ಹುಬ್ಬಳ್ಳಿ: ಹತ್ತಾರು ಸಾಮಾಜಿಕ ಸೇವೆ, ಹಲವರಿಗೆ ನೆರವಿನ ಹಸ್ತ ಚಾಚುವ ಮೂಲಕ ಅಭಿಮಾನಿಗಳ ಪಾಲಿಗೆ ದೇವರಾಗಿದ್ದ ಅಪ್ಪು ಇದೀಗ ಗಣೇಶನೊಂದಿಗೆ ರೂಪ ಪಡೆಯುತ್ತಿದ್ದಾರೆ. ಸ್ಥಳೀಯ ಕಲಾವಿದರೊಬ್ಬರು ತಯಾರಿಸಿದ ಪುನೀತ ರಾಜಕುಮಾರ ಅವರಿಗೆ ಶ್ರೀ ಗಣೇಶ ಆಶೀರ್ವದಿಸುವ ಮೂರ್ತಿ ಹೆಚ್ಚು ಬೇಡಿಕೆ ಸೃಷ್ಟಿಸಿದೆ. ನಗರದಲ್ಲಿ ಆ.31ರಂದು ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶನೊಂದಿಗೆ ಅಭಿಮಾನಿಗಳು ಅಪ್ಪುವಿನ ಸ್ಮರಣೆಗೆ ಮುಂದಾಗಿದ್ದಾರೆ. ಸ್ಥಳೀಯ ಕಲಾವಿದರೊಬ್ಬರು ಅಪ್ಪುವನ್ನು ಹೊತ್ತು ಹಿಡಿದ ಗಣೇಶ ಮೂರ್ತಿಗಳು ಸಾಕಷ್ಟು ಮೆಚ್ಚುಗೆ ಗಳಿಸುವ ಮೂಲಕ ಬೇಡಿಕೆ ಸೃಷ್ಟಿಸಿದೆ. ಅಭಿಮಾನಿಗಳು ನಮಗೂ ಅಪ್ಪುವಿನ ಮೂರ್ತಿಯುಳ್ಳ ಗಣೇಶ ಪ್ರತಿಮೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಬಮ್ಮಾಪುರ ಓಣಿಯ ಕಲಾವಿದ ರಿತೇಶ ವಿಜಯ ಕುಮಾರ ಕಾಂಬಳೆ ಈ ಮೂರ್ತಿಗಳ ರೂವಾರಿಗಳಾಗಿದ್ದಾರೆ. ಪುನೀತ ಅವರ ಮೇಲಿನ ಅಭಿಮಾನದಿಂದ ಆರಂಭದಲ್ಲಿ 10 ಮೂರ್ತಿಗಳನ್ನು ತಯಾರಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಮೂರ್ತಿಗಳು ಖಾಲಿಯಾದವು. ಇದೀಗ ಬರೋಬ್ಬರಿ 60ಕ್ಕೂ ಹೆಚ್ಚು ಮೂರ್ತಿಗಳಿಗೆ ಬೇಡಿಕೆ ಸಲ್ಲಿಸಿದ್ದು, ನಗರ ಅಷ್ಟೇ ಅಲ್ಲ ರಾಜ್ಯದ ವಿವಿಧ ಭಾಗಗಳಿಂದಲೂ ಬೇಡಿಕೆ ಬಂದಿದೆ. ದರ ಎಷ್ಟಾದರೂ ಪರವಾಗಿಲ್ಲ.
