Advertisement

ಮಹಾರಾಷ್ಟ್ರದಿಂದ ಬರಲಿವೆ ಮಹಾ ಗಣಪಗಳು

01:18 PM Aug 30, 2022 | Team Udayavani |

ಬೆಂಗಳೂರು: ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಅವಕಾಶ ನೀಡಿರುವ ಕಾರಣ ದೊಡ್ಡ ಗಾತ್ರದ ಗಣಪ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾ ಹಿನ್ನೆಲೆ ಕಳೆದು ಎರಡು ವರ್ಷ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದ್ದರಿಂದ ವಿಗ್ರಹ ತಯಾರಕರು, ಈ ಬಾರಿ ಕೂಡ ಹೆಚ್ಚು ಪ್ರಮಾಣದಲ್ಲಿ ದೊಡ್ಡ ಗಾತ್ರದ ಮೂರ್ತಿ ತಯಾರಿಸುವ ಗೋಜಿಗೆ ಹೋಗಿರಲಿಲ್ಲ.

Advertisement

ಈ ಬಾರಿ ಕೊರೊನಾ ಕ್ಷೀಣಿಸಿದ ಕಾರಣ ಇದೀಗ ಅದ್ಧೂರಿ ಗಣೇಶೊತ್ಸವಕ್ಕೆ ರಾಜ್ಯ ಮುಕ್ತವಾಗಿದೆ. ಆದರೆ, ಗ್ರಾಹಕರ ಬೇಡಿಕೆ ತಕ್ಕಂತೆ ಮೂರ್ತಿಗಳೇ ಸಿಗುತ್ತಿಲ್ಲ. ಹೀಗಾಗಿ ಮಹಾರಾಷ್ಟ್ರ, ಹೈದರಾಬಾದ್‌, ತಮಿಳುನಾಡು ಮತ್ತಿತರರ ಭಾಗಗಳಿಂದ ವಿಗ್ರಹಗಳನ್ನು ತರಿಸಿಕೊಳ್ಳುವಂತಾಗಿದೆ.

ಈ ಪೈಕಿ ಮಹಾರಾಷ್ಟ್ರದಿಂದಲೇ ಅಧಿಕ ಪ್ರಮಾಣದಲ್ಲಿ ಮೂರ್ತಿಗಳನ್ನು ಇಲ್ಲಿಗೆ ಆಮದು ಮಾಡಿಕೊಳ್ಳಲಾಗುತ್ತಿದೆ. ಚಿಕ್ಕ ಮೂರ್ತಿಗಳನ್ನು ಇಲ್ಲಿಯೇ ತಯಾರಿಸಲಾಗು ತ್ತಿದೆ. ಆದರೆ, ಸುಮಾರು 10ರಿಂದ 20 ಅಡಿ ವರೆಗಿನ ಗಣೇಶಮೂರ್ತಿಗಳು ಮಂಬೈ, ನಾಗ್ಪುರ್‌, ಕೊಲ್ಹಾಪುರ ಮತ್ತಿತರರ ಭಾಗಗಳಿಂದ ಬೆಂಗಳೂರು ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ.

ಗ್ರಾಹಕರ ಬೇಡಿಕೆ, ಮೂರ್ತಿ ವಿನ್ಯಾಸದ ಆಸಕ್ತಿಯ ತಕ್ಕಂತೆ ಮೂರ್ತಿಗಳನ್ನು ಮಹಾರಾಷ್ಟ್ರಗಳಿಂದ ತರಿಸಿಕೊಳ್ಳಲಾಗುತ್ತದೆ. ದೊಡ್ಡ ಗಾತ್ರದ ಆಕರ್ಷಕ ಗಣಪ ವಿಗ್ರಹಗಳು ಲಕ್ಷ ರೂ.ಗೆ ಅಧಿಕ ಬೆಲೆ ಮಾರಾಟ ಆಗುತ್ತಿವೆ ಎಂದು ಮಾರಾಟಗಾರರು ಹೇಳುತ್ತಾರೆ.

