Advertisement

ಊರಿಗೆಲ್ಲ ಬೆಳಕು ನೀಡುವ ಗ್ಯಾಂಗ್ ಮನ್‌ಗಳೇ ಕತ್ತಲಲ್ಲಿ !

10:10 AM Aug 02, 2018 | Team Udayavani |

ಸುಳ್ಯ : ಒಂದು ಕ್ಷಣ ಮೈಮರೆತರೂ ಪ್ರಾಣಕ್ಕೆ ಕಂಟಕ. ಅಂತಹ ಕಷ್ಟದ ಸ್ಥಿತಿಯಲ್ಲಿ ಗಾಳಿ, ಮಳೆ, ಚಳಿಗೆ ಮೈಯೊಡ್ಡಿ ಮೆಸ್ಕಾಂ ಗ್ಯಾಂಗ್‌ಮನ್‌ಗಳು ಕೆಲಸ ಮಾಡುತ್ತಾರೆ. ಹತ್ತಾರು ವರ್ಷಗಳ ಇವರ ಸೇವೆಗೆ ಇನ್ನೂ ಸೂಕ್ತ ನ್ಯಾಯ ದೊರೆತಿಲ್ಲ. ಊರಿಗೆಲ್ಲ ಬೆಳಕು ಮೂಡಲು ನೆರವಾಗುವ ಗ್ಯಾಂಗ್‌ಮನ್‌ಗಳ ಬದುಕು ಕತ್ತಲಲ್ಲಿದೆ. ಮೆಸ್ಕಾಂ ಇಲಾಖೆಯಲ್ಲಿ ಹಲವು ವರ್ಷಗಳಿಂದ ಮಾನ್ಸೂನ್‌ ಗ್ಯಾಂಗ್‌ಮನ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯುತ್‌ ತಂತಿ ಹಾದು ಹೋಗುವ ಕಂಬ ಹಾಗೂ ಪಕ್ಕದ ಮರಗಳನ್ನು ಹತ್ತಿ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ.

Advertisement

ದ.ಕ. ಜಿಲ್ಲೆಯ ಐದು ತಾಲೂಕುಗಳಲ್ಲಿ 180ಕ್ಕೂ ಮಿಕ್ಕಿ ಗ್ಯಾಂಗ್‌ಮನ್‌ಗಳಿದ್ದಾರೆ. ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿರುವ ಇವರ ಸೇವೆ ಖಾಯಂ ಆಗಿಲ್ಲ. ಕನಿಷ್ಠ ಸುರಕ್ಷತೆಯೂ ಇವರಿಗಿಲ್ಲ.

ಸರಿಸಮನಾದ ಕೆಲಸ
ಗ್ರಾಮೀಣ ಮತ್ತು ನಗರದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆಯಲ್ಲಿ ಈ ಕಿರಿಯ ಮಾರ್ಗದಾಳು ಪಾತ್ರ ಬಹು ಮುಖ್ಯವಾಗಿದೆ. ಮಳೆಗಾಲದ ಅವಧಿಯಲ್ಲಿ ತುರ್ತು ಸೇವೆಗೆಂದು ಮೆಸ್ಕಾಂ ಇಲಾಖೆ ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳುತ್ತದೆ. ವಿದ್ಯುತ್‌ ಸರಬರಾಜು ಮಾರ್ಗದ ಬದಿ ತಂತಿಗೆ ತಾಗಿಕೊಂಡಿರುವ ಮರಗಳ ಕಟ್ಟಿಂಗ್‌ ಹಾಗೂ ವಿದ್ಯುತ್‌ ಮಾರ್ಗದಲ್ಲಿ ವ್ಯತ್ಯಯಗಳು ಕಾಣಿಸಿಕೊಂಡಾಗ ಅದರ ದುರಸ್ತಿ ಕಾರ್ಯ ನಡೆಸುತ್ತಾರೆ. ಮೆಸ್ಕಾಂನ ಖಾಯಂ ಸಿಬಂದಿಗೆ ಸರಿಸಮನಾಗಿ ಇವರು ಕೆಲಸ ನಿರ್ವಹಿಸುತ್ತಾರೆ.