ಅಪ್ಪು ಅವರ ಮೂರ್ತಿ ಸುಂದರವಾಗಿರಬೇಕು ಎನ್ನುವ ಹೆಬ್ಬಯಕೆ ಅಭಿಮಾನಿಗಳದ್ದಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಹಳ ದಿನಗಳಿಲ್ಲ. ಕಡಿಮೆ ಅವಧಿಯಲ್ಲಿ ಇಷ್ಟೊಂದು ಮೂರ್ತಿಗಳನ್ನು ಸಿದ್ಧಪಡಿಸಲು ಅಸಾಧ್ಯ ಎಂದು ಕಲಾವಿದರು ಮನವರಿಕೆ ಮಾಡಿದರೂ ಹೇಗಾದರೂ ತಮಗೊಂದು ಮಾಡಿಕೊಡಿ ಎನ್ನುವ ಮನವಿಗಳು ಹೆಚ್ಚಾಗುತ್ತಿವೆ. ಸುಮಾರು 15 ಇಂಚಿನ ಮೂರ್ತಿಗಳು ಈಗಾಗಲೇ 7ರಿಂದ 8 ಸಾವಿರ ರೂ. ಗೆ ಒಂದರಂತೆ ಮಾರಾಟವಾಗಿದೆ. ಹೆಚ್ಚಿನ ಮೂರ್ತಿ ತಯಾರಿಸಿ ಅಭಿಮಾನಿಗಳ ಬೇಡಿಕೆಗೆ ಮನ್ನಣೆ ಕೊಡಬೇಕು ಎಂದರೆ ವಾತಾವರಣ ಸಹಕರಿಸುತ್ತಿಲ್ಲ. ಮಳೆ, ತಂಪಾದ ವಾತಾವರಣದಿಂದ ಮಾಡಿದ ಮೂರ್ತಿಗಳು ಒಣಗುತ್ತಿಲ್ಲ. ಒಣಗದ ಹೊರತು ಬಣ್ಣ ಬಳೆಯಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನ ಬೇಡಿಕೆ ತಿರಸ್ಕರಿಸುವಂತಹ ಸ್ಥಿತಿ ಎದುರಾಗಿದೆ.
ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಅಪ್ಪುವಿನ ಅಭಿಮಾನಿಗಳು ನಮಗೆ ಗಣೇಶನ ಆಶಿರ್ವಾದ ಇರುವ ಮೂರ್ತಿ ಸಿದ್ಧಪಡಿಸಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಹೆಚ್ಚಿನ ಹಣ ಬೇಕಾದರು ತೆಗೆದುಕೊಳ್ಳಿ ನಮಗೆ ಗಣೇಶ ಮೂರ್ತಿ ಮಾಡಿಕೊಡಿ ಎನ್ನುತ್ತಿದ್ದಾರೆ. ಸಮಯದ ಅಭಾವ ಹಾಗೂ ವಾತಾವರಣ ಕೂಡ ಸಕರಾತ್ಮಕವಾಗಿಲ್ಲ. ಈ ಅಂಶಗಳನ್ನು ಮನವರಿಕೆ ಮಾಡಿ ಬೇಡಿಕೆ ತಿರಸ್ಕರಿಸುತ್ತಿದ್ದೇವೆ. –
ರೀತೇಶ ವಿಜಯಕುಮಾರ ಕಾಂಬ್ಳೆ, ಕಲಾವಿದ
ಅಪ್ಪು ಜತೆಗಿನ ಗಣೇಶ ಮೂರ್ತಿ ಮಾಡಿರುವ ವಿಚಾರ ತಡವಾಗಿ ಗೊತ್ತಾಯಿತು. ಇಂತಹ ಮೂರ್ತಿ ತಯಾರಿಸಿ ಕೊಡುವಂತೆ ಕಲಾವಿದರಿಗೆ ಮನವಿ ಮಾಡುತ್ತಿದ್ದೇವೆ. ಆದರೆ ಸಮಯ ಹಾಗೂ ಮೂರ್ತಿ ಒಣಗದ ಕಾರಣ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಮೊದಲೇ ಗೊತ್ತಾಗಿದ್ದರೆ ದೊಡ್ಡ ಮೂರ್ತಿಗೆ ಬೇಡಿಕೆ ಸಲ್ಲಿಸುತ್ತಿದ್ದೆವು. –
ಅಶೋಕ ಚಂದನಮಟ್ಟಿ, ಅಪ್ಪು ಅಭಿಮಾನಿ
-ಬಸವರಾಜ ಹೂಗಾರ