•ಕೆ.ನಿಂಗಜ್ಜ
ಗಂಗಾವತಿ: ರೋಗ ನಿರೋಧಕ ಮತ್ತು ಅಧಿಕ ಇಳುವರಿ ನೀಡುವ ಸುಧಾರಿತ ಸೋನಾ ಮಸೂರಿ(ಆರ್‌ಪಿ ಬಯೋ-226) ಭತ್ತದ ತಳಿಯನ್ನು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಈ ಮೊದಲು ಕೃಷಿ ಸಂಶೋಧನಾ ಕೇಂದ್ರದಲ್ಲೇ ಅಭಿವೃದ್ಧಿಪಡಿಸಿದ್ದ ಸೋನಾ ಮಸೂರಿ (5204) ಭತ್ತದ ತಳಿ ಇತ್ತೀಚಿನ ದುಂಡಾಣು ಅಂಗಮಾರಿ (ದೋಮಿ, ವೈರಲ್, ಬೆಂಕಿ)ರೋಗ ವ್ಯಾಪಕವಾಗಿತ್ತು. ಕಾಳು ಕಟ್ಟುವ ಸಮಯದಲ್ಲಿ ನಷ್ಟವಾಗುತ್ತಿತ್ತು. ವಿಪರೀತವಾದ ಔಷಧಿ ಸಿಂಪರಣೆಯಿಂದ ಈ ಅಕ್ಕಿಯನ್ನು ಊಟ ಮಾಡದಂತಹ ಸ್ಥಿತಿಯುಂಟಾಗುತ್ತಿತ್ತು. ವಿದೇಶಗಳಿಗೆ ರಫ್ತಾಗುತ್ತಿದ್ದ ಅಕ್ಕಿ ತಿರಸ್ಕಾರಕ್ಕೊಳಗಾಗಿತ್ತು. ಇಡೀ ಭತ್ತದ ಗದ್ದೆ ಒಣಗಿದಂತಾಗಿ ಭತ್ತದ ಕಾಳು ಜೊಳ್ಳಾಗಿ ಇಳುವರಿ ಎಕರೆಗೆ 10-20 ಚೀಲ ಕಡಿಮೆ ಇಳುವರಿ ಬರುತ್ತಿತ್ತು.
ಗಂಗಾವತಿ ಸೋನಾ ಮಸೂರಿ (ಬಿಪಿಟಿ-5204) ಭತ್ತದ ತಳಿಯಲ್ಲಿ ರೋಗ ನಿರೋಧಕ ಶಕ್ತಿ ಇರದೇ ಇರುವುದರಿಂದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಸಹಕಾರದಲ್ಲಿ ದುಂಡಾಣು ಅಂಗಮಾರಿ ರೋಗಕ್ಕೆ ನಿರೋಧಕತೆ ಹೊಂದಿರುವ ಎಕ್ಸ್‌ಎ21, ಎಕ್ಸ್‌ಎ13 ಮತ್ತು ಎಕ್ಸ್‌ಎ5 ಎಂಬ ಭತ್ತದ ವಂಶವಾಹಿನಿ(ಜಿನ್ಸ್)ಯಿಂದ ಸುಧಾರಿತ ಸೋನಾ ಮಸೂರಿ ಭತ್ತದ ತಳಿ ಕಂಡು ಹಿಡಿಯಲಾಗಿದೆ. ನೂತನ ಭತ್ತದ ತಳಿಯಿಂದ ಎಕರೆಗೆ 8-10 ಚೀಲ ಹೆಚ್ಚುವರಿ ಇಳುವರಿ ಬರುತ್ತದೆ. ಕನಿಷ್ಟ ಎರಡು ಬಾರಿ ಔಷಧಿ ಸಿಂಪರಣೆ ಖರ್ಚು (ಸುಮಾರು 12 ಸಾವಿರ ರೂ.) ಉಳಿತಾಯವಾಗಿ ಮೊದಲಿನ ಸೋನಾ ಮಸೂರಿಗಿಂತ 8 ದಿನ ಮುಂಚಿತವಾಗಿ ಕಟಾವಿಗೆ ಬರುತ್ತದೆ.
