Advertisement

ಗಣೇಶೋತ್ಸವ ಜಾಗೃತಿ ಆಂದೋಲನ : ವಿಗ್ರಹ ತಯಾರಿಕೆ

10:22 PM Sep 01, 2019 | Sriram |

ಮಡಿಕೇರಿ: ಗಣೇಶ ಹಬ್ಬಕ್ಕೆ ಪೂರ್ವಭಾವಿಯಾಗಿ ಸ್ವತ್ಛ ಭಾರತ ಅಭಿಯಾನ ಹಾಗೂ ಹಸಿರೆಡೆಗೆ ನಮ್ಮ ನಡೆ-ಹಸಿರು ಯಾತ್ರೆ ಅಭಿಯಾನ ಕಾರ್ಯಕ್ರಮದಡಿ ನಗರದ ಸಂತ ಮೈಕಲ್ಲರ ಪ್ರೌಢಶಾಲೆಯಲ್ಲಿ ಪರಿಸರ ಸ್ನೇಹಿ ಹಸಿರು ಗಣೇಶ ಉತ್ಸವ ಆಚರಣೆ ಕುರಿತಂತೆ ಜಿಲ್ಲಾ ಮಟ್ಟದ ಪರಿಸರ ಜಾಗೃತಿ ಆಂದೋಲನ ನಡೆಯಿತು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರಸಭೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಗುರುವಾರ ಇಕೋ ಕ್ಲಬ್‌ ಆಶ್ರಯದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತ ಮಾಹಿತಿ ಪತ್ರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್‌.ಗಾಯತ್ರಿ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ಗಣೇಶ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ತಡೆಯುವ ದಿಸೆಯಲ್ಲಿ ಬಣ್ಣ ರಹಿತ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಬೇಕು. ಈ ದಿಸೆಯಲ್ಲಿ ಜನಜಾಗೃತಿ ಮೂಡಿಸಲು ಇಂತಹ ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ವಿಷಕಾರಿ ರಾಸಾಯನಿಕ ಮತ್ತು ಲೋಹ ಲೇಪಿತ ಬಣ್ಣ ಬಳಸಿ ತಯಾರಿಸಿದ ಗಣೇಶ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ಜಲಚರಗಳಿಗಲ್ಲದೆ, ಪರಿಸರಕ್ಕೂ ಹಾನಿಆ‌ಕೆ ಮಾಡುವ ಮೂಲಕ ಹಸಿರು ಗಣೇಶೋತ್ಸವ ಆಚರಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರು ಹಾಗೂ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್‌ ಮಾತನಾಡಿ, ಹಸಿರು ಗಣೇಶೋತ್ಸವ ಆಚರಿಸುವ ಮೂಲಕ ಜಲಮಾಲಿನ್ಯ ತಡೆದು ಜಲಮೂಲಗಳನ್ನು ರಕ್ಷಿಸುವ ದಿಸೆಯಲ್ಲಿ ಶಾಲಾ ಮಕ್ಕಳು ಮತ್ತು ಸಮುದಾಯದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ತಯಾರಿಕೆ ಮತ್ತು ಪ್ರತಿಷ್ಠಾಪನೆಯ ಅಗತ್ಯತೆ ಕುರಿತು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ವ್ಯಾಪಕವಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

Advertisement

ರಾಷ್ಟ್ರೀಯ ಹಸಿರು ಪಡೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಶಾಲೆಗಳಲ್ಲಿ ಪರಿಸರ ಕಾರ್ಯಕ್ರಮದಡಿ ಇಕೋ-ಕ್ಲಬ್‌ ಮೂಲಕ ಗಣೇಶ ಹಬ್ಬಕ್ಕೂ ಮುನ್ನ ಹಸಿರು ಗಣೇಶೋತ್ಸವ ಆಚರಣೆಯ ಅಗತ್ಯತೆ ಕುರಿತು ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಪರಿಸರದ ಅರಿವು ಮೂಡಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸ್ಪಂದಿಸುತ್ತಿರುವ ಜಿಲ್ಲೆಯ ನಾಗರಿಕರು ಮಣ್ಣಿನ ಗಣೇಶ ಮೂರ್ತಿ ಖರೀದಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಕಂಡುಬಂದಿದೆ ಎಂದರು.

ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಉಪಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮಾತನಾಡಿ, ಜಿಲ್ಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಪರಿಸರ ಕಾಳಜಿಯಿಂದ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪರಿಸರ ಜಾಗೃತಿ ಆಂದೋಲನವನ್ನು ಉತ್ತಮವಾಗಿ ಸಂಘಟಿಸಲಾಗುತ್ತಿದೆ ಎಂದು ಶ್ಲಾ ಸಿದರು.

ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಪರಿಸರ ಪ್ರಜ್ಞೆ ಬೆಳೆಸಿಕೊಂಡು ಇಂತಹ ಆಂದೋಲನದ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಯೋಜನಾ ಸಹಾಯಕ ಎಚ್‌.ಎಂ.ಅಲೋಕ್‌, ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವಿಲ್‌ಫ್ರೆಡ್‌ ಕ್ರಾಸ್ತಾ, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಶಿಕ್ಷಕರಾದ ಶಾರದ, ಕವಿತ, ಸಂಧ್ಯಾ, ಸಗಾಯಮೇರಿ, ಪ್ರೇಮ್‌ಸಾಂತ್‌ ಮೇಯರ್‌ ಇತರರು ಹಾಜರಿದ್ದರು.

ಜಿಲ್ಲಾ ಮಟ್ಟದ ಪರಿಸರ ಜನಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ಮಣ್ಣಿನ ಗಣೇಶ ವಿಗ್ರಹ ತಯಾರು ಮಾಡುವ ಮೂಲಕ ಜನರ ಗಮನ ಸೆಳೆದರು.

ಕ್ಲೇ ಮಾಡಲಿಂಗ್‌ ಸ್ಪರ್ಧೆಯಲ್ಲಿ ಕಾರ್ಯಕ್ರಮದ ಮಾರ್ಗದರ್ಶಿ ಶಿಕ್ಷಕ ವಿಲ್‌ಫ್ರೆಡ್‌ ಕ್ರಾಸ್ತಾ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಶಾಲಾ ಅಂಗಳದಲ್ಲಿ ಜೇಡಿ ಮಣ್ಣಿನಿಂದ ವಿವಿಧ ನಮೂನೆಯ ಗಣೇಶ ಮೂರ್ತಿಯನ್ನು ತುಂಬಾ ಖುಷಿಯಿಂದ ತಯಾರಿಸಿದರು.

ಕ್ಲೇ ಮಾಡಲಿಂಗ್‌ ಸ್ಪರ್ಧೆಯಲ್ಲಿ ಶಾಲೆಯ ಇಕೋ ಕ್ಲಬ್‌ನ ಹಸಿರುಪಡೆಯ 40 ಮಕ್ಕಳು ಭಾಗವಹಿಸಿದ್ದರು. ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಪರಿಸರ ಘೋಷಣೆ ಮೊಳಗಿಸುವ ಮೂಲಕ ಜನರ ಗಮನ ಸೆಳೆದರು. ಕ್ಲೇ ಮಾಡಲಿಂಗ್‌ ಸ್ಪರ್ಧೆಯಲ್ಲಿ ಮಣ್ಣಿನಿಂದ ಗಣೇಶ ವಿಗ್ರಹ ತಯಾರಿಸಿ ವಿಜೇತಗೊಂಡ ಮಕ್ಕಳಿಗೆ ನಗದು ಬಹುಮಾನ ಮತ್ತು ಪುಸ್ತಕಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next