ನವದೆಹಲಿ: ದೇಶದಲ್ಲಿ ಕೋವಿಡ್, ಇತರ ಫಂಗಸ್ ಸೋಂಕು ಪತ್ತೆಯಾಗುತ್ತಿರುವ ನಡುವೆಯೇ ಅವಧಿ ಮೀರಿದ ಹಾಗೂ ಬ್ಲ್ಯಾಕ್ ಫಂಗಸ್ ನಕಲಿ ಔಷಧ ಮಾರಾಟ ಮಾಡುತ್ತಿದ್ದ ತಂಡವನ್ನು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಭಾನುವಾರ (ಜೂನ್ 20) ಬಂಧಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ
ಇಬ್ಬರು ವೈದ್ಯರು ಸೇರಿದಂತೆ ಹತ್ತು ಮಂದಿಯನ್ನು ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ತಂಡ ಸುಮಾರು 400 ನಕಲಿ ಇಂಜೆಕ್ಷನ್ ಗಳನ್ನು ರೋಗಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದೆ.
ಬಂಧಿತ ಆರೋಪಿಗಳಿಂದ 3,500 ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಹಾಗೂ ರೆಮ್ಡಿಸಿವಿರ್ ಔಷಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ. ಈ ಜಾಲ ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಅನ್ನು ಹತ್ತು ಸಾವಿರದಿಂದ ಹದಿನೈದು ಸಾವಿರ ರೂಪಾಯಿವರೆಗೆ ರೋಗಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ವಿವರಿಸಿದೆ.
ಬಂಧಿತ ಆರೋಪಿಗಳಾದ ಡಾ.ಅಲ್ತಮಸ್ ಮತ್ತು ಡಾ.ಅಮೀರ್ ನಕಲಿ ಚುಚ್ಚುಮದ್ದು ಬಳಸುತ್ತಿದ್ದರು. ಹೆಚ್ಚಿನ ಚುಚ್ಚುಮದ್ದು ಕಪ್ಪು ಶಿಲೀಂಧ್ರ ರೋಗಕ್ಕೆ ಬಳಸುವ ಲಿಫೋಸೋಮಲ್ ಆಂಪೋಟೆರಿಸಿನ್ ಬಿ ಇಂಜೆಕ್ಷನ್ ಹಾಗೂ ಕೆಲವು ರೆಮ್ಡಿಸಿವಿರ್ ಚುಚ್ಚುಮದ್ದುಗಳಾಗಿದ್ದು, ಇದರಲ್ಲಿ ಕೆಲವು ಅವಧಿ ಮೀರಿರುವುದಾಗಿ ವರದಿ ತಿಳಿಸಿದೆ.