Advertisement

ಗಣೇಶ ಮೂರ್ತಿ ಎತ್ತರ ಐದು ಅಡಿ ಮಾತ್ರ

12:24 PM Aug 22, 2018 | |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕಡ್ಡಾಯ ಅನುಮತಿ, ಸಾರ್ವಜನಿಕವಾಗಿ ಮೂರ್ತಿ ಪ್ರತಿಷ್ಠಾಪನೆ ಅವಧಿಗೆ ಮಿತಿ, ಮೂರ್ತಿಯ ಎತ್ತರ ಐದು ಅಡಿಗೆ ಸೀಮಿತಗೊಳಿಸಿರುವುದು ಸೇರಿದಂತೆ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.

Advertisement

ಈಗಾಗಲೇ ರಾಜ್ಯಾದ್ಯಂತ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟವನ್ನು ನಿಷೇಧಿಸಿರುವ ಮಂಡಳಿಯು, ತಾನು ರೂಪಿಸಿರುವ ನಿಯಮಗಳ ಪಾಲನೆಗೆ ಒತ್ತು ನೀಡುವಂತೆ ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ.

ಈಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹೆಚ್ಚಾಗಿದೆ. ವೈಭವದ ಆಚರಣೆಗೆ ಗಮನ ನೀಡುತ್ತಿರುವ ಸಂಘ ಸಂಸ್ಥೆಗಳು ಪರಿಸರಸ್ನೇಹಿ ಆಚರಣೆಗೆ ಗಮನ ನೀಡದ ಕಾರಣ ಸಮಸ್ಯೆಗಳು ಎದುರಾಗಿವೆ. ಹಾಗಾಗಿ  ಸಮಸ್ಯೆ ನಿವಾರಣೆಗೆ ಒಂದಿಷ್ಟು ನಿಯಮಾವಳಿಗಳನ್ನು ರೂಪಿಸಿದೆ.

ಮುಖ್ಯವಾಗಿ ಪಿಒಪಿ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ತಯಾರಿಕೆ, ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಕ್ಕೆ ಮುಂದಾಗಿದೆ. ಜತೆಗೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಮೂರ್ತಿಗಳಿಗೆ ಗರಿಷ್ಠ 5 ಅಡಿಯ ಮಿತಿ ಗೊತ್ತುಪಡಿಸಿದೆ.

ಮಣ್ಣಿನ ಮೂರ್ತಿಗಳು ಹೆಚ್ಚು ತೂಕವಿರುವುದರಿಂದ ಕೆಲವೊಮ್ಮೆ ಮೂರ್ತಿಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಅಲ್ಲದೇ ಬೃಹತ್‌ ಮೂರ್ತಿಗಳನ್ನು ಸಣ್ಣಪುಟ್ಟ ಪುಷ್ಕರಣಿ, ಕಲ್ಯಾಣಿ ಇಲ್ಲವೇ ತಾತ್ಕಾಲಿಕ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವುದು ಸವಾಲೆನಿಸಿದೆ. ಹೀಗಾಗಿ, ಎತ್ತರವನ್ನು ಸೀಮಿತಗೊಳಿಸಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮೂರ್ತಿ ತಯಾರಿಕರಿಗೆ ಸೂಚನೆ: ಗಣೇಶ ಹಬ್ಬ ಸಮೀಪಿಸುತ್ತಿದ್ದು, ಈಗಾಗಲೇ ಕಲಾವಿದರು ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೂಡಲೇ ಮೂರ್ತಿ ತಯಾರಕರ ಸಭೆ ಕರೆದು ನಿಯಮಾವಳಿಗಳ ಬಗ್ಗೆ ತಿಳಿ ಹೇಳಬೇಕು. ಮಣ್ಣಿನ ಮೂರ್ತಿ ತಯಾರಿಕೆ ವೇಳೆ ಚಿಕ್ಕ ಮೂರ್ತಿಗಳಿಗೆ ಆದ್ಯತೆ ನೀಡುವಂತೆ ಮನವಿ ಮಾಡಬೇಕು ಎಂದು ಮಂಡಳಿ ಸೂಚಿಸಿದೆ.

