ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಒಮ್ಮೆ ಅಬ್ಬರಿಸಿ, ಮತ್ತೂಮ್ಮೆ ಬೊಬ್ಬಿರಿದು, ಮತ್ತೂಮ್ಮೆ ಸಮಾಧಾನವಾಗಿ,
ಮಗದೊಮ್ಮೆ ಮಂದಹಾಸಿಯಂತೆ ತುಂತುರಾಗಿ ಬಹುರೂಪಿಯಾಗಿ ಬಸವನಾಡಿನಲ್ಲಿ ವಿವಿಧ ರೀತಿಯಲ್ಲಿ ದರ್ಶನ ನೀಡುತ್ತಿದೆ. ಇದರಿಂದ ರೈತರು ಸಂತಸಗೊಂಡಿದ್ದು ಉಳುಮೆಗೆ ಸಿದ್ಧಪಡಿಸಿಕೊಂಡಿರುವ ಜಮೀನುಗಳಲ್ಲಿ ಹಿಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಇತ್ತ ಕಾಣೆಯಾಗಿದ್ದ ಮಳೆಯಿಂದಾಗಿ ಮನೆಯ ಮೂಲೆಯಲ್ಲಿ ಮಡಚಿಕೊಂಡು ಮಲಗಿದ್ದ ಛತ್ರಿಗಳೆಲ್ಲ ಗರಿ ಬಿಚ್ಚಿಕೊಂಡು, ಧೂಳು ಕೊಡವಿಕೊಂಡು ಹೊರಬಂದಿವೆ. ಆಕಾಶಕ್ಕೆ ಮುಖ ಮಾಡಿ ಹಿಡಿಕೆ ಹಿಡಿದವರಿಗೆ ಮಳೆ ಹನಿ ನೀರು ಸಿಡಿಯದಂತೆ ರಕ್ಷಣೆ ನೀಡುತ್ತಿರುವ ಛತ್ರಿಗಳಿಗೆ ಮಾರುಕಟ್ಟೆಯಲ್ಲೂ ಭಾರಿ ಬೇಡಿಕೆ ಬಂದಿದೆ. ಮಳೆ ಕಾರಣದಿಂದಾಗಿ ನಗರದ ಮುಖ್ಯ ಹಾಗೂ ಪ್ರಮುಖ ಬಡಾವಣೆಗಳ ರಸ್ತೆಗಳೆಲ್ಲ ನೀರಿನಿಂದ ಆವರಿಸಿಕೊಂಡಿವೆ. ಪರಿಣಾಮ ಬೀದಿಬದಿ ವ್ಯಾಪಾರಕ್ಕೆ ಕೊಕ್ಕೆ ಬಿದ್ದಿದ್ದು, ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ
ವಾರದ ಸಂತೆಗಳೂ ಸಂಕಷ್ಟ ಅನುಭವಿಸುವಂತಾಗಿದೆ. ತರಕಾರಿ ವ್ಯಾಪಾರಿಗಳು ಮಳೆಯಿಂದಾಗಿ ಕೊಂಡು ತಂದು ಮಾರಲು ಮಾರುಕಟ್ಟೆಗೆ ಬಂದರೂ ಕೊಳ್ಳುವವರಿಲ್ಲದೇ ಪರದಾಡುವಂತಾಗಿದೆ. ಮಳೆಯ ಹನಿ ಪ್ರತ್ಯಕ್ಷವಾಗುತ್ತಲೇ ಸಿಕ್ಕ ಬೆಲೆಗೆ ತರಕಾರಿ ಮಾರಿಕೊಂಡು ನಷ್ಟನುಭವಿಸುತ್ತಿದ್ದಾರೆ. ಆದರೆ ಮಳೆಯಾದರೂ ಆಗಲಿ, ಬಿಡಿ ಎಂದು ತಮ್ಮ ನಷ್ಟದಲ್ಲೂ ಸಂತೃಪ್ತಿ ಭಾವ ವ್ಯಕ್ತಪಡಿಸುತ್ತಿದ್ದಾರೆ.
Advertisement