Advertisement

ಗಣೇಶೋತ್ಸವ; ಡಿಜೆ ನಿಷೇಧ ಕಡ್ಡಾಯ

05:27 PM Aug 29, 2022 | Shwetha M |

ಮುದ್ದೇಬಿಹಾಳ: ಗಣೇಶೋತ್ಸವದಲ್ಲಿ ಡಿಜೆ ಬಳಕೆಗೆ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ. ನಿಷೇಧ ಉಲ್ಲಂಘಿಸಿ ಡಿಜೆ ಬಳಸುವ ಪಟ್ಟಣ ಮತ್ತು ಗ್ರಾಮೀಣ ಭಾಗದ ಗಣೇಶೋತ್ಸವ ಮಂಡಳಿಗಳ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ರೇಣುಕಾ ಜಕನೂರ ಎಚ್ಚರಿಕೆ ನೀಡಿದರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗಣೇಶೋತ್ಸವ ಹಿನ್ನೆಲೆ ರವಿವಾರ ಏರ್ಪಡಿಸಿದ್ದ ಗಣೇಶೋತ್ಸವ ಮಂಡಳಿಗಳು, ಸಮುದಾಯಗಳ ಮುಖಂಡರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ನಮ್ಮದೇ ಸ್ವಂತ ಡಿಜೆ ಇದೆ, ಬಳಸುತ್ತೇವೆ ಎಂದರೆ ನಡೆಯೊಲ್ಲ. ಈ ಬಾರಿ ನಿಯಮಗಳು ಅತ್ಯಂತ ಕಠಿಣವಾಗಿವೆ. ಗಣೇಶ ಪ್ರತಿಷ್ಠಾಪನೆ, ವಿಸರ್ಜನೆಗೆ ಸರ್ಕಾರ ನಿಯಮ ಹೊರಡಿಸಿದೆ. ಅವುಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಶಾಂತಿಗೆ ಭಂಗ ತರುವ ಘಟನೆ, ಸನ್ನಿವೇಶ ಕಂಡುಬಂದಲ್ಲಿ ತಕ್ಷಣ ಠಾಣೆ ಅಥವಾ ಬೀಟ್‌ ಪೊಲೀಸರ ಗಮನಕ್ಕೆ ತಂದು ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.

ಪಿಎಸೈ ರೇಣುಕಾ ಮಾತನಾಡಿ, ಗಣಪತಿ ಮೂರ್ತಿ ಕಾಯುವ ಕೆಲಸ ಪೊಲೀಸರದ್ದಲ್ಲ. ಇದಕ್ಕಾಗಿ ಪೊಲೀಸರನ್ನು ನೇಮಿಸಲಾಗುವುದಿಲ್ಲ. ನಿಮ್ಮ ಗಣಪತಿಗಳನ್ನು ನೀವೇ ಕಾಯಬೇಕು. ಇದಕ್ಕಾಗಿ ಮಂಡಳಿಯವರು ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಸಂಬಂಧಿಸಿದ ಮಂಡಳಿಯವರೇ ಹೊಣೆ. ದಿನದ 24 ಗಂಟೆ ಆಯೋಜಕರಲ್ಲಿ ಯಾರಾದರೊಬ್ಬರು ಇದ್ದು ಗಣಪತಿ ಕಾಯಬೇಕು. ಇದು ಕಡ್ಡಾಯ ಎಂದು ಹೇಳಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹೊರಡಿಸಿರುವ ಮಾರ್ಗಸೂಚಿ ನಿಯಮ ಸಭೆಗೆ ಓದಿ ಹೇಳಿ ವಿವರಿಸಿದರು.