ಗುತ್ತಿಗೆ ಆಧಾರದಲ್ಲಿ ನೇಮಕ
ಮೆಸ್ಕಾಂ ಪ್ರತಿ ಮಳೆಗಾಲದ ಅವಧಿಯಲ್ಲಿ ಅಂದರೆ ಮಾನ್ಸೂನ್‌ ಪ್ರಾರಂಭವಾಗುವ ಜೂನ್‌ ತಿಂಗಳಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ ಈ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ. ಮಳೆಗಾಲ ಮುಗಿದ ಬಳಿಕ ಇವರಿಗೆ ಕೆಲಸವಿಲ್ಲ. ಮತ್ತೆ ಮಳೆಗಾಲದ ಅವಧಿಯಲ್ಲಿ ಕರೆದು ಪುನಃ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ. ಹೀಗಾಗಿ ವರ್ಷದ ಸೀಮಿತ ಅವಧಿಯಲ್ಲಿ ಅವರಿಗೆ ಉದ್ಯೋಗ ಸಿಗುತ್ತದೆ.

ಭದ್ರತೆ, ಸವಲತ್ತು ಇಲ್ಲ
ಮಳೆಗಾಲದಲ್ಲಿ ಕಠಿನ ಮತ್ತು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಗ್ಯಾಂಗ್‌ ಮನ್‌ ಕಾರ್ಮಿಕರೆಲ್ಲರೂ ಸ್ಥಳೀಯರು. ಸ್ಥಳೀಯ ಪ್ರದೇಶಗಳ ಮಾಹಿತಿ ಇರುವ ಅವರು ಇಲ್ಲಿನ ವಾತಾವರಣಕ್ಕೂ ಹೊಂದಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ಗುತ್ತಿಗೆದಾರ ನಿಗದಿಪಡಿಸಿದ ವೇತನ ಹೊರತುಪಡಿಸಿ ಇನ್ನಾವುದೇ ಸವಲತ್ತು ಸಿಗುತ್ತಿಲ್ಲ. ಸುರಕ್ಷತೆಗೆ ವ್ಯವಸ್ಥೆಗಳಿಲ್ಲ.

Advertisement

ನೇಮಕಾತಿಯಲ್ಲೂ ಪರಿಗಣಿಸಿಲ್ಲ
ಮೆಸ್ಕಾಂಗೆ ನೌಕರರ ನೇಮಕಾತಿ ವೇಳೆ ಹತ್ತಾರು ವರ್ಷಗಳಿಂದ ಮೆಸ್ಕಾಂನಲ್ಲಿ ಕೆಲಸ ಮಾಡಿದ ತಾತ್ಕಾಲಿಕ ಮತ್ತು ಸ್ಥಳೀಯ ನೌಕರರಿಗೆ ಆದ್ಯತೆ ಕೊಡಬೇಕಿತ್ತು. ಮಾನವೀಯ ನೆಲೆಯಲ್ಲಾದರೂ ಪರಿಗಣಿಸಿ ಅವಕಾಶ ನೀಡಬೇಕಿತ್ತು. ಆದರೆ, ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಗೊಂಡು ಮೆಸ್ಕಾಂನ ಉಪವಿಭಾಗಳಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಅನ್ಯ ಕೆಲಸಕ್ಕೂ ಬಳಕೆಯಾದರು!
ತುರ್ತು ಕೆಲಸಕ್ಕೆಂದು ಗ್ಯಾಂಗ್‌ ಮನ್‌ ಗಳನ್ನು ನೇಮಿಸಿಕೊಂಡ ಮೆಸ್ಕಾಂ ಇಲಾಖೆ ಈ ಕಾರ್ಮಿಕರ ಪೈಕಿ ಕೆಲವರನ್ನು ಬಿಳಿನೆಲೆಯಲ್ಲಿ ಅರಣ್ಯದೊಳಗೆ ಗಿಡ ನೆಡಲು ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ನೌಕರರಲ್ಲಿ ಅಸಮಾಧಾನ ಉಂಟಾಗಿದೆ. ಮೆಸ್ಕಾಂನ ನಾನಾ ವಿಭಾಗಗಳಲ್ಲಿ ಸಿಬಂದಿ ಕೊರತೆ ಇದ್ದು, ಈ ಸ್ಥಾನಕ್ಕೆ ಅನುಭವದ ಆಧಾರದಲ್ಲಿ ಗ್ಯಾಂಗ್‌ಮನ್‌ಗಳನ್ನು ನೇಮಿಸಬಹುದಿತ್ತು.

