Advertisement

Gangavathi: ಬೈಕ್ ವೀಲ್ಹಿಂಗ್ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೇ ಥಳಿಸಿದ ಪುಂಡರ ಗುಂಪು!

11:00 PM Oct 09, 2024 | Team Udayavani |

ಗಂಗಾವತಿ: ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಪುಂಡರ ಗುಂಪು ತಡೆದು ಬುದ್ಧಿ ಮಾತು ಹೇಳಿದ ಪೊಲೀಸರನ್ನೇ ಅಟ್ಟಾಡಿಸಿ ಥಳಿಸಿದ ಪ್ರಕರಣ ತಾಲೂಕಿನ ದಾಸನಾಳ ಸೇತುವೆ ಬಳಿ ಬುಧವಾರ ಸಂಜೆ ನಡೆದಿದೆ.

Advertisement

ಹೇಮಗುಡ್ಡ ದಸರಾ ಹಬ್ಬದ ಬಂದೋಬಸ್ತ್ ಮುಗಿಸಿ ಪೊಲೀಸರು ವಾಪಸ್ ಆಗುವಾಗ ಗಾಂಜಾ ಮತ್ತಿನಲ್ಲಿ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ನಗರದ ಯುವಕರ ಗುಂಪನ್ನು ಪೊಲೀಸರು ಪ್ರಶ್ನಿಸಿದರು. ಈ ವೇಳೆ ಪುಂಡರ ಗುಂಪು ಏಕಾಏಕಿ ಪೇದೆ ಬಸವರಾಜ ಪಾಟೀಲ್ ಹಾಗೂ ಪೊಲೀಸ್‌ ವಾಹನ ಚಾಲಕ ಕನಕಪ್ಪ ಉಪ್ಪಾರರನ್ನು ಮನಸೋ ಇಚ್ಛೆ ಥಳಿಸಿ‌ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಪೊಲೀಸರ ಮೊಬೈಲ್ ಕಸಿದು ತುಂಗಭದ್ರಾ ಎಡದಂಡೆ ಕಾಲುವೆಗೆ ಎಸೆದಿದ್ದಾರೆ.

ಈ ಸಂದರ್ಭದಲ್ಲಿ ದಾಸನಾಳ ಸೇತುವೆ ಹತ್ತಿರವಿದ್ದ ಸ್ಥಳೀಯರು ಗಲಾಟೆ ಬಿಡಿಸಲು ಯತ್ನಿಸಿದರೂ ಪುಂಡರ ಗುಂಪು ಕೈ ಗೆ ಸಿದ್ದ ಕಟ್ಟಿಗೆ, ಕಲ್ಲು ಇತರೆ ವಸ್ತುಗಳಿಂದ ಥಳಿಸಿದ್ದಾರೆ. ಆದರೂ ಪುಂಡರ ಪೈಕಿ ಗಂಗಾವತಿ ಗುಂಡಮ್ಮ ಕ್ಯಾಂಪಿನ ಮೂವರು ಯುವಕರ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಗೊಂಡ ಪೊಲೀಸರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:
ಗ್ರಾಮೀಣ ಠಾಣೆಯ ಪಿಎಸ್ಐ ಪುಂಡಪ್ಪ, ಮುಖ್ಯ ಪೇದೆ ಮೀಸೆ ಬಸವರಾಜ್ ಹಾಗೂ ಪೊಲೀಸ್ ವಾಹನ ಚಾಲಕ ಕನಕಪ್ಪ  ಹೇಮಗುಡ್ಡ ದಸರಾ ಕರ್ತವ್ಯ ಮುಗಿಸಿ ಗಂಗಾವತಿಗೆ ಆಗಮಿಸುತ್ತಿದ್ದಾಗ ಕೊಪ್ಪಳದ ಕಡೆಯಿಂದ ಗುಂಡಮ್ಮ ಕ್ಯಾಂಪಿನ ಅರ್ಬಾಜ್ ಹಾಗೂ ಯುವಕರ ಪಡೆ ವೀಲ್ಹಿಂಗ್ ಮಾಡಿಕೊಂಡು ಪೊಲೀಸರ ವಾಹನ ಓವರ್ ಟೇಕ್ ಮಾಡಿ ಮುಂದೆ ಹೋಗಿ ಸ್ಕಿಡ್ ಆಗಿ ಬಿದ್ದಿದ್ದಕ್ಕೆ ಪೊಲೀಸರು ತಕ್ಷಣ ಅವರ ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆಗೆ ಬಂದ ಪೊಲೀಸರು ಬುದ್ಧಿ ಹೇಳಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗಾಂಜಾ ಮತ್ತಿನಲ್ಲಿದ್ದ ಅರ್ಬಾಜ್ ಮತ್ತು ತಂಡ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಅರ್ಬಾಜ್, ವೆಂಕಟೇಶ್, ಪಂಪನಗೌಡ, ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು ಇನ್ನುಳಿದವರು ತಲೆ ಮರೆಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next