Advertisement

ಬರ-ನೆರೆ ಮಧ್ಯೆ ಗಣೇಶ ಹಬ್ಬಕ್ಕೆ ಗಣಿನಾಡು ಸಜ್ಜು

01:21 PM Sep 02, 2019 | Suhan S |

ಬಳ್ಳಾರಿ: ಬರಗಾಲ, ನೆರೆಹಾವಳಿಯಲ್ಲೂ ವಿಘ್ನಗಳ ನಿವಾರಕ ವಿನಾಯಕನ ಹಬ್ಬವನ್ನು ಆಚರಿಸಲು ಗಣಿನಾಡು ಬಳ್ಳಾರಿ ಜಿಲ್ಲೆ ಸಿದ್ಧಗೊಂಡಿದ್ದು ಬೆಲೆ ಏರಿಕೆ ನಡುವೆ ಹಬ್ಬ ಕಳೆಗಟ್ಟಿದೆ.

Advertisement

ಗಣೇಶನ ಹಬ್ಬಕ್ಕೆ ಗಣಿನಾಡು ಬಳ್ಳಾರಿ ಸಿದ್ಧಗೊಂಡಿದೆ. ಮನೆಮನೆಗಳಲ್ಲಿ, ಓಣಿ, ಬಡಾವಣೆಗಳಲ್ಲಿ ವಿನಾಯಕನನ್ನು ಪ್ರತಿಷ್ಠಾಪಿಸಲು ಟೆಂಟ್‌ಗಳು ಸಿದ್ಧಗೊಂಡಿದೆ. ಬೆಲೆ ಏರಿಕೆ ನಡುವೆಯೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಗಳಲ್ಲೇ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಗ್ರಾಹಕರು, ಚಿಕ್ಕ ಚಿಕ್ಕ ಮಣ್ಣಿನ ಗಣಪನ ಮೂರ್ತಿಯನ್ನೂ ದುಬಾರಿ ಬೆಲೆಗೆ ಖರೀದಿಸಿ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ನಗರದ ನಾನಾಕಡೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟ ಕಂಡುಬರುತ್ತಿದೆ. ರಾಜ್ಯದ ಬೆಂಗಳೂರು ಸೇರಿದಂತೆ ಸ್ಥಳೀಯ ಕೆಲವೆಡೆ ಹಾಗೂ ನೆರೆಯ ಆಂಧ್ರದಿಂದಲೂ ಸಹ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಮೂರು ದಿನ ಮುನ್ನವೇ ಬಂದಿದ್ದು, ಈ ಬಾರಿ ವ್ಯಾಪಾರವೂ ಇಲ್ಲದಿರುವುದರಿಂದ ವಿಗ್ರಹ ಮಾರಾಟಗಾರರಲ್ಲಿ ಆತಂಕ ಮನೆಮಾಡಿದೆ. ಬರ ಆವರಿಸಿರುವುದರಿಂದ ಹಬ್ಬದ ಸಂಭ್ರಮ ಎಲ್ಲೆಡೆ ಕಂಡುಬರುತ್ತಿಲ್ಲ. ಉತ್ತಮ ಮಳೆಯಾಗಿ ಬೆಳೆಯೂ ಚೆನ್ನಾಗಿ ಬಂದಿದ್ದರೆ ರೈತರಲ್ಲಿ ಸಂಭ್ರಮ ಇರುತ್ತಿತ್ತು, ಸುತ್ತಮುತ್ತಲಿನ ಹಳ್ಳಿಗಳಿಂದ ನಗರಕ್ಕೆ ಬಂದು ಗಣೇಶ ಮೂರ್ತಿಗಳ ಖರೀದಿಗೆ ಮುಂದಾಗುತ್ತಿದ್ದರು. ಆದರೆ ಆ ವಾತಾವರಣ ಇದೀಗ ಕಾಣದಾಗಿದೆ. ಅಷ್ಟೇ ಅಲ್ಲ ಬೆಲೆ ಏರಿಕೆಯ ಬಿಸಿಯೂ ಸಹ ಜನರಲ್ಲಿ ಉತ್ಸಾಹವನ್ನೂ ಕುಗ್ಗಿಸಿದೆ.

ಹೆಚ್ಚಿದ ಹೂವು, ಹಣ್ಣುಗಳ ಬೆಲೆ: ಗಣೇಶನ ಹಬ್ಬಕ್ಕೆಂದು ವಿಧವಾದ ಹಣ್ಣುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಲೆ ಏರಿಕೆಯಿಂದಾಗಿ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಸೇಬು, ದಾಳಿಂಬೆ, ದ್ರಾಕ್ಷಿ ಹಣ್ಣುಗಳು ಕೆಜಿ 100 ರೂ. ಇದೆ. ಡಜನ್‌ ಬಾಳೆಹಣ್ಣು 50 ರೂ, ಪೇರಲಹಣ್ಣು 60 ರೂ.ಬೆಲೆ ಇದೆ. ಗ್ರಾಹಕರು ತೀರಾ ಚೌಕಾಸಿ ಮಾಡಿದರೆ 5ರಿಂದ 10 ರೂ. ರಿಯಾಯಿತಿ ದೊರೆಯುತ್ತದೆ ಹೊರತು, ಅದಕ್ಕೂ ಕಡಿಮೆ ಕೇಳಿದರೆ ಬೆಳಗ್ಗೆಯಿಂದ ವ್ಯಾಪಾರವೇ ಆಗಿಲ್ಲ. ಸಿಗೋ 10 ರೂಗಳಲ್ಲೂ ಚೌಕಾಸಿ ಮಾಡುತ್ತಾರೆ ಎಂದು ಮಾರಾಟಗಾರರು ಗೊಣಗುತ್ತಾರೆ. ಇದರಿಂದ ಜನಸಾಮಾನ್ಯರು ಹಣ್ಣುಗಳನ್ನು ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಆದರೆ, ಹಬ್ಬಕ್ಕೆ ಹಣ್ಣುಗಳು ಬೇಕಾಗಿರುವುದರಿಂದ ಕಡಿಮೆ ಬೆಲೆಗೆ ಲಭಿಸುವ ಹಣ್ಣುಗಳನ್ನು ಖರೀದಿಸಲು ಗ್ರಾಹಕರು ಮುಂದಾಗುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ವ್ಯಾಪಾರ ತುಂಬಾ ಕಡಿಮೆಯಿದೆ. ಹಬ್ಬದ ದಿನದಂದು ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಿದೆ ಎಂದು ಆಶಯ ವ್ಯಕ್ತಪಡಿಸುತ್ತಾರೆ ಹಣ್ಣಿನ ವ್ಯಾಪಾರಿ ಗಾದಿಲಿಂಗ.

