Advertisement

ಸೌಹಾರ್ದತೆ –ಸಾಮರಸ್ಯ ಸಾರಿದ ಕಾರ್ಕಳದ ಸಾರ್ವಜನಿಕ ಗಣೇಶೋತ್ಸವ

10:26 PM Sep 05, 2019 | Sriram |

ವಿಶೇಷ ವರದಿಕಾರ್ಕಳ : ಪ್ರಸಾದ ವಿತರಣೆಯಲ್ಲಿ ಹೆನ್ರಿ ಸಾಂತ್‌ಮಯೋರ್‌, ಸೇವಾ ಕೌಂಟರ್‌ನಲ್ಲಿ ಇಕ್ಬಾಲ್‌ ಅಹಮದ್‌. ಪೂಜಾ ಸಾಮಗ್ರಿ ಒದಗಿಸುವಲ್ಲಿ ಆದಿರಾಜ್‌ ಜೈನ್‌, ಸ್ವಾಗತಿಸುವಲ್ಲಿ ಶುಭದಾ ರಾವ್‌. ಈ ದೃಶ್ಯ ಕಂಡುಬಂದಿದ್ದು ಕಾರ್ಕಳ ಬಸ್‌ಸ್ಟಾಂಡ್‌ನ‌ಲ್ಲಿ ಆಚರಿಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ.
ಜಾತಿ ಬಾಂಧವರಿಗೆ, ಧರ್ಮ ಬಾಂಧವರಿಗೆ ಮಾತ್ರವೆಂಬಂತೆ ಕಾರ್ಯಕ್ರಮ, ಕ್ರೀಡಾಕೂಟ ಆಯೋಜನೆ ಗೊಳ್ಳುತ್ತಿರುವ ಇಂದಿನ ದಿನಮಾನದಲ್ಲಿ ಇಂತಹ ಕಾರ್ಯಕ್ರಮಗಳೂ ನಡೆಯುತ್ತಿವೆ ಎನ್ನುವುದಕ್ಕೆ ಇದೊಂದು ಸಾಕ್ಷಿ .

Advertisement

ಕಾರ್ಕಳದ ಗಣೇಶೋತ್ಸವ ಹಿಂದೂ, ಜೈನ, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲ ಧರ್ಮದವರೂ ಸೇರಿಕೊಂಡು ಕಾರ್ಕಳ ಬಸ್‌ ಏಟೆಂಟ್‌ಗಳ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಕಳೆದ 12 ವರ್ಷಗಳಿಂದ ಬಸ್‌ಸ್ಟಾಂಡ್‌ ಬಳಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.

ಇಲ್ಲಿ ಯಾವುದೇ ಜಾತಿ, ಧರ್ಮದ ಭೇದ ಕಾಣಲು ಸಾಧ್ಯವಿಲ್ಲ. ಪರಸ್ಪರ ಸ್ನೇಹ, ಅನ್ಯೋನ್ಯತೆ ಸೌಹಾರ್ದತೆ, ಸಹಬಾಳ್ವೆ ಇಲ್ಲಿ ಜೀವಂತಿಕೆಯಾಗಿದೆ. ಪ್ರಸ್ತುತ ಇಲ್ಲಿನ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುರೇಶ್‌ ದೇವಾಡಿಗ, ಕಾರ್ಯದರ್ಶಿಯಾಗಿ ಇಕ್ಬಾಲ್‌ ಅಹಮದ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಮೊತ್ತ ಅಸಹಾಯಕ- ನೊಂದವರಿಗೆಗಣೇಶೋತ್ಸವ ಖರ್ಚು ವೆಚ್ಚವಾಗಿ ಉಳಿದ ಮೊತ್ತವನ್ನು ಸಾಮಾಜಿಕ ಕಾರ್ಯ,ಸಮಾಜದಲ್ಲಿನ ಅಸಹಾಯಕರು, ನೊಂದವರಿಗೆ ನೀಡಲಾಗುತ್ತಿದೆ. ವೈದ್ಯ
ಕೀಯ, ಶೈಕ್ಷಣಿಕ ನೆರವನ್ನು ಈ ಹಣದಲ್ಲಿ ಭರಿಸಲಾಗುತ್ತಿದೆ. 2017ರಲ್ಲಿ ಅಂಗವಿಕಲರಿಗೆ ಸುಮಾರು 20 ವ್ಹೀಲ್‌ ಚೇರ್‌, 2018ರಲ್ಲಿ ಆನೆಕೆರೆ ಪಾರ್ಕ್‌ಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಥಾಪಕಾಧ್ಯಕ್ಷ ಶುಭದಾ ರಾವ್‌ ಹೇಳುತ್ತಾರೆ.

ರಕ್ತದಾನಿ ಇಕ್ಬಾಲ್‌ ಅಹಮದ್‌
ಇಕ್ಬಾಲ್‌ 69 ಬಾರಿ ರಕ್ತದಾನ ಮಾಡಿರುವ ಉತ್ಸಾಹಿ ಯುವಕ. ಕಾರ್ಕಳ ರೋಟರಿ ಸಮುದಾಯ ಸೇವಾ ನಿರ್ದೇಶಕರಾಗಿರುವ ಇವರು ರೋಟರಿ ಅನ್ನಪೂರ್ಣ ಯೋಜನೆಯ ರೂವಾರಿಗಳಲ್ಲಿ ಓರ್ವರು. ಮುಸ್ಲಿಂ ಯಂಗ್‌ಮೆನ್‌ ಸದಸ್ಯರಾಗಿ, ಕಾರ್ಕಳ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ, ಬಸ್‌ ಏಜೆಂಟ್‌ ಬಳಗದ ಮಾಜಿ ಅಧ್ಯಕ್ಷರಾಗಿ ಹತ್ತು ಹಲವಾರು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಹೆನ್ರಿ ಸಾಂತ್‌ಮಯೋರ್‌
ಹೆನ್ರಿ ಸಾಂತ್‌ಮಯೋರ್‌ ಓರ್ವ ಸಾಮಾಜಿಕ ಕಾರ್ಯಕರ್ತ. ನಗರದಲ್ಲಿ ಟ್ರಾಫಿಕ್‌ ಜಾಮ್‌ ಆದಾಗ ವಾಹನಗಳ ದಟ್ಟಣೆ ನಿವಾರಿಸುವಲ್ಲಿ ಹೆನ್ರಿ ಸೇವೆ ಟ್ರಾಫಿಕ್‌ ಪೊಲೀಸರಂತಿರುತ್ತದೆ. ವಲಯ ಕಥೊಲಿಕ್‌ ಸಭಾದ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಮಹಾಲಿಂಗೇಶ್ವರ ಯುವಕ ಮಂಡಲದ ಗೌರವ ಸಲಹೆಗಾರರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next