ಹಳೆಯ ಸೋನಾ ಮಸೂರಿ (ಬಿಪಿಟಿ-5204) ಭತ್ತದ ತಳಿಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣ ವಿನೂತನವಾಗಿ ರೋಗನಿರೋಧಕ ಸುಧಾರಿತ ಸೋನಾ ಮಸೂರಿ(ಆರ್.ಪಿ. ಬಯೋ-226)ಭತ್ತದ ತಳಿ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಎಕರೆಗೆ 8-10 ಸಾವಿರ ರೂ. ಔಷಧಿ ಸಿಂಪರಣೆ ಖರ್ಚು ಕಡಿಮೆಯಾಗುತ್ತದೆ. 8 ದಿನ ಮುಂಚಿತವಾಗಿ ಕಟಾವಿಗೆ ಬರುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ರೈತರ ಗದ್ದೆಯಲ್ಲಿ ಭತ್ತವನ್ನು ಬೆಳೆದು ಲಾಭ ತೋರಿಸಲಾಗಿದೆ.
•
ಡಾ| ಕೆ. ಮಹಾಂತಶಿವಯೋಗಯ್ಯ ತಳಿ ವಿಜ್ಞಾನಿ (ಭತ್ತ)
ಸುಧಾರಿಯ ಸೋನಾ ಮಸೂರಿ (ಆರ್‌ಪಿ ಬಯೋ-226)ಭತ್ತದ ತಳಿ ನಾಟಿ ಮಾಡುವುದರಿಂದ ರೈತರಿಗೆ ಅಧಿಕ ಲಾಭವಿದೆ. ಪ್ರಾಯೋಗಿಕವಾಗಿ ಕೃಷಿ ಸಂಶೋಧನಾ ಕೇಂದ್ರದ ಫಾರ್ಮ್ನಲ್ಲಿ ನಾಟಿ ಮಾಡಿ ಲಾಭ ತೆಗೆಯಲಾಗಿದ್ದು, ಬೀಜೋತ್ಪಾದನೆ ಕೂಡ ಇಲ್ಲೇ ಮಾಡಲಾಗಿದೆ. ಹಲವಾರು ರೈತರಿಗೆ ನಾಟಿ ಮಾಡಲು ನೂತನ ತಳಿ ಬೀಜಗಳನ್ನು ನೀಡಲಾಗಿದೆ.
• ಡಾ| ಎಸ್.ಬಿ. ಗೌಡರ್, ಕ್ಷೇತ್ರ ಅಧೀಕ್ಷಕರು ಕೃಷಿ ಸಂಶೋಧನಾ ಕೇಂದ್ರ ಗಂಗಾವತಿ
ಹೊಸ ಸೋನಾ ಮಸೂರಿ ತಳಿಯನ್ನು 5 ಎಕರೆ ಪ್ರದೇಶದಲ್ಲಿ ಕಳೆದ ವರ್ಷ ನಾಟಿ ಮಾಡಲಾಗಿತ್ತು. ಎಕರೆಗೆ 40 ಕ್ವಿಂಟಲ್ವರೆಗೆ ಇಳುವರಿ ಬಂದಿದೆ. ಅನ್ಯ ಭತ್ತದ ತಳಿಗಿಂತಲೂ 8 ದಿನ ಮುಂಚಿತವಾಗಿ ಕಟಾವಿಗೆ ಬಂದಿದೆ. ಖರ್ಚು ಸಹ ಕಡಿಮೆಯಾಗಿದ್ದು, ರೈತರು ಹೊಸ ಸೋನಾ ಮಸೂರಿ ತಳಿ ಭತ್ತದ ನಾಟಿ ಮಾಡಬೇಕು.
• ರುದ್ರಗೌಡ, ಆರ್‌ಪಿ ಬಯೋ-226 ಭತ್ತ ಬೆಳೆದ ರೈತ