Advertisement

ಗಂಗಾ ಕಲ್ಯಾಣ ವಿದ್ಯುದ್ದೀಕರಣ ಬಾಕಿ: ಜಿ.ಪಂ. ಅಧ್ಯಕ್ಷರ ಅಸಮಾಧಾನ

12:50 AM Jan 18, 2019 | Harsha Rao |

ಉಡುಪಿ: ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುದೀಕರಣ ಮಾಡುವ ಕುರಿತು ಮತ್ತು  ಪ. ಜಾತಿಗೆ ಸಂಬಂಧಿಸಿದಂತೆ ಎಲ್ಲ 20 ಅರ್ಜಿಗಳು ಬಾಕಿ ಇರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು, ಕೂಡಲೇ ಈ ಬಗ್ಗೆ  ಕ್ರಮ ಕೈಗೊಂಡು ವರದಿ ನೀಡುವಂತೆ ಸೂಚಿಸಿದರು. 
ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಪಶುಪಾಲನಾ  ಇಲಾಖೆ  ವತಿಯಿಂದ ಗಿರಿರಾಜ ಕೋಳಿಗಳನ್ನು ವಿತರಿಸಲು ಫ‌ಲಾನುಭವಿಗಳನ್ನು ಆಯ್ಕೆ ಮಾಡುವಾಗ ಜಿ.ಪಂ. ಅಧ್ಯಕ್ಷರ ಮತ್ತು ಸದಸ್ಯರ ಗಮನಕ್ಕೆ ತಾರದೆ ಆಯ್ಕೆ ಮಾಡುತ್ತಿದ್ದು, ಇನ್ನು ಮುಂದೆ  ಜಿ.ಪಂ. ಅಧ್ಯಕ್ಷರ ಮತ್ತು ಸ್ಥಳಿಯ ಜಿ.ಪಂ ಸದಸ್ಯರ ಗಮನಕ್ಕೆ ತಂದು ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿ.ಪಂ. ಸದಸ್ಯರ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳ ಬಗ್ಗೆ ಪ್ರತಿ  ಎರಡು ತಿಂಗಳಿಗೊಮ್ಮೆ ಸಭೆ  ನಡೆಸಬೇಕೆಂದು ಈ ಹಿಂದೆಯೇ ನಿರ್ಣಯ ಮಾಡಿದ್ದರೂ  ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ ಹಾಗೂ ಸದಸ್ಯರ ಗಮನಕ್ಕೆ ತರುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಸಭೆಗಳನ್ನು ಆಯೋಜಿಸಿ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. 

 ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ  ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಗಂಗೊಳ್ಳಿ ಬಂದರುಕಟ್ಟೆ  ನಿರ್ಮಾಣಕ್ಕೆ ದುಂಡಿಕಲ್ಲು ಹಾಕಿರುವ ಕುರಿತು, ಬೈಂದೂರು ತಾ|  ವ್ಯಾಪ್ತಿಯ ಸಮುದ್ರಕ್ಕೆ ದುಂಡಿಕಲ್ಲು ಸಾಗಾಟವಾಗಿರುವ ಕುರಿತು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಾವತಿಸಿಕೊಂಡಿರುವ ರಾಜಧನದ ಕುರಿತು ಸಮರ್ಪಕ ಮಾಹಿತಿ ನೀಡಲು ಮತ್ತು ರಾಜಧನದ ಪಾಲನ್ನು ಸ್ಥಳೀಯ ಪಂಚಾಯತ್‌ಗಳಿಗೆ ನೀಡಲು ಸೂಚಿಸಿದರು.

ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯನ್ನು ಸ್ಥಳೀಯ ಪಂಚಾಯತ್‌ ವ್ಯಾಪ್ತಿಯಲ್ಲಿ  ಬಳಕೆದಾರರ ಸಂಘಗಳನ್ನು ಸ್ಥಾಪಿಸಿ, ಅವುಗಳಿಗೆ ನೀಡುವಂತೆ ಬಾಬು ಶೆಟ್ಟಿ ತಿಳಿಸಿದರು. ಹೆಜಮಾಡಿಯಲ್ಲಿ ಟೋಲ್‌ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸುವ ಸಾಧ್ಯತೆ ಇದೆ. ಸಮಸ್ಯೆ ಬಗ್ಗೆ  ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ನಿರ್ಣಯ ಮಂಡಿಸುವಂತೆ  ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ ತಿಳಿಸಿದರು. 

ಎಲ್ಲ ಇಲಾಖೆಗಳು ತಮ್ಮ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚಿಸಿದ ಜಿ.ಪಂ. ಸಿಇಒ ಸಿಂಧು ರೂಪೇಶ್‌, ಎಸ್‌.ಸಿ.ಪಿ.ಟಿ.ಎಸ್‌.ಪಿ.

Advertisement

ಯೋಜನೆಯ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುರಿ ಸಾಧಿಸದಿದ್ದಲ್ಲಿ  ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವುದು ಅನಿವಾರ್ಯವಾಗಲಿದ್ದು, ತಾಲೂಕು ಮಟ್ಟದಲ್ಲಿ ಅನುಷ್ಠಾನ  ಸಮಿತಿ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ತಾ.ಪಂ. ಇಒಗಳಿಗೆ ಸೂಚಿಸಿದರು. 

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್‌. ಕೋಟ್ಯಾನ್‌, ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next