ಒಂದು ವೇಳೆ ತಯಾರಕರು ಯಾರಾದರೂ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದರೆ, ಅಂತಹ ಸಂಸ್ಥೆ ಅಥವಾ ವ್ಯಕ್ತಿಯ ಪರವಾನಗಿ ರದ್ದು ಮಾಡಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ. ಕಳೆದ ಬಾರಿ ಮಾರಾಟವಾಗದ ಅಥವಾ ವಿಸರ್ಜಜನೆಯಾಗದೆ ಉಳಿದಿರುವ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪತ್ತೆ ಹಚ್ಚಿ ಸೂಕ್ತ ರೀತಿಯಲ್ಲಿ ವಿಲೇವಾರಿಗೆ ಕ್ರಮ ವಹಿಸಲು ಸೂಚಿಸಲಾಗಿದೆ.

ಒಂದು ತಿಂಗಳಷ್ಟೆ ಪ್ರತಿಷ್ಠಾಪನೆಗೆ ಅವಕಾಶ: ಈ ಬಾರಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಂದು ತಿಂಗಳ ಕಾಲಾವಕಾಶವನ್ನಷ್ಟೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದೆ. ಹಬ್ಬ ಮುಗಿದ ಒಂದು ತಿಂಗಳ ನಂತರ ಸ್ಥಳೀಯ ಸಂಸ್ಥೆಗಳು ಆ ಪ್ರದೇಶದ ಕೆರೆಗಳನ್ನು ಸ್ವತ್ಛಗೊಳಿಸುತ್ತವೆ. ಹಾಗಾಗಿ,  ಅಕ್ಟೋಬರ್‌12 ನಂತರ ಯಾವುದೇ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಸರ್ಜನೆಗೆ ಅವಕಾಶ ಇರುವುದಿಲ್ಲ.

ಆ ಬಳಿಕ ಮೂರ್ತಿ ವಿಸರ್ಜನೆಗೆ ಅಡ್ಡಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿಯನ್ನು ಒಂದು ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಸ್ಥಳೀಯ ಸಂಸ್ಥೆ, ಪೊಲೀಸ್‌ ಠಾಣೆ ಜತೆಗೆ ಈ ಬಾರಿ ಕಡ್ಡಾಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಪಡೆಯಬೇಕಿದೆ. ಹಬ್ಬದ ನಂತರ ವಿಸರ್ಜಜನೆಗೆ ಸಂಬಂಧಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಆಯ್ದ ಕೆರೆ, ಕಲ್ಯಾಣಿಗಳನ್ನು ಗುರುತಿಸಿ ವಿಸರ್ಜನೆಗೆ ಅನುವು ಮಾಡಿಕೊಂಡುವಂತೆ ಬಿಬಿಎಂಪಿ ಕ್ರಮವಹಿಸಲು ತಿಳಿಸಲಾಗಿದೆ. 

ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಹೊಸ ನಿಯಮಾವಳಿಗಳ ಕುರಿತು ನಿರ್ದೇಶನ ನೀಡಲಾಗಿದೆ. ಜಲಮೂಲ ಹಾಗೂ ಜಲಚರಗಳ ರಕ್ಷಣೆ ಉದ್ದೇಶದಿಂದ ಚಿಕ್ಕ ಗಾತ್ರದ ಮೂರ್ತಿಗೆ ಆದ್ಯತೆ ನೀಡಲು ಮೂರ್ತಿ ಎತ್ತರ ಸೀಮಿತಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವವರು ಈ ಬಾರಿ ಕಡ್ಡಾಯವಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯಬೇಕು.
-ಲಕ್ಷ್ಮಣ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

* ಜಯಪ್ರಕಾಶ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next