ಕೊಪ್ಪಳ: ನಗರಸಭೆ ಚುನಾವಣೆಯ ಮುನ್ನ ಗಂಗಾವತಿಯಲ್ಲಿ ಭಾರಿ ಬೆಳವಣಿಗೆಗಳು ನಡೆಯುತ್ತಿದೆ. ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಸೇರಿ ಓರ್ವ ಕಾಂಗ್ರೆಸ್ ಸದಸ್ಯನನ್ನು ಗುರುವಾರ ರಾತ್ರಿ ಅಪಹರಣ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಇಂದು ಬೆಳಿಗ್ಗೆ ಸೆರೆ ಹಿಡಿಯಲಾಗಿದೆ.
ಗುರುವಾರ ರಾತ್ರಿ ಗಂಗಾವತಿಯಲ್ಲಿ ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ ರನ್ನು ಅಪಹರಣ ಮಾಡಲಾಗಿತ್ತು. ಬಾರ್ ನಲ್ಲಿದ್ದ ಮನೋಹರಸ್ವಾಮಿಯನ್ನು ಏಳು ಮಂದಿಯ ತಂಡ ಅಪಹರಿಸಿತ್ತು. ಬಿಜೆಪಿ ಸದಸ್ಯರಿಂದ ಕಿಡ್ನಾಪ್ ಮಾಡಲಾಗಿದೆ ಎಂದು ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಲಿಯಾಳ ಬಳಿ ಬಂಧಿಸಲಾಗಿದೆ. ಅನುಮಾನಸ್ಪದವಾಗಿ ಒಡಾಡುತ್ತಿದ್ದ ವ್ಯಾನ್ ಅನ್ನು ಪರಿಶೀಲಿಸಿದಾಗ ಕಿಡ್ನಾಪ್ ಪ್ರಕರಣ ಬಯಲಾಗಿದ್ದು, ಮೂರು ಜನ ಅಪಹರಣಕಾರರನ್ನು ಕಾರವಾರದ ಹಲಿಯಾಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ
ಏನಿದು ಕಿಡ್ನಾಪ್ ಘಟನೆ: ನವೆಂಬರ್ ಎರಡರಂದು ಗಂಗಾವತಿ ನಗರಸಭೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದು ಜಿದ್ದಾಜಿದ್ದಿನ ಕಣವಾಗಿದ್ದು, ಅಧ್ಯಕ್ಷ ಗಾದಿಗೇರಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪ್ರಯತ್ನಿಸುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯನನ್ನು ಬಿಜೆಪಿಯವರು ಅಪಹರಣ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಈ ಬಗ್ಗೆ ಗುರುವಾರ ರಾತ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ. ಅಜೇಯ್ ಬಿಚ್ಚಾಲಿ, ಪರಶುರಾಮ ಮಡ್ಡೆರ್, ನವೀನ ಪಾಟೀಲ್, ರಾಚಪ್ಪ, ರಾಘವೇಂದ್ರ ಶೆಟ್ಟಿ, ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ ಎನ್ನುವವರ ಮೇಲೆ ದೂರು ದಾಖಲಾಗಿದೆ.