ಸಿಪಿಐ ಆನಂದ ಮಾತನಾಡಿ, ಗಣೇಶ ಮೂರ್ತಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಪ್ರತಿಯೊಬ್ಬ ಮಂಡಳಿಯವರು ಕಡ್ಡಾಯವಾಗಿ ಸಂಬಂಧಿಸಿದವರಿಂದ ಅನುಮತಿ ಪಡೆದುಕೊಳ್ಳಬೇಕು. ಮುದ್ದೇಬಿಹಾಳ ಪಟ್ಟಣಕ್ಕೆ ಸಂಬಂಧಿಸಿದಂತೆ ಪುರಸಭೆ, ಹೆಸ್ಕಾಂ ಮತ್ತು ಪೊಲೀಸ್‌ ಇಲಾಖೆ ಪ್ರತಿನಿಧಿಗಳು, ಗ್ರಾಮೀಣ ಭಾಗಕ್ಕೆ ಸಂಬಂಧಿಸಿದಂತೆ ಆಯಾ ಗ್ರಾಪಂ, ಹೆಸ್ಕಾ, ಪೊಲೀಸ್‌ ಪ್ರತಿನಿಧಿಗಳು ಅನುಮತಿ ಕೊಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅನುಮತಿ ಇಲ್ಲದೇ ಗಣಪತಿ ಪ್ರತಿಷ್ಠಾಪಿಸಿದರೆ ಅದರ ಆಗು-ಹೋಗುಗಳಿಗೆ ಕೂಡಿಸಿದವರೇ ಹೊಣೆ. ಸಂಚಾರಕ್ಕೆ ಅಡ್ಡಿಯಾಗುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಮಂಟಪ, ಧ್ವನಿವರ್ಧಕದಲ್ಲಿ ಹಾಡು ಹಾಕಬಾರದು ಎಂದರು.

ಗಣೇಶೋತ್ಸವ ಸಂದರ್ಭ ಮಂಡಳಿಯವರು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು, ಅನ್ಯ ಕೋಮಿನವರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ರಸ್ತೆಗಳಲ್ಲಿ ಪ್ರಯಾಣಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡುವುದನ್ನು ತಡೆಯುವುದು ಸೇರಿ ಕೆಲ ಪ್ರಮುಖ ಅಂಶಗಳ ಕುರಿತು ಸಾರ್ವಜನಿಕರ ಪರವಾಗಿ ಬಸಯ್ಯ ನಂದಿಕೇಶ್ವರಮಠ ಮತ್ತಿತರ ಪ್ರಮುಖರು ಮಾತನಾಡಿ ಸಲಹೆ ಸೂಚನೆ ನೀಡಿದರು.

Advertisement

ಮುದ್ದೇಬಿಹಾಳ ಪೊಲೀಸ್‌ ಠಾಣೆ ವ್ಯಾಪ್ತಿಯ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಆಲಮಟ್ಟಿ, ತಂಗಡಗಿ, ನಾಲತವಾಡ, ತಾಳಿಕೋಟೆ, ವಿಜಯಪುರ, ಬಸರಕೋಡ ರಸ್ತೆ ಮಾರ್ಗದಲ್ಲಿ ಬರುವ ಗ್ರಾಮೀಣ ಪ್ರದೇಶಗಳ ಗಣೇಶೋತ್ಸವ ಮಂಡಳಿಗಳ ಮತ್ತು ಪುರಸಭೆ, ಹೆಸ್ಕಾಂ, ಅಗ್ನಿಶಾಮಕ ಠಾಣೆ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಯಾರು ಕೂಡ ಗಣೇಶೋತ್ಸವ ಹೆಸರಲ್ಲಿ ರಸ್ತೆಗೆ ಅಡ್ಡಲಾಗಿ ಮುಳ್ಳುಕಂಟಿ ಇಟ್ಟು ಪ್ರಯಾಣಿಕರನ್ನು ಬಲವಂತವಾಗಿ ತಡೆದು ಚಂದಾರೂಪದಲ್ಲಿ ಹಣ ವಸೂಲಿ ಮಾಡುವಂತಿಲ್ಲ. ಪ್ರೀತಿ-ವಿಶ್ವಾಸದಿಂದ ಚಂದಾ ಕೇಳಿ. ಯಾರೊಬ್ಬರನ್ನೂ ಬಲವಂತ ಮಾಡಬೇಡಿ. ಬಲವಂತ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. -ರೇಣುಕಾ ಜಕನೂರ, ಪಿಎಸೈ, ಮುದ್ದೇಬಿಹಾಳ

Advertisement

Udayavani is now on Telegram. Click here to join our channel and stay updated with the latest news.

Next