ಧಾರವಾಡ : ಹುಬ್ಬಳ್ಳಿಯ ಪ್ರತಿಷ್ಠಿತ ರಾಣಿ ಕಿತ್ತೂರು ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರವಾಗಿ ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋಟ್೯ ವಜಾಗೊಳಿಸಿದೆ.
ಗಣೇಶೋತ್ಸವ ಕುರಿತು ಮಹಾನಗರ ಪಾಲಿಕೆ ಕೈಗೊಂಡ ನಿರ್ಣಯವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ ಇಸ್ಲಾಂ ಸಂಸ್ಥೆಯವರು ಧಾರವಾಡ ಹೈಕೋರ್ಟನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ ಸಚಿನ ಮಗದುಮ್ಮಅವರಿದ್ದ ಏಕಸದಸ್ಯ ಪೀಠವು ಮೇಲ್ಮನವಿ ಅರ್ಜಿ ತಿರಸ್ಕರಿಸಿ ತೀರ್ಪು ನೀಡಿದೆ. ಈ ಮೂಲಕ ಎರಡನೆ ವರ್ಷವು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ಅನುಕೂಲ ಆದಂತಾಗಿದೆ.
ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಇದೀಗ ಮಹಾನಗರ ಪಾಲಿಕೆ ಠರಾವಿಗೆ ಒಪ್ಪಿಗೆ ಸಿಕ್ಕಂತಾಗಿದೆ.
ಗಣೇಶ ಪ್ರತಿಷ್ಠಾಪನೆಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ,ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಕಳೆದ ಎರಡು ದಿನದಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದರು.
ವಿಜಯೋತ್ಸವ
ಅಂಜುಮನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕಿರಿಸಿದ ಹಿನ್ನೆಲೆಯಲ್ಲಿ ಅವಕಾಶ ಕೋರಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ವಿಜಯೋತ್ಸವ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೋರಿ ನಡೆಸುತ್ತಿರುವ ಹೋರಾಟಗಾರರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಪಾಲಿಕೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೈಕೋರ್ಟ್ ಈ ನಿರ್ಧಾರ ನಮ್ಮ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅಭಿಪ್ರಾಯಪಟ್ಟರು. ಪಾಲಿಕೆ ಆಯುಕ್ತರ ಅನುಮತಿಗೆ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದೊರೆದಿದೆ.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಳೆದ ಬಾರಿ ಶಾಂತರೀತಿಯಿಂದ ಗಣೇಶೋತ್ಸವ ಮಾಡಿದ್ದೇವೆ. ಪಾಲಿಕೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಆದರೂ ಪಾಲಿಕೆ ಆಯುಕ್ತರು ಅನುಮತಿ ಕೊಡಲು ವಿಳಂಬ ಮಾಡಿದ್ದು ಸರಿಯಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಕಮೀಷನರ್ ಹೀಗೆ ಮಾಡಿದ್ದಾರೆ. ಗಣೇಶನ ವಿಚಾರದಲ್ಲಿ ಹೀಗೆ ಮಾಡಿದ್ದು ವಿಷಾಧನೀಯ. ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿದವರಿಗೆ ಹೈಕೋರ್ಟ್ ಸರಿಯಾಗಿ ಪಾಠ ಕಲಿಸಿದೆ. ವಿರೋಧಿಗಳ ಅರ್ಜಿ ತಿರಸ್ಕರಿಸಿ ಆದೇಶ ನೀಡಿದೆ. ವಿಜೃಂಭಣೆಯಿಂದ ಗಣೇಶೋತ್ಸವ ಮಾಡುತ್ತೇವೆ ಎಂದರು.
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ ಮಾತನಾಡಿ, ಗಣೇಶ ವಿರೋಧಿಗಳ ಕಪಾಳಕ್ಕೆ ಹೈಕೋರ್ಟ್ ಸರಿಯಾಗಿ ಬಾರಿಸಿದೆ. ಪ್ರಥಮ ಪೂಜಿತ ಗಣೇಶನ ಪ್ರತಿಷ್ಠಾಪಣೆ ವಿರೋಧಿಸಿದವರಿಗೆ ತಕ್ಕ ಶಾಸ್ತಿಯಾಗಿದೆ. ಚೆನ್ನಮ್ಮ ಮೈದಾನದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತೇವೆ. ಗಣೇಶೋತ್ಸವ ಬೇಡ ಅನ್ನೋರು ಪಾಕಿಸ್ತಾನಕ್ಕೆ ಹೋಗಲಿ. ಎಸ್‌ಡಿಪಿಐ, ಪಿಎಫ್‌ಐ, ಎಐಎಮ್‌ಐಎಮ್ ದೇಶ ವಿರೋಧಿಗಳು. ಅಂಜುಮನ್ ಸಂಸ್ಥೆಯವರು ಈಗಲಾದರೂ ಬುದ್ಧಿಕಲಿಯಲಿ ಎಂದರು.