Advertisement

ಮೇಯರ್‌ ಕಪ್‌ಗೆ ಗಂಗಾಂಬಿಕೆ ಚಾಲನೆ

12:59 AM Aug 08, 2019 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳಿಗೆ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಿರುವುದರ ಜತೆಗೆ 13 ವರ್ಷದ ಒಳಗಿನ ಮಕ್ಕಳಿಗೂ ಪಂದ್ಯಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮೇಯರ್‌, ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು.

Advertisement

ಜಯನಗರದ ಕೃಷ್ಣರಾವ್‌ ಉದ್ಯಾನದಲ್ಲಿರುವ ಬ್ಯಾಸ್ಕೆಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ಮೇಯರ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಸಹಭಾಗಿತ್ವದಲ್ಲಿ ಇಂದಿನಿಂದ (ಆ.7ರಿಂದ ಆ.11) ಐದು ದಿನಗಳ ಕಾಲ ಮೇಯರ್‌ಕಪ್‌ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಕ್ರೀಡೆಗಳನ್ನು ಪ್ರೋತ್ಸಾಹಿಸುವ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಬಿಎಂಪಿ ಪ್ರತಿವರ್ಷವೂ ಮೇಯರ್‌ ಕಪ್‌ ಆಯೋಜಿಸಿ ಕ್ರಿಕೆಟ್‌, ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‍, ಪುಟ್‌ ಬಾಲ್‍, ವಾಲಿಬಾಲ್‌ ಸೇರಿದಂತೆ ಹಲವು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳ ಜತೆಗೆ ಕಿರಿಯ (13 ವರ್ಷದ ಒಳಗಿನ) ಬಾಲಕ ಮತ್ತು ಬಾಲಕಿಯರ ತಲಾ 16 ತಂಡಗಳಂತೆ ಒಟ್ಟು 64 ತಂಡಗಳು ಭಾಗವಹಿಸುತ್ತಿವೆ ಎಂದರು.

ಬಾಸ್ಕೆಟ್‌ಬಾಲ್‌ ಕ್ರೀಡಾಂಗಣ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಈ ಹಿಂದೆ ತ್ಯಾಜ್ಯ ಸುರಿಯಲಾಗುತ್ತಿತ್ತು. ಈಗ ಬ್ಯಾಸ್ಕೆಟ್‌ಬಾಲ್‌ ಕ್ರೀಡಾಂಗಣ ನಿರ್ಮಿಸಲಾಗಿದೆ. ಇದೀಗ ಇದೇ ಉದ್ಯಾನದಲ್ಲಿ ನೂತನವಾಗಿ ಬ್ಯಾಡ್ಮಿಂಟನ್‌ ಕ್ರೀಡಾಂಗಣವನ್ನು ಕೂಡಾ ನಿರ್ಮಿಸಲಾಗುದ್ದು, ಆಗಸ್ಟ್‌9ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

ಶಾಸಕ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಕ್ರೀಡೆಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕಡೆ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಇದೇ ರೀತಿ ಇನ್ನೂ ಸ್ಥಳಾವಕಾಶ ಇರುವ ವಾರ್ಡ್‌ಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಪಾಲಿಕೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಬಾಸೆಟ್‌ಬಾಲ್‌ ಫೆಡರೇಶನ್‌ ಆಫ್ ಇಂಡಿಯಾ ಅಧ್ಯಕ್ಷ ಕೆ.ಗೋವಿಂದರಾಜು ಮತ್ತಿತರರು ಹಾಜರಿದ್ದರು. ಮೇಯರ್‌ ಕಪ್‌ ಅಡಿಯಲ್ಲಿ ಇದೇ ಮೊದಲ ಬಾರಿಗೆ ಬಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌ ಹಾಗೂ ವಾಲಿಬಾಲ್‌ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next