Advertisement

ಗಣೇಶೋತ್ಸವ : ಮಂಗಳೂರು; ಭಕ್ತಿ ಸಂಭ್ರಮದ ಆಚರಣೆಗೆ ಸಿದ್ಧತೆ

10:59 PM Aug 21, 2020 | mahesh |

ಮಹಾನಗರ: ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಶನಿವಾರ ಗಣೇಶೋತ್ಸವ ಆಚರಣೆ ಭಕ್ತಿ-ಸಂಭ್ರಮದಿಂದ ಜರಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಯಂತೆ ಸರಳವಾಗಿ ಎಲ್ಲೆಡೆ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ಮಂಗಳೂರಿನ ವಿವಿಧ ಕಡೆಗಳಲ್ಲಿ ಸಾರ್ವ ಜನಿಕ ಗಣೇಶೋತ್ಸವ ಈ ಬಾರಿ ಸರಳ ವಾಗಿ ನಡೆಸಲು ತೀರ್ಮಾನಿಸಲಾಗಿದೆ. ದೇವ –ಸ್ಥಾನ ಗಳಲ್ಲಿಯೂ ಸಾಂಪ್ರದಾಯಿಕವಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಈ ಬಾರಿ ಬಹುತೇಕ ಜನರು ತಮ್ಮ ಮನೆಗಳಲ್ಲಿಯೇ ಗಣೇಶ ಚತುರ್ಥಿ ಆಚರಣೆ ನಡೆಸಲಿದ್ದಾರೆ.

Advertisement

ಗಣೇಶೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರು ಮಾರುಕಟ್ಟೆಯಲ್ಲಿ ಹೆಚ್ಚಿನ ಖರೀದಿ ನಡೆಯಿತು. ಹೂವು, ಹಣ್ಣು- ತರಕಾರಿ ಖರೀದಿಗಾಗಿ ಜನರು ಸೇರಿದ್ದರು. ಸೆಂಟ್ರಲ್‌ ಮಾರುಕಟ್ಟೆ ಬಂದ್‌ ಆದ ಹಿನ್ನೆಲೆ ಯಲ್ಲಿ ರಸ್ತೆ ಬದಿ ಮಾರಾಟ ನಡೆಸುತ್ತಿದ್ದ ಮಾರಾಟಗಾರರಿಂದ ಜನರು ಖರೀದಿ ಮಾಡುತ್ತಿದ್ದ ದೃಶ್ಯ ಕಂಡುಬಂತು. ಜತೆಗೆ ಕಬ್ಬು ಮಾರಾಟ ಕೂಡ ಜೋರಾಗಿತ್ತು.

ಚೌತಿ ಪ್ರಯುಕ್ತ ತರಕಾರಿ, ಹೂವು ಬೆಲೆ ಹೆಚ್ಚಳ
ಚೌತಿ ಹಬ್ಬದ ಸಂಭ್ರಮದಲ್ಲಿ ಹೂವು ಮತ್ತು ತರಕಾರಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಇವೆರಡೂ ವಸ್ತುಗಳ ಬೆಲೆ ಮಂಗಳೂರಿನ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಹೂವಿನ ಬೆಲೆ ಸರಾಸರಿ ಶೇ.60ರಷ್ಟು ಹಾಗೂ ತರ ಕಾರಿಗಳ ದರ ಅದರಲ್ಲೂ ಮುಖ್ಯವಾಗಿ ಸ್ಥಳೀಯ ತರಕಾರಿ ಬೆಲೆ ಸರಾಸರಿ ಶೇ. 50ರಷ್ಟು ಹೆಚ್ಚಳವಾಗಿದೆ.

ಮಂಗಳೂರು ಗ್ರಾಮಾಂತರದ ವಿವಿಧೆಡೆ ಕೂಡ ಚೌತಿ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿತ್ತು. ಹಳೆಯಂಗಡಿ ಮುಖ್ಯ ಪೇಟೆಯಲ್ಲಿ ಶುಕ್ರ ವಾರ ಹೂ, ಹಣ್ಣು, ತರಕಾರಿ ಹಾಗೂ ಕಬ್ಬುಗಳ ಮಾರಾಟ ನಡೆಯಿತು. ಚೌತಿ ಹಬ್ಬದ ಮುನ್ನಾ ದಿನವಾದ ಶುಕ್ರವಾರದ ದರಗಳು (ಕೆಲವು ಸ್ಥಳೀಯ ತರಕಾರಿಗಳು) ಬೆಂಡೆ 200 ರೂ., ಮುಳ್ಳು ಸೌತೆ 120 ರೂ., ಹೀರೆಕಾಯಿ 100 ರೂ., ಹರಿವೆ ದಂಟು 50 ರೂ., ಶುಂಠಿ ಗಿಡ 20 ರೂ., ಅಲಸಂಡೆ 80 ರೂ., ಸೌತೆ 30 ರೂ., ಹಸಿ ಮೆಣಸು 60 ರೂ., ದೀವಿ ಹಲಸು 80- 100 ರೂ., ಹಾಗಲಕಾಯಿ 200 ರೂ. (ಬಯಲು ಸೀಮೆಯ ತರಕಾರಿಗಳ ಬೆಲೆ) ಟೊಮೇಟೊ 30 ರೂ., ಬಟಾಟೆ 32 ರೂ., ಹಾಗಲ ಕಾಯಿ 50 ರೂ., ಈರುಳ್ಳಿ 22 ರೂ., ಮುಳ್ಳು ಸೌತೆ 40 ರೂ.

