ಕೋಲಾರ: ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ಗಣೇಶನೇ ರಸ್ತೆಗಳಿದಿದ್ದ, ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿ ಉಚಿತವಾಗಿ ವಿತರಣೆಯೂ ಮಾಡಿದ. ಹೌದು,
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಬೆಳ್ಳೂರು ಗ್ರಾಮದ ಬಳಿಯ ಫ್ಲೈಓವರ್ ಹತ್ತಿರ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಡಿ, ಗಣೇಶನ ವೇಷತೊಟ್ಟಿದ್ದ ವ್ಯಕ್ತಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ತೊಡಿಸಿ, ಗುಲಾಬಿ ಹೂ ನೀಡಿ, ತಪ್ಪದೇ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದರು.
ನಿಯಮ ಪಾಲಿಸುತ್ತೇನೆಂದ ವೈದ್ಯೆ: ಇದೇ ವೇಳೆ ಮಹಿಳೆಯೊಬ್ಬರನ್ನು ತಡೆದು ಹೆಲ್ಮೆಟ್ ನೀಡಿ, ಹೂ ಕೊಟ್ಟು ಸಂಚಾರ ನಿಯಮ ಪಾಲನೆ ಮಾಡುವಂತೆ ಗಣೇಶ ವೇಷಧಾರಿ ಮನವಿ ಮಾಡಿದ್ದಕ್ಕೆ ಭಾವುಕರಾದ ಮಹಿಳಾ ಸವಾರೊಬ್ಬರು, ನಾನು ವೈದ್ಯೆಯಾಗಿ ಹೆಲ್ಮೆಟ್ ಹಾಕದಿರೋದು ನನಗೇ ಬೇಜಾರಾಗುತ್ತಿದೆ. ಇನ್ಮುಂದೆ ಕಡ್ಡಾಯವಾಗಿ ಹಾಕುತ್ತೇನೆ, ಇತರರೂ ಹೆಲ್ಮೆಟ್ ಧರಿಸಿ ಸಂಚಾರ ವಾಹನ ಸವಾರಿ ಮಾಡುವಂತೆ ಕಿವಿಮಾತು ಹೇಳಿದ್ದು ವಿಶೇಷವಾಗಿತ್ತು. ಇದೇವೇಳೆ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಅಡ್ವಿಕ್ ಹೈಟೆಕ್ ಲಿ.ನಿಂದ ಉಚಿತವಾಗಿ ವಾಹನ ಸವಾರರಿಗೆ ಹೆಲ್ಮೆಟ್ ವಿತರಿಸಲಾಯಿತು.
ಗುಲಾಬಿ ಜೊತೆ ಹೆಲ್ಮೆಟ್: ಗಣೇಶನ ವೇಷಧಾರಿಯನ್ನು ಕಂಡು ಕೆಲ ದ್ವಿಚಕ್ರ ವಾಹನ ಸವಾರರು ಅಚ್ಚರಿಗೊಂಡು, ಸಂಚಾರ ನಿಯಮ ಪಾಲಿಸುವ ಪ್ರತಿಜ್ಞೆಯನ್ನೂ ಮಾಡಿದರು. ಇದೇವೇಳೆ ಕಂಪನಿ ನೌಕರರು ಬೆಂಗಳೂರಿಗೆ ತೆರಳುವ ಕೆಲ ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸಿ, ಹೆಲ್ಮೆಟ್ ಹಾಕಲು ಮಾಹಿತಿ ನೀಡಿ, ಗುಲಾಬಿ ಹೂ ಕೊಟ್ಟು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಿದರು.
10ಕ್ಕೂ ಹೆಚ್ಚು ಹೆಲ್ಮೆಟ್ ವಿತರಣೆ: ಕಾರ್ಯಕ್ರಮಕ್ಕೆ ವೇಮಗಲ್ ಪೊಲೀಸ್ ಠಾಣೆ ಎಎಸ್‌ಐ ವೆಂಕಟಪತಿ ಚಾಲನೆ ನೀಡಿದರು. ಸ್ಥಳೀಯ ನಾಯಕ ನವೀನ್ ಕುಮಾರ್ ಸಹ ಸಾಥ್ ನೀಡಿದರು. ರಸ್ತೆಯಲ್ಲಿ ಸಾಗುವ ವಾಹನಗಳನ್ನು ನಿಲ್ಲಿಸಿ, 10ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ನೀಡಿ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವಂತೆ ಅವರೂ ಸಹ ವಾಹನ ಸವಾರರಿಗೆ ಮನವಿ ಮಾಡಿದರು. ಎಲ್ಲೆಡೆ ಯಮನ ವೇಷಧಾರಿಯಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ರೆ ಕೋಲಾರದಲ್ಲಿ ಗಣೇಶನ ವೇಷಧಾರಿಯಿಂದ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಕೆ.ಪಿ.ಮಾನಸ್, ನೌಕರರು ಮತ್ತು ವೇಮಗಲ್ ಪೊಲೀಸ್ ಸಿಬ್ಬಂದಿ ಇದ್ದರು.