Advertisement

ಗಣೇಶೋತ್ಸವ ಆಚರಣೆ; ಮಂಗಳೂರು ಪೊಲೀಸರ ಸೂಚನೆ

07:19 PM Sep 01, 2019 | Sriram |

ಮಂಗಳೂರು: ನಗರದಲ್ಲಿ ಗಣೇಶೋತ್ಸವ ಸಂದರ್ಭ ನಡೆಯುವ ಧಾರ್ಮಿಕ ಆಚರಣೆಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

Advertisement

ಆಯುಕ್ತರ ಅಧ್ಯಕ್ಷತೆಯಲ್ಲಿ, ಡಿಸಿಪಿಗಳಾದ ಅರುಣಾಂಷುಗಿರಿ ಮತ್ತು ಲಕ್ಷ್ಮೀ ಗಣೇಶ್‌ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್‌ ಅಧಿಕಾರಿಗಳು, ಗಣೇಶೋತ್ಸವ ಕಾರ್ಯಕ್ರಮ ಸಂಘಟಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಂದರ್ಭ ಸಂಘಟಕರಿಗೆ ಕೆಲವೊಂದು ಸೂಚನೆಗಳನ್ನು ನೀಡಲಾಯಿತು.

* ಗಣೇಶೋತ್ಸವ ಪೆಂಡಾಲ್‌ನ ಸುರಕ್ಷತೆ ಬಗ್ಗೆ ಸಂಘಟಕರು ಕ್ರಮಕೈಗೊಳ್ಳಬೇಕು.
* ಪ್ರಸಾದ ತಯಾರಿ ಮತ್ತು ವಿತರಣೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
* ಕಾರ್ಯಕ್ರಮ ನಡೆಯುವ ವೇದಿಕೆಯನ್ನು ಪಿಡಬ್ಲ್ಯುಡಿ ಎಂಜಿನಿಯರ್‌ ಪರಿವೀಕ್ಷಣೆ ನಡೆಸಿ ವರದಿ ಪಡೆಯುವುದು. ಅದೇ ರೀತಿ ವೇದಿಕೆ, ಪೆಂಡಾಲ್‌ಗ‌ಳನ್ನು ಮೆಸ್ಕಾಂ ಎಂಜಿನಿಯರ್‌ ಮುಖೇನ ಪರೀಕ್ಷಿಸಲು ಕ್ರಮಕೈಗೊಳ್ಳುವುದು.
* ಗಣೇಶೋತ್ಸವ ಸ್ಥಳ ಸಾರ್ವಜನಿಕ ಸ್ಥಳವಾಗಿದ್ದರೆ ಸಂಬಂಧಿತ ಸಿ ಪ್ರಾಧಿಕಾರದಿಂದ ಅನುಮತಿ ಪಡೆದುಕೊಳ್ಳುವುದು.
* ಗಣೇಶ ವಿಗ್ರಹ ವಿಸರ್ಜನ ಸ್ಥಳದಲ್ಲಿ ಸರಿಯಾದ ಬ್ಯಾರಿಕೇಡ್‌ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಸ್ಥಳದಲ್ಲಿ ಚಾಲಕರು, ನುರಿತ ಈಜುಗಾರರು ಹಾಜರಿರುವಂತೆ ನೋಡಿಕೊಳ್ಳುವುದು.
* ಗಣೇಶ ಮೂರ್ತಿಯ ವಿಸರ್ಜನ ಮೆರವಣಿಗೆ ನಿಗದಿತ ಸಮಯಕ್ಕೆ ಆರಂಭ ಮತ್ತು ವಿಸರ್ಜನೆಯಾಗುವಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ಗೊಂದಲವಾಗದಂತೆ ಎಚ್ಚರವಹಿಸುವುದು.
* ಮೆರವಣಿಗೆ ಟ್ಯಾಬ್ಲೋಗಳ ಬಗ್ಗೆ ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡುವುದು. ಸ್ತಬ್ದಚಿತ್ರಗಳು ಯಾವುದೇ ಧರ್ಮದ ಜನರ ಭಾವನೆಗಳಿಗೆ ನೋವುಂಟು ಮಾಡುವಂತದ್ದಾಗಿರಬಾರದು.
