಿ ವಿಜಯನಗರ ಕಾಲುವೆಗಳಿದ್ದು ಸಾವಿರಾರು ಎಕರೆ ಭೂಪ್ರದೇಶಕ್ಕೆ ನದಿಯ ಮೂಲಕ ನೀರಾವರಿ ಮಾಡಲಾಗಿದೆ. ಡ್ಯಾಮ್‌ ನಿರ್ಮಾಣ ನಂತರ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ರೈತರು ತಮ್ಮ ಭೂಮಿಗೆ ನೀರು ಪಡೆಯುತ್ತಾರಾದರೂ ಹಳೆಯ ಮಗಾಣಿ ರೈತರಿಗೆ ವಿಜಯನಗರ ಕಾಲುವೆಗಳು 12 ತಿಂಗಳು ನೀರಾವರಿ ಕಲ್ಪಿಸಿವೆ.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ವಿಜಯನಗರ ಕಾಲುವೆಗಳಿಂದ ವರ್ಷದ 12 ತಿಂಗಳು ನೀರು ಲಭ್ಯವಿದ್ದು, ನದಿಯ ಮೂಲಕ ನೇರವಾಗಿ ಕಾಲುವೆ ಮೂಲಕ ಭೂಮಿಗೆ ನೀರು ಹರಿಸಲು ನೂರಾರು ವರ್ಷಗಳ ಹಿಂದೆ ಯೋಜನೆ ರೂಪಿಸಿ ಅಣೆಕಟ್ಟು ಕಾಲುವೆ ನಿರ್ಮಿಸಲಾಗಿದ್ದು, ಇವುಗಳ ಶಾಶ್ವತ ದುರಸ್ತಿಗೆ ಬಿ.ಎಸ್‌. ಯಡಿಯೂರಪ್ಪ ಸಿಎಂ ಇದ್ದ ಸಂದರ್ಭದಲ್ಲಿ ಮನವಿ ಮಾಡಲಾಗಿತ್ತು. ಕಲಬುರ್ಗಿಯಲ್ಲಿ ಜರುಗಿದ ಕ್ಯಾಬಿನೆಟ್ ಸಭೆಯಲ್ಲಿ ಸುಮಾರು 500 ಕೋಟಿ ವೆಚ್ಚದಲ್ಲಿ ವಿಜಯನಗರ ಕಾಲುವೆಗಳ ದುರಸ್ತಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಇದೀಗ ಏಷಿಯನ್‌ ಅಭಿವೃದ್ಧಿ ಬ್ಯಾಂಕ್‌ ನೆರವಿನಲ್ಲಿ 432 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ರೈತರ ಸಲಹೆ ಸೂಚನೆ ಪಡೆದು ಕಾಮಗಾರಿ ಗುಣಮಟ್ಟದಲ್ಲಿ ಮಾಡುವಂತೆ ಗುತ್ತಿಗೆ ಪಡೆದವರಿಗೆ ಸೂಚನೆ ನೀಡಲಾಗಿದೆ.
ಪರಣ್ಣ ಮುನವಳ್ಳಿ,
ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next