ಹೆಚ್ಚಿದ ಹೂವಿನ ಬೆಲೆ: ಮಳೆ ಇಲ್ಲದಿರುವ ಕಾರಣ ಹೂವಿನ ಬೆಲೆಯಲ್ಲೂ ಹೆಚ್ಚಳ ಕಂಡುಬಂದಿದೆ. ಕನಕಾಂಬರಿ 800ರೂಗೆ ಕೆಜಿ, ಮಲ್ಲಿಗೆ 240ರೂಗೆ ಕೆಜಿ, ಸುಗಂಧರಾಜ ಹೂವು 200 ರೂ., ಗುಲಾಬಿ 200ರೂ., ಚಂಡು ಹೂವು 100ರೂ.ಗೆ ಒಂದು ಕೆಜಿ ಇದೆ. ಸೋಮವಾರ ಹಬ್ಬ ಇರುವುದರಿಂದ ಹೂವಿನ ಬೆಲೆಯಲ್ಲೂ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಹೊನ್ನೂರಸ್ವಾಮಿ. ಹಬ್ಬಕ್ಕೆಂದು ನಾನಾ ವಿಧದ ಹೂವುಗಳನ್ನು ಮಾರಾಟಕ್ಕೆಂದು ತಂದಿದ್ದೇವೆ ಆದರೆ ವ್ಯಾಪಾರ ಮಾತ್ರ ತುಂಬಾ ಕಡಿಮೆಯಿದೆ, ತಂದ ಹೂವುಗಳು ಸಹ ಬಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

Advertisement

ನಾನಾ ಅಲಂಕಾರಿಕ ವಸ್ತುಗಳ ಮಾರಾಟ: ವಿನಾಯಕನ ಹಬ್ಬ ಆಚರಣೆಗೆಂದು ಟೆಂಟ್‌ಗಳನ್ನು ನಿರ್ಮಿಸಿಕೊಂಡು ಸಿದ್ದತೆ ಮಾಡಿಕೊಂಡಿರುವ ಯುವಕರು, ಟೆಂಟ್‌ಗಳನ್ನು ಅಲಂಕರಿಸಲು ಬೇಕಾದ ಚಿತ್ತಾರದ ವಿದ್ಯುತ್‌ ದೀಪಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಹೂ ಕುಂಡಗಳು, ಬಣ್ಣಬಣ್ಣದ ಚಿಕ್ಕ ಗಾತ್ರದ ವಿದ್ಯುತ್‌ ಬಲ್ಬ್ಗಳು, ಬಾಳೆಕಂಬ, ವೀಳ್ಯದೆಲೆ ಖರೀದಿಸುವ ಭರಾಟೆ ಜೋರಿತ್ತು.

ನಿರೀಕ್ಷಿತ ವ್ಯಾಪಾರವಿಲ್ಲ:

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ವರ್ಷ ವ್ಯಾಪಾರದಲ್ಲಿ ಭಾರಿ ವ್ಯತ್ಯಾಸವಾಗಿದೆ. ಪಿಒಪಿ ಗಣೇಶ ವಿಗ್ರಹಗಳ ಮಾರಾಟಕ್ಕೆ ಬ್ರೇಕ್‌ ಬಿದ್ದಿರುವುದರಿಂದ ಮಣ್ಣಿನ ಗಣೇಶ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ. ಜತೆಗೆ ಬೆಲೆಯೂ ಏರಿಕೆಯಾಗಿದೆ. ಹಾಗಾಗಿ ವ್ಯಾಪಾರವೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಪರಿಣಾಮ ವಿಗ್ರಹಗಳು ಸಹ ಮಾರಾಟವಾಗದೇ ಉಳಿದಿದ್ದು, ನಷ್ಟವಾಗುವ ಸಾಧ್ಯತೆಯಿದೆ. ಹಬ್ಬದ ದಿನದಂದು ನಿರೀಕ್ಷಿತ ಪ್ರಮಾಣದಲ್ಲಿ ವಿಗ್ರಹಗಳು ಮಾರಾಟವಾಗುವ ನಿರೀಕ್ಷೆಯಿದೆ.•ಎರ್ರಿಸ್ವಾಮಿ, ಗಣೇಶ ವಿಗ್ರಹ ಮಾರಾಟಗಾರ
•ವೆಂಕೋಬಿ ಸಂಗನಕಲ್ಲು
Advertisement

Udayavani is now on Telegram. Click here to join our channel and stay updated with the latest news.

Next