Advertisement

ಗೋಪಿ ಚಂದನದಲ್ಲಿ ರೂಪ ತಳೆದ ವಿಘ್ನೇಶ್ವರ

07:26 PM Sep 13, 2021 | Team Udayavani |

ವರದಿ: ಸಿದ್ಧಯ್ಯಸ್ವಾಮಿ ಕುಕುನೂರು

Advertisement

ರಾಯಚೂರು: ಸರ್ಕಾರ ಎಷ್ಟೇ ನಿಷೇಧ ಹೇರಿದರೂ ಪಿಒಪಿ ಗಣೇಶಗಳಿಂದ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ಇಂಥ ಹೊತ್ತಲ್ಲಿ ಇಲ್ಲಿನ ಕಲಾವಿದರೊಬ್ಬರು ಅಪ್ಪಟ ಗೋಪಿ ಚಂದನದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಿ ಇಡೀ ದೇಶದಲ್ಲಿಯೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಿರುವುದು ಗಮನಾರ್ಹ.

ಇಲ್ಲಿನ ವಾಸವಿ ನಗರದ ನಿವಾಸಿ ರಘೋತ್ತಮದಾಸ ಇಂದು ದೇಶದ ವಿವಿಧ ರಾಜ್ಯಗಳಿಗೆ ಗೋಪಿ ಚಂದನ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ವರ್ಣರಂಜಿತ ಪಿಒಪಿ ಗಣೇಶಗಳ ಮೂರ್ತಿಗಳ ಹಾವಳಿ ಮಧ್ಯೆಯೂ ಗೋಪಿ ಚಂದನದ ಗಣೇಶ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿರುವುದು ವಿಶೇಷ.

ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಇಂಥ ಮೂರ್ತಿಯನ್ನು ಪೂಜಿಸುವುದನ್ನು ಕಲಾವಿದ ರಘೋತ್ತಮ ದಾಸ್‌ ಗಮನಿಸಿದ್ದರು. ಅದರ ಜತೆಗೆ ಮನೆಯಲ್ಲಿ ತಾಯಿ ಕೂಡ ಗೋಪಿ ಚಂದನದಲ್ಲಿ ಗೋಕುಲ ನಿರ್ಮಿಸಿ ಪೂಜೆ ಸಲ್ಲಿಸುತ್ತಿದ್ದರು. ಗಣೇಶ ಮೂರ್ತಿಗಳನ್ನು ಯಾಕೆ ಮಾಡಬಾರದು ಎಂಬ ಕಲ್ಪನೆ ಮೂಡಿದ್ದೆ ಇಂದು ಈ ವ್ಯಾಪಾರಕ್ಕೆ ಪ್ರೇರಣೆಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇದು ಅಪ್ಪಟ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳಾಗಿವೆ.

ಕಳೆದ ಒಂದು ವರ್ಷದಿಂದ ಕಲಾವಿದ ಅವರ ತಂದೆ-ತಾಯಿ, ಮನೆಯವರೆಲ್ಲ ಶ್ರದ್ಧೆಯಿಂದ ಈ ಮೂರ್ತಿಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ. ಅರ್ಧ ಅಡಿ ಎತ್ತರದ ಮೂರ್ತಿಗಳಿಂದ ಎರಡು ಅಡಿ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಕೆಲವನ್ನು ಅಚ್ಚು ಹಾಕಿದರೆ ಕೆಲವನ್ನು ಕೈಯಲ್ಲಿ ತಯಾರಿಸಲಾಗುತ್ತಿದೆ. ಈ ವರ್ಷ ವಿವಿಧ ರಾಜ್ಯಗಳಿಂದ ನಾಲ್ಕೈದು ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳಿಗೆ ಬೇಡಿಕೆ ಬಂದಿದೆ. ಈಗ ಸದ್ಯ 2 ಸಾವಿರಕ್ಕೂ ಅಧಿಕ ಗಣೇಶನ ಮೂರ್ತಿಗಳನ್ನು ತಯಾರಿಸಿ ಕಳುಹಿಸಲಾಗಿದೆ.

Advertisement

350 ರೂ.ದಿಂದ 800 ರೂ.ವರೆಗೂ ದರ ನಿಗದಿ ಮಾಡಲಾಗಿದೆ. ಅಳತೆ ಆಧರಿಸಿ ದರ ನಿಗದಿ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಬೇಡಿಕೆ ಬಂದರೆ ರಾಜಧಾನಿ ಬೆಂಗಳೂರಿನಿಂದ ಹೆಚ್ಚು ಬೇಡಿಕೆ ಇದೆ. ಇನ್ನೂ ಮುಂಬೈ, ಚನ್ನೈ, ಹೈದರಾಬಾದ್‌ ಸೇರಿದಂತೆ ದೊಡ್ಡ-ದೊಡ್ಡ ನಗರಗಳಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲಿಗೆಲ್ಲ ಕೋರಿಯರ್‌ ಮೂಲಕ ಮೂರ್ತಿಗಳನ್ನು ಕಳುಹಿಸಿದರೆ, ರಾಜ್ಯದಲ್ಲಿ ಮಾತ್ರ ಇವರೇ ತೆರಳಿ ಮೂರ್ತಿಗಳನ್ನು ತಲುಪಿಸುತ್ತಿದ್ದಾರೆ.

ಏನಿದರ ಮಹತ್ವ?:

ಗೋಪಿಕಾ ಸ್ತ್ರೀಯರು ಕೃಷ್ಣನಿಗೆ ಗಂಧಲೇಪನ ಮಾಡಿದಾಗ ಕೆಳಗೆ ಬಿದ್ದ ಗಂಧವನ್ನೇ ಗೋಪಿ ತಲಾಬ್‌ ಎನ್ನುತ್ತಾರೆ. ಇದನ್ನು ಹಚ್ಚಿಕೊಂಡವರಿಗೆ ಪುಣ್ಯಪ್ರಾಪ್ತಿ ಯಾಗಲಿದೆ ಎನ್ನುವ ಪೌರಾಣಿಕ ಹಿನ್ನೆಲೆಯಲ್ಲಿದೆ. ಇದು ಶ್ರೇಷ್ಠವಾಗಿದ್ದು, ಪೂಜೆ ವೇಳೆಯೂ ಬಳಸಲಾಗುತ್ತಿದೆ. ಅಂಥ ಗೋಪಿ ಚಂದನದಿಂದ ಮೂರ್ತಿ ತಯಾರಿಸಿದರೆ ಅದರ ಮಹತ್ವ ಕೂಡ ಹೆಚ್ಚಲಿದೆ ಎನ್ನುವುದು ರಘೋತ್ತಮ ದಾಸ ವಿವರಣೆ. ಅಲ್ಲದೇ, ಪರಿಸರ ಸ್ನೇಹಿ ಗೋಪಿ ಚಂದನ ಗಣೇಶ ಮೂರ್ತಿ ಮನೆಯಲ್ಲೇ ಬಕೆಟ್‌ಲ್ಲಿಟ್ಟು ವಿಸರ್ಜನೆ ಮಾಡಬಹುದು. ಬಳಿಕ ಅದೇ ಗೋಪಿ ಚಂದನವನ್ನು ನಿತ್ಯವೂ ಬಳಸಬಹುದಾಗಿದೆ. ಗೋಪಿ ಚಂದನ ಬಳಕೆಯಿಂದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿ ಆಗಲಿದೆ ಎನ್ನುವುದು ಮೂರ್ತಿ ತಯಾರಿಕರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next