ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ 431 ಕೋಟಿ ರೂ. ಮೊತ್ತದ 14,577 ಕೊಳವೆ ಬಾವಿ ಕೊರೆಯುವ ಟೆಂಡರ್ ನೀರಾವರಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಕರೆಯಲಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 441 ಕೋಟಿ ರೂ. ಹಗರಣದಲ್ಲಿ ಕೆಲವು ಗುತ್ತಿಗೆದಾರರು ನಕಲಿ ಆದಾಯ ತೆರಿಗೆ ಹಾಗೂ ಕಾಮಗಾರಿಗಳ ದಾಖಲೆ ಸಲ್ಲಿಕೆ ಮಾಡಿದ್ದಾರೆ, ಟೆಂಡರ್ ಪರಿಶೀಲನಾ ಸಮಿತಿ ಪಾಲುದಾರಿಕೆಯಲ್ಲಿ ನೇರವಾಗಿ ಮಂತ್ರಿಗಳ ಅನುಮತಿ ಪಡೆದು ಅಕ್ರಮ ನಡೆದಿದೆ ಎಂದು ದೂರಿದರು.
ಒಂದೇ ಕೆಲಸಕ್ಕೆ ಎರಡು ಬೇರೆ ದರ ಯಾಕೆ ಎಂಬುದು ನನ್ನ ಪ್ರಶ್ನೆ. ಹಿಂದುಳಿದ ವರ್ಗಗಳ ಇಲಾಖೆಯ ಯೋಜನೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 84 ಸಾವಿರ ರೂ. ವೆಚ್ಚವಾದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ಕೊಳವೆ ಬಾವಿ ಕೊರೆಯಲು 1.93 ಲಕ್ಷ ರೂ. ವೆಚ್ಚವಾಗಿದೆ. ಈ ವ್ಯಾತ್ಯಾಸ ಯಾಕೆ ಎಂದು ಪ್ರಶ್ನಿಸಿದರು.
40 ಪರ್ಸೆಂಟ್ ಸರ್ಕಾರ ಬೇರೆ ಹಗರಣ ಮುಚ್ಚಿದ ಹಾಗೆ ಇದನ್ನೇ ಮುಚ್ಚಲು ಪ್ರಯತ್ನಿಸುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 431 ಕೋಟಿ ರೂ. ಹಣ ನುಂಗುತ್ತಾರೆ ಎಂದರೆ ಇವರು ಯಾವ ಮಟ್ಟಕ್ಕೆ ಇಳಿದಿದ್ದಾರೆ. ಈ ಸರ್ಕಾರ ಭ್ರಷ್ಟಾಚಾರದ ಸೋಂಕಿಗೆ ತುತ್ತಾಗಿರುವ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಈ ಅಕ್ರಮದ ಬಗ್ಗೆ ಪ್ರಶ್ನೆ ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದ ಸಚಿವರು ನಂತರ ತನಿಖೆಗೆ ಆದೇಶಿಸಿದ್ದಾರೆ. ಮಂತ್ರಿಗಳು, ಇಲಾಖೆ ಅಧಿಕಾರಿಗಳು ಇವರಿಂದ ಎಷ್ಟು ಕಮಿಷನ್ ಪಡೆದಿದ್ದಾರೆ. ಬಿಜೆಪಿಯ 40 ಪರ್ಸೆಂಟ್ ಮಾನದಂಡವಾಗಿ ನೋಡುವುದಾದರೆ 431 ಕೋಟಿ ರೂ. ಯೋಜನೆಯಲ್ಲಿ 173 ಕೋಟಿ ಹಗರಣ ಇದಾಗಿದ್ದು, ಯಾರಿಗೆಲ್ಲ ಎಷ್ಟೇಷ್ಟು ಕಿಕ್ ಬ್ಯಾಕ್ ಹೋಗಿದೆ ಎಂಬುದು ಗೊತ್ತಾಗುತ್ತದೆ ಎಂದು ದೂರಿದರು.
ಆದಾಯ ತೆರಿಗೆ ಪ್ರಮಾಣ ಪತ್ರವನ್ನು ನಕಲಿ ಮಾಡಿರುವ ಬಗ್ಗೆ ಇದೇ ಸಂದರ್ಭದಲ್ಲಿ ಕೆಲವೊಂದು ದಾಖಲೆ ಬಹಿರಂಗಪಡಿಸಿದರು.
ಈ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಭರವಸೆ ಇಲ್ಲ. ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ ಅವರು ಉಪಸ್ಥಿತರಿದ್ದರು.