ಚನ್ನರಾಯಪಟ್ಟಣ: ಗೌರಿ-ಗಣೇಶ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಪಟ್ಟಣದ ರಸ್ತೆ ಬದಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಾವಿರಾರು ಗಣಪತಿ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ.
ಶ್ರಾವಣ ಮಾಸದ ಆರಂಭದೊಂದಿಗೆ ಹಬ್ಬಗಳ ಸುಗ್ಗಿ ಶುರುವಾಗಿದ್ದು, ಸೆ.1 ರಂದು ಗೌರಿ ಹಬ್ಬ ಸೆ.2 ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಗೆ ಮನೆಗಳಲ್ಲಿ ಅಗತ್ಯ ತಯಾರಿ ನಡೆಯುತ್ತಿದೆ.
ಪರಿಸರ ಸ್ನೇಹಿಗೆ ಹೆಚ್ಚು ಆಸಕ್ತಿ: ತಾಲೂಕಿನ ವಿವಿಧ ಬಡಾವಣೆಯಲ್ಲಿ ಕಲಾವಿದರು ಜೇಡಿಮಣ್ಣಿನ ಗಣೇಶ ಮೂರ್ತಿ ತಯಾರಿ ಸಿದ್ದು ಮಾರಾಟಕ್ಕೆ ತರುತ್ತಿದ್ದಾರೆ. ಕಳೆದೆಲ್ಲಾ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪತಿ ಮೂರ್ತಿ ತಯಾರಿಕೆ ಹೆಚ್ಚಾಗಿದೆ.
ವಿವಿಧ ಬಗೆಯ ಮೂರ್ತಿ: ವಿಭಿನ್ನ ಶೈಲಿಯ ಮಾರುತಿ ಮೇಲೆ ಕುಳಿತಿರುವ ವಿಘ್ನೇಶ್ವರ, ಬೃಂದಾವನ ಗಣಪ, ಗಣಾಂಜನೇಯ, ಶೇಷಶಯನ, ಪಂಚಮುಖೀ, ನಟರಾಜ, ವೆಂಕಟೇಶ್ವರ, ಕಾಳಿಂಗ ಮರ್ಧನ, ಅರ್ಧನಾರೇಶ್ವರ, ಶಿವಗಣಪ, ಗಜಗಣಪ, ಸಿಂಹಾಸನದ ಮೇಲೆ ಆಸೀನನಾಗಿರುವ ದರ್ಬಾರ್ ಗಣಪ, ಕಮಲದ ಹೂವಿನ ಮೇಲೆ ಕುಳಿತ ಗಣಪ, ನಟರಾಜ ಗಣಪ, ವೀರಾಂಜನೇಯ ಗಣಪ, ಏಕದಂತ ಗಣಪ, ನವಿಲ ಮೇಲೆ ಕುಳಿತಿರುವ ಗಣಪ, ಇಲಿ ಮೇಲೆ ಸವಾರಿ ಹೊರಟ ಡೊಳ್ಳು ಹೊಟ್ಟೆ ಗಣಪ ಹೀಗೆ ವಿಭಿನ ಶೈಲಿಯಲ್ಲಿ ಒಂದು ಅಡಿಯಿಂದ ಆರೇಳು ಅಡಿ ಎತ್ತರದ ಮೂರ್ತಿಗಳು ಮಾರುಕಟ್ಟೆಯಲ್ಲಿವೆ.
ವಿವಿಧ ಜಿಲ್ಲೆಗೆ ರವಾನೆ: ತಾಲೂಕು ಕೇಂದ್ರದಲ್ಲಿ ಜೇಡಿ ಮಣ್ಣಿನಿಂದ ತಯಾರಾಗಿ ರುವ ವಿನಾಯಕ ಮೂರ್ತಿಗಳು ತಿಪಟೂರು, ಕೃಷ್ಣರಾಜಪೇಟೆ, ನಾಗಮಂಗಲ, ತುಮ ಕೂರು, ಮೈಸೂರು, ಮಂಡ್ಯ ಶಿವಮೊಗ್ಗ, ಬೆಳಗಾವಿ, ಹಾಸನ, ಬೆಂಗಳೂರು ಸೇರಿ ರಾಜ್ಯದ ವಿವಿಧ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ರವಾನೆ ಆಗಿವೆ.
ಗಣ್ಯಾತಿ ಗಣ್ಯರ ಮನೆಗೆ: ಬೆಂಗಳೂರಿನ ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ, ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ, ತುರುವೇಕರೆ ತಾಲೂಕಿನ ನೋಣನಕೆರೆ ಕಾಡುಸಿದ್ದೇಶ್ವರ ಮಠ, ಕುಂದೂರು ಮಹಾ ಸಂಸ್ಥಾನ ಮಠ, ಕಬ್ಬಳಿ ಕ್ಷೇತ್ರ, ತಾಲೂಕಿನಲ್ಲಿರುವ ರಂಭಾಪುರಿಶಾಖಾ ಮಠ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮಂತ್ರಿ ಎಚ್.ಡಿ. ರೇವಣ್ಣ ಅವರ ಮನೆಗಳಿಗೂ ಚನ್ನರಾಯ ಪಟ್ಟಣ ತಾಲೂಕಿನ ಕಲಾವಿದರು ತಯಾರಿಸಿರುವ ಜೇಡಿಮಣ್ಣಿನ ಗಣೇಶ ಮೂರ್ತಿಗಳು ರವಾನೆಯಾಗಿವೆ.
ನೂರು ರೂ.ನಿಂದ ಸಾವಿರ ರೂ. ವರೆಗೆ: ಕನಿಷ್ಟ ನೂರು ರೂ.ಗಳಿಂದ ಸಾವಿರ ರೂ.ಮೌಲ್ಯದ ವಿಘ್ನೇಶ್ವರ ಮೂರ್ತಿ ದೊರೆಯುತ್ತಿವೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ದರ ಕಡಿಮೆಯಾಗಿದ್ದರೆ, ಸಾರ್ವಜನಿಕ ಮೂರ್ತಿಗಳ ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ ಮೂರ್ತಿಗಳ ಬೆಲೆ ಹೆಚ್ಚಾಗಿದೆ.
● ಶಾಮಸುಂದರ್ ಕೆ.ಅಣ್ಣೇನಹಳ್ಳಿ