ಮುಂಬಯಿ: ಗಂಗಡಗಾರ ನಾಯ್ಕ ಸಮಾಜದ ವತಿಯಿಂದ ಶ್ರೀ ಕ್ಷೇತ್ರ ಶೃಂಗೇರಿಗೆ ಸಾಮೂಹಿಕ ತೀರ್ಥಯಾತ್ರೆಯು ಮೇ 20 ರಂದು ನಡೆಯಿತು. ಸಮಾಜದ ಸದಸ್ಯರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಯಾತ್ರಾರ್ಥಿಗಳು ಮುಂಬಯಿ ಯಿಂದ ಉಡುಪಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಸಮಾಜವು ಏರ್ಪಡಿಸಿದ್ದ ವಿಶೇಷ ಖಾಸಗಿ ವಾಹನಗಳಲ್ಲಿ ಶೃಂಗೇರಿಗೆ ಪ್ರಯಾಣ ಬೆಳೆಸಿದರು. ಕರ್ನಾಟಕದ ಉಡುಪಿ, ಕಲ್ಯಾಣು³ರ, ಕಾಪು, ಕುಂದಾಪುರ, ಶಿವಮೊಗ್ಗ, ಮಂಗಳೂರು, ಸುಳ್ಯ, ಪುತ್ತೂರು, ಮಡಿಕೇರಿ, ಕಾಸರಗೋಡು ಮತ್ತಿತರ ಸ್ಥಳಗಳಿಂದ ನೂರಾರು ಮಂದಿ ಆಸ್ತಿಕರು ಕಾರ್ಯಕ್ರಮದ ದರ್ಶನಾಕಾಂಕ್ಷಿಗಳಾಗಿ ಶೃಂಗೇರಿ ಕ್ಷೇತ್ರಕ್ಕೆ ಆಗಮಿಸಿದ್ದರು. ಶೃಂಗೇರಿ ಕ್ಷೇತ್ರದ ನರಸಿಂಹವನದಲ್ಲಿರುವ ಗುರುನಿವಾಸದ ಸಭಾಂಗಣದಲ್ಲಿ ಬೆಳಗ್ಗೆಯಿಂದ ಸಮಾಜದ ನೂರಾರು ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು.
ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲೆಂದು ಮುದ್ರಿಸಿದ ಶ್ರೀ ಆದಿಶಂಕರಾಚಾರ್ಯ ವಿರಚಿತ ಶ್ರೀ ಅನ್ನಪೂರ್ಣೇಶ್ವರಿ ಸ್ತೋತ್ರವಲ್ಲದೆ ಶೃಂಗೇರಿ ಶ್ರೀ ಶಾರದಾ ದೇವಿ ಮತ್ತು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಛಾಯಾ ಚಿತ್ರಗಳನ್ನು ಜಗದ್ಗುರುಗಳು ಲೋಕಾರ್ಪಣೆಗೈದರು. ಸಮಾಜದ ಅಧ್ಯಕ್ಷ ಕರುಣಾಕರ ನಾಯ್ಕ ಅವರನ್ನು ಜಗದ್ಗುರುಗಳು ಶಾಲು ಹೊದೆಸಿ ಸಮ್ಮಾನಿಸಿದರು.
ಜಗದ್ಗುರುಗಳು ನೆರೆದಿದ್ದ ಭಕ್ತವೃಂದಕ್ಕೆ ಆಶೀರ್ವಚನ ಮಾಡುತ್ತ ಎಲ್ಲಾ ಭಕ್ತಾದಿಗಳಿಗೆ ಪರಮಾತ್ಮನು ಸುಖ, ಸಮೃದ್ಧಿಗಳನ್ನು ಕರುಣಿಸುವಂತಾಗಲಿ ಎಂದು ಹರಸಿದರು.
ಶೃಂಗೇರಿ ಜಗದ್ಗುರು ಪೀಠದ ಶಿಷ್ಯ ಪರಂಪರೆಯವರಾದ ಗಂಗಡಗಾರ ನಾಯ್ಕ ಸಮುದಾಯದವರು ತಮ್ಮ ಮುಂದಿನ ಏಳಿಗೆಯನ್ನು ಹಾರೈಸಿ ಪ್ರತಿವರ್ಷವೂ, ಅಧಿಕ ಸಂಖ್ಯೆ ಯಲ್ಲಿ, ಏಕತ್ರಿಕವಾಗಿ ಶೃಂಗೇರಿ ಕ್ಷೇತ್ರ ದರ್ಶನ ಮಾಡಿ, ಜಗದ್ಗುರು ಪೀಠದ ಆಶೀರ್ವಾದವನ್ನು ಪಡೆಯಬೇಕೆಂದು ತಿಳಿಸಿದರು. ಜಗದ್ಗುರುಗಳು ಪ್ರತಿಯೊಬ್ಬರಿಗೂ ಫಲ ಮಂತ್ರಾ ಕ್ಷತೆಯನ್ನಿತ್ತು ಹರಸಿದರು.