ವಿವಿಧೆಡೆ ಸರಳ ಆಚರಣೆ
ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆ. 22ರಂದು ಸರಳವಾಗಿ ಗಣೇಶ ಚತುರ್ಥಿ ಉತ್ಸವ ನಡೆಯಲಿದೆ. ನಗರದ ಸಂಘ ನಿಕೇತನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಶನಿವಾರ ಬೆಳಗ್ಗೆ ನಡೆಯಲಿದ್ದು, ಅತ್ಯಂತ ಸರಳವಾಗಿ ಪೂಜಾ ವಿಧಿವಿಧಾನಗಳು ನೆರವೇರಲಿದೆ. ಹಿಂದೂ ಯುವಸೇನೆ ಆಶ್ರಯದಲ್ಲಿ ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆಯುತ್ತಿದ್ದ ಮಂಗಳೂರು ಗಣೇಶೋತ್ಸವವನ್ನು ಸರಳವಾಗಿ ಶರವು ದೇವಾಲಯದ ಬಳಿಯ ಬಾಳಂಭಟ್‌ ಹಾಲ್‌ನಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಬಂಟ್ಸ್‌ಹಾಸ್ಟೆಲ್‌ ಓಂಕಾರ ನಗರ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಈ ಬಾರಿ ಸಾಂಪ್ರದಾಯಿಕವಾಗಿ ಆ. 22ರಂದು ಕೇವಲ ಗಣಪತಿಹೋಮ ಮಾಡುವ ಮೂಲಕ ಗಣೇಶೋತ್ಸವ ಆಚರಿಸಲಾಗುತ್ತದೆ.

Advertisement

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆ. 22ರಂದು ಬೆಳಗ್ಗಿನಿಂದ ರಾತ್ರಿಯವರೆಗೆ ಸರಳವಾಗಿ ಗಣಪತಿ ದೇವರಿಗೆ ವಿಶೇಷ ಪೂಜೆ ನೆರವೇರಲಿದೆ. ಅತ್ತಾವರ ಶ್ರೀ ಚಕ್ರಪಾಣಿ ಸೇವಾ ಸಮಿತಿಯ ಆಶ್ರಯದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದ್ದು, ಆ. 22ರಂದು ಬೆಳಗ್ಗೆ ಶ್ರೀ ಗಣೇಶ ದೇವರ ಪ್ರತಿಷ್ಠೆಯಾಗಿ ಆ. 23ರಂದು ಸಂಜೆ ವಿಸರ್ಜನ ಪೂಜೆ ನಡೆಯಲಿದೆ. ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಆ. 22ರಂದು ಒಂದೇ ದಿನ ಸರಳವಾಗಿ ಆಚರಿಸಲು ತೀರ್ಮಾ ನಿಸಲಾಗಿದೆ. ಪಾಂಡೇಶ್ವರ ಪೊಲೀಸ್‌ ಲೇನ್‌ನ ಶ್ರೀ ಮುನೀಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಆ. 22ರಿಂದ 26ರ ವರೆಗೆ ಸರಕಾರದ ನಿಯಮಾವಳಿಯಂತೆ ಸರಳವಾಗಿ ನಡೆಯಲಿದೆ. ಹೊಸಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ರಾಘವೇಂದ್ರ ಮಠದಲ್ಲಿ ವಾರ್ಷಿಕ ಚೌತಿ ಪ್ರಯುಕ್ತ ಬೆಳಗ್ಗೆ 8ಕ್ಕೆ ಗಣೇಶ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಭಜನೆ ಮಧ್ಯಾಹ್ನ ಮಹಾಪೂಜೆ, ರಾತ್ರಿ ಮಹಾಪೂಜೆ ಬಳಿಕ ಶೋಭಯಾತ್ರೆ ರಹಿತ ವಿಗ್ರಹ ವಿಸರ್ಜನೆ ಜರಗಲಿದೆ.

ಮೂಡುಬಿದಿರೆ: ವ್ಯಾಪಾರ ಕೊಂಚ ಚೇತರಿಕೆ
ಮೂಡುಬಿದಿರೆ: ಗಣೇಶ ಚತುರ್ಥಿಯ ಮುನ್ನಾ ದಿನವಾದ ಶುಕ್ರವಾರ ಮೂಡುಬಿದಿರೆಯ ವಾರದ ಸಂತೆಯಾಗಿದ್ದರೂ ಖರೀದಿ ಭರಾಟೆ ಕಡಿಮೆಯಿತ್ತು. ಕಬ್ಬಿನ ಕೋಲು ಒಂದಕ್ಕೆ 50-80 ರೂ., ಊರಬೆಂಡೆ ಕೆಜಿಗೆ 200 ರೂ. ಇತ್ತು. ಉಳಿದಂತೆ ತರಕಾರಿ, ಹೂವು, ಹಣ್ಣುಹಂಪಲು ವ್ಯಾಪಾರವೇನೋ ಕೊಂಚ ಚೇತರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next