ಸಚಿವರಿಗೆ ಮನವಿಯಿತ್ತರೂ ಪ್ರಯೋಜನವಿಲ್ಲ
ಉ.ಕ. ಭಾಗದಿಂದ ನೇಮಕಗೊಂಡು ಕರಾವಳಿ ಜಿಲ್ಲೆಗೆ ಆಗಮಿಸಿದ ಲೈನ್‌ಮೆನ್‌ ಗಳ ಪೈಕಿ ಹಲವು ಮಂದಿ ಕೆಲಸಕ್ಕೆ ನಿಯೋಜನೆಗೊಂಡ ಆರಂಭದಲ್ಲಿ ಇಲ್ಲಿನ ವಾತಾವರಣ, ಆಹಾರಕ್ಕೆ ಹೊಂದಿಕೊಳ್ಳಲಾಗದೆ ಕೆಲಸ ಬಿಟ್ಟು ಊರಿಗೆ ಮರಳಿದ್ದಾರೆ. ಕೆಲ ಮಂದಿಯಷ್ಟೆ ಜಿಲ್ಲೆಯಲ್ಲಿ ಉಳಿದುಕೊಂಡಿದ್ದು, ಇಲ್ಲಿನ ವಾತಾವರಣಕ್ಕೆ ನಿಧಾನಕ್ಕೆ ಹೊಂದಿಕೊಂಡಿದ್ದಾರೆ. ಸುಧೀರ್ಘ‌ ಅವಧಿಗೆ ಇಲಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಗ್ಯಾಂಗ್‌ ಮನ್‌ಗಳು ಮೆಸ್ಕಾಂನ ಉನ್ನತ ಅಧಿಕಾರಿಗಳು, ಇಂಧನ ಸಚಿವರಿಗೆ ಮನವಿ ಸಲ್ಲಿಸಿ ತಮ್ಮನ್ನು ಖಾಯಂಗೊಳಿಸುವಂತೆ ಬೇಡಿಕೆ ಸಲ್ಲಿಸಿದ್ದರು. ಗ್ಯಾಂಗ್‌ಮನ್‌ ಗಳು ಹೋರಾಟ ನಡೆಸುತ್ತಿದ್ದರೂ ಸರಕಾರದಿಂದ ಸ್ಪಂದನೆ ಸಿಕ್ಕಿಲ್ಲ.

ನಮ್ಮನ್ನು ಪರಿಗಣಿಸಿ
ಹಲವು ಸಮಯಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸೇವೆ ಖಾಯಂಗೊಳಿಸಿಲ್ಲ. ನೇಮಕಾತಿ ವೇಳೆ ನಮ್ಮನ್ನು ಅನುಭವ ಮತ್ತು ಆದ್ಯತೆ ಮೇಲೆ ಪರಿಗಣಿಸುವಂತೆ ಆಗ್ರಹಿಸಿದ್ದರೂ, ಈವರೆಗೆ ಪರಿಗಣಿಸಿಲ್ಲ.
– ಹರೀಶ್‌ಎಂ.
ತಾತ್ಕಾಲಿಕ ನೌಕರ

 ಏಜೆನ್ಸಿ ಮೂಲಕ ನೇಮಕ
ತಾತ್ಕಾಲಿಕ ಅವಧಿಗೆ ಏಜೆನ್ಸಿ ಮೂಲಕ ಗ್ಯಾಂಗ್‌ಮನ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅವರ ಶ್ರಮದ ಕುರಿತು ಅನುಕಂಪವಿದೆ. ಆದರೆ ಖಾಯಂ ವಿಚಾರ ಸರಕಾರ ಮಟ್ಟದಲ್ಲಿ ನಿರ್ಧಾರವಾಗುವಂತಹದು. ನಾವು ನಿರ್ಧಾರ ತೆಗೆದುಕೊಳ್ಳುವಂತಿಲ್ಲ. 
– ಹರೀಶ್‌ ನಾಯ್ಕ,
 ಎಇಇ, ಮೆಸ್ಕಾಂ ಸುಳ್ಯ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next