Advertisement

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

09:07 PM Aug 04, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೇನು ಹಬ್ಬಗಳ ಸರದಿ ಆರಂಭಗೊಳ್ಳುತ್ತಿದ್ದು, ಸೆಪ್ಟಂಬರ್‌ ತಿಂಗಳಿನಲ್ಲಿ ನಡೆಯುವ ಗಣಪತಿ ಹಬ್ಬಕ್ಕೆ ವಿಗ್ರಹ ತಯಾರಿ ಈಗಾಗಲೇ ಆರಂಭಗೊಂಡಿದೆ.

Advertisement

ಕೊರೊನಾ ಆತಂಕ ನಡುವೆಯೇ ಗಣೇಶ ಚತುರ್ಥಿಗೆ ಗಣಪನ ವಿಗ್ರಹಗಳ ಬೇಡಿಕೆ ಕೇಳಿಬರುತ್ತಿದ್ದು, ಕಲಾವಿದರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭ ಗೊಂಡಿದ್ದರಿಂದ ವಿಗ್ರಹ ತಯಾರಿಕೆಗೆ ಕೊರೊನಾ ದೊಡ್ಡ ಮಟ್ಟದ ಪರಿಣಾಮ ಬೀರಿಲ್ಲ. ಸದ್ಯದ ಪರಿಸ್ಥಿತಿಯಂತೆ ಮನೆಗಳಲ್ಲಿ ಯಥಾ ಪ್ರಕಾರ ಹಬ್ಬದ ಆಚರಣೆ ನಡೆಯಲಿದ್ದು, ಸಣ್ಣ ಗಾತ್ರದ ಗಣೇಶ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ ಬರತೊಡಗಿದೆ. ಕಳೆದ ವರ್ಷ ಕೊರೊನಾ ಆತಂಕ ಇದ್ದರೂ ಮನೆಗಳಲ್ಲಿ ಸರಳವಾಗಿ ಗಣೇಶ ಪೂಜೆ ನಡೆದಿತ್ತು. ಅದೇ ರೀತಿ ಈ ಬಾರಿಯೂ ಸರಳ ಗಣೇಶ ಪೂಜೆಗೆ ಒತ್ತು ನೀಡಲಾಗುತ್ತಿದೆ. ಇನ್ನು ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ವಿಗ್ರಹಕ್ಕೂ ಮುಂಗಡ ಬುಕ್ಕಿಂಗ್‌ ನಡೆಯುತ್ತಿದೆ.

ಆವೆ ಮಣ್ಣು ಜಿಎಸ್‌ಟಿ ವ್ಯಾಪ್ತಿಗೆ :

“ಗಣಪತಿ ವಿಗ್ರಹ ತಯಾರಿಕೆಗೆ ಆವೆ ಮಣ್ಣು ಬಳಕೆ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆವೆ ಮಣ್ಣನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ ಹೆಚ್ಚಿನ ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಮಣ್ಣು ಖರೀದಿಗೆ ದರ ಹೆಚ್ಚಾಗಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ಗಣಪತಿ ವಿಗ್ರಹಕ್ಕೂ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಕುಂದಾಪುರದಲ್ಲಿ ಉತ್ತಮ ಗುಣಮಟ್ಟದ ಆವೆ ಮಣ್ಣು ಸಿಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಅಲ್ಲಿಂದ ಮಣ್ಣು ತರುತ್ತಾರೆ’ ಎನ್ನುತ್ತಾರೆ ಗಣಪತಿ ವಿಗ್ರಹ ತಯಾರಾಕರು.

Advertisement

ವಿದೇಶಗಳಿಗೂ ಮಂಗಳೂರಿನ ಗಣಪತಿ:

ಮಂಗಳೂರಿನಲ್ಲಿ ತಯಾರಾಗುವ ಗಣಪತಿ ವಿಗ್ರಹಕ್ಕೆ ದೇಶ-ವಿದೇಶಗಳಲ್ಲಿ ಬೇಡಿಕೆ ಇರುತ್ತದೆ. ಇಲ್ಲಿ ತಯಾರು ಮಾಡಿದ ವಿಗ್ರಹಗಳನ್ನು ವಿಮಾನದ ಮುಖೇನ ವಿದೇಶಗಳಿಗೆ ರವಾನಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯ ವಿಮಾನ ವ್ಯವಸ್ಥೆ ಇಲ್ಲದ ಕಾರಣ ಈ ಬಾರಿ ವಿದೇಶಗಳಿಗೆ ಬೇಡಿಕೆ ತುಸು ಕಡಿಮೆಯಾಗಿದೆ. ಕೆಲವರು ಜನವರಿಯಲ್ಲಿಯೂ ಗಣಪತಿ ಹಬ್ಬ ಆಚರಿಸುತ್ತಾರೆ. ಆ ವೇಳೆ ಮತ್ತೆ ಬುಕ್ಕಿಂಗ್‌ ಆರಂಭಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ವಿಗ್ರಹ ತಯಾರಕರಿದ್ದಾರೆ.

ಸಾರ್ವಜನಿಕ ಆಚರಣೆ ಅನುಮಾನ :

ಕೋವಿಡ್‌ ಮೂರನೇ ಅಲೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಗಣೇಶ ಹಬ್ಬ, ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಮಹಾನವಮಿ, ವಿಜಯದಶಮಿ ಸಹಿತ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿರ್ಬಂಧ ಉಂಟಾಗುವ ಸಾಧ್ಯತೆ ಇದೆ. ಹಬ್ಬಗಳ ಆರಂಭಕ್ಕೂ ಮುನ್ನ ರಾಜ್ಯ ಸರಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ನಿರೀಕ್ಷೆ ಇದೆ ಎಂದು ಜಿಲಾಡಳಿತ ಮೂಲಗಳು ತಿಳಿಸಿವೆ.

ಕೊರೊನಾ ಆತಂಕ ಇದ್ದರೂ ಗಣಪತಿ ವಿಗ್ರಹಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುವವರು ಯಥಾಪ್ರಕಾರ ಗಣಪತಿ ವಿಗ್ರಹ ಖರೀದಿಸುತ್ತಿದ್ದಾರೆ. ಹೊರ ರಾಜ್ಯ, ವಿದೇಶಗಳಿಗೆ ಗಣಪತಿ ವಿಗ್ರಹ ರವಾನೆಗೆ ಈ ಹಿಂದೆ ಬೇಡಿಕೆ ಇತ್ತು. ಆದರೆ ಸದ್ಯ ಕುಗ್ಗಿದ್ದು, ಜನವರಿ ತಿಂಗಳಿನ ಮಾಘ ಮಾಸದಲ್ಲಿ ಬೇಡಿಕೆ ಬರುವ ಸಾಧ್ಯತೆ ಇದೆ.  -ಕಿಶೋರ್‌ ಪೈ, ಗಣಪತಿ ವಿಗ್ರಹ ತಯಾರಕರು

Advertisement

Udayavani is now on Telegram. Click here to join our channel and stay updated with the latest news.

Next