* ಮೆರವಣಿಗೆ ನಿರ್ವಹಣೆಗೆ ಸಂಘಟಕರು ಗರಿಷ್ಠ ಸಂಖ್ಯೆಯ ಸ್ವಯಂಸೇವಕರನ್ನು ನಿಯೋಜಿಸುವುದು.
* ಮೆರವಣಿಗೆ ಸಮಯ ಯುವಕರಿಗೆ ಹಬ್ಬದ ಆಚರಣೆ ಬಗ್ಗೆ ಹಾಗೂ ಮಹತ್ವದ ಬಗ್ಗೆ ಅರಿವು ಮೂಡಿಸುವುದು.
* ಸೂಕ್ಷ್ಮಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸದಂತೆ, ಪಟಾಕಿ ಸಿಡಿಸುವ ಸಮಯ ಜಾಗರೂಕರಾಗಿರುವುದು. ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದು.
* ಪೆಂಡಾಲ್‌ಗ‌ಳಿಗೆ ಸಿಸಿಟಿವಿಯನ್ನು ಅಳವಡಿಸಿ ಅದರ ಡಾಟಾವನ್ನು ಸಂಗ್ರಹಿಸಿಡುವುದು.
* ಗಣೇಶೋತ್ಸವ ಆಚರಣೆಯ ಪೆಂಡಾಲ್‌ನಲ್ಲಿ ಅಗ್ನಿ ಅನಾಹುತ ಸಂಭವಿಸದಂತೆ ಎಚ್ಚರ ವಹಿಸುವುದು. ಇದಕ್ಕಾಗಿ ಅಗ್ನಿ ಶಾಮಕ ಸಾಧನಗಳನ್ನು ಅಳವಡಿಸುವುದು.
* ಪೆಂಡಾಲ್‌ನಲ್ಲಿ ಗರಿಷ್ಠ ಸಂಖ್ಯೆಯ ಸ್ವಯಂಸೇವಕರು ರಾತ್ರಿ ವೇಳೆ ಭದ್ರತೆ ನೋಡಿಕೊಳ್ಳಬೇಕು.
* ಪೊಲೀಸ್‌ ಬೀಟ್‌ ಕಾನ್‌ಸ್ಟೆಬಲ್‌ ಮೊಬೈಲ್‌ ನಂಬರ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳ ಮೊಬೈಲ್‌ ನಂಬರನ್ನು ಆಯೋಜಕರು ಹೊಂದಿರಬೇಕು.
* ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯಬೇಕು.
* ಮೆರವಣಿಗೆಯಲ್ಲಿ ಭಾಗವಹಿಸುವವರು ಮದ್ಯಪಾನ ಮಾಡದಂತೆ ಸೂಚನೆ ನೀಡುವುದು.
* ಗಣೇಶೋತ್ಸವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಸುಳ್ಳು ಸುದ್ದಿ ಹಾಗೂ ವದಂತಿ ಹರಡಿಸದಂತೆ ನೋಡಿಕೊಳ್ಳುವುದು.
* ರಾಜ್ಯದಲ್ಲಿ ಡಿಜೆಯನ್ನು ನಿರ್ಬಂಧಿಸಲಾಗಿದ್ದು, ಡಿಜೆಯನ್ನು ಅಳವಡಿಸಿ ಶಬ್ದ ಮಾಲಿನ್ಯ ಮಾಡುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು.
* ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌, ಬಂಟಿಂಗ್ಸ್‌ ಅಳವಡಿಸುವಾಗ ಸಂಬಂಧಪಟ್ಟ ಅಧಿಕಾರಿಗಳಿಂದ, ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವುದು. ಹಬ್ಬ ಮುಗಿದ ಕೂಡಲೇ ಬ್ಯಾನರ್‌, ಬಂಟಿಂಗ್ಸ್‌ ತೆರವು ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next