ಚಿಕ್ಕಮಗಳೂರು, ಕೊಡುಗು, ಮೈಸೂರು, ಹಾಸನ ಸೇರಿದಂತೆ ಹಲವು ಭಾಗಗಳಿಂದ ಬೃಹತ್‌ ಪ್ರಮಾಣದ ಮೂರ್ತಿಗಳಿಗೆ ಬೇಡಿಕೆಯಿದೆ. ಆದರೆ, ಮಣ್ಣಿನ ಆಭಾವದ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತ ಮೂರ್ತಿಗಳನ್ನು ವಿನ್ಯಾಸ ಮಾಡಲು ಆಗುತ್ತಿಲ್ಲ ಎಂದು ತಯಾರಕರು ತಿಳಿಸುತ್ತಾರೆ.

Advertisement

ಗೋಕಾಕ್‌ನಿಂದ ಜೇಡಿ ಮಣ್ಣು ಆಮದು: ಗೋಕಾಕ್‌ ಕರದಂಡು ಮಾದರಿಯಲ್ಲೇ ಇದೀಗ ಗೋಕಾಕ್‌ ಜೇಡಿ ಮಣ್ಣು ಖ್ಯಾತಿ ಪಡೆದಿದ್ದು, ಗಣೇಶ ಮೂರ್ತಿಗಳ ತಯಾರಕರು ಅಲ್ಲಿನ ಮಣ್ಣು ಹೆಚ್ಚು ಇಷ್ಟಪಡುತ್ತಾರೆ. ಕಾರಣ ಆ ಮಣ್ಣು ಹೊಳಪು ಇರುತ್ತದೆ. ರಾಜ್ಯವ್ಯಾಪಿ ಸುರಿದ ಮಳೆ ಗೌರಿಗಣೇಶ ಮೂರ್ತಿಗಳ ತಯಾರಿಕೆ ಮೇಲೂ ಪರಿಣಾಮ ಬೀರಿದ್ದು, ರಾಜಧಾನಿ ಬೆಂಗಳೂರಿಗರ ಗಣೇಶ ಮೂರ್ತಿಗಳ ಬೇಡಿಕೆ ಪೂರೈಸಲು ಬೆಳಗಾವಿಯ ಗೋಕಾಕ್‌ನಿಂದ ಜೇಡಿ ಮಣ್ಣು ಆಮದು ಮಾಡಿಕೊಳ್ಳಲಾಗುತ್ತಿದೆ. ವಿಭಿನ್ನ ಶೈಲಿಯ ಮೂರ್ತಿ ತಯಾರಿಕೆಗೆ ಎಲ್ಲ ಕೆರೆಯ ಮಣ್ಣುಗಳನ್ನು ಬಳಕೆ ಮಾಡುವುದಿಲ್ಲ. ಜೇಡಿಮಣ್ಣಿನಲ್ಲೂ ಗುಣಮಟ್ಟ ಹೊಂದಿದ ಮಣ್ಣನ್ನು ಮಾತ್ರ ಬಳಸಲಾಗುತ್ತದೆ. ಗೋಕಾಕ್‌ ಭಾಗದಿಂದ ಪೂರೈಕೆ ಆಗುವ ಮಣ್ಣು ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಆರ್‌.ವಿ.ರಸ್ತೆಯ ಗಣೇಶ ಮೂರ್ತಿ ತಿಳಿಸುತ್ತಾರೆ.

ಹೀಗಾಗಿ ಗೋಕಾಕ್‌ ಭಾಗದಿಂದ ಮಣ್ಣಿಗೆ ಬಹಳಷ್ಟು ಬೇಡಿಕೆ ಇದೆ. ಆದರೆ, ಗೋಕಾಕ್‌ ಭಾಗದಲ್ಲೂ ಕೂಡ ಹೆಚ್ಚಿನ ಪ್ರಮಾಣದ ಮಳೆ ಆಗಿ ಕೆರೆ ಕೋಡಿ ಹೊಡೆದಿದ್ದು ಮಣ್ಣು ಮೇಲಕ್ಕೆ ತೆಗೆಯಲು ಆಗುತ್ತಿಲ್ಲ ಎಂದು ಮಣ್ಣು ಪೂರೈಕೆ ಮಾಡುವವರು ಹೇಳುತ್ತಿದ್ದಾರೆ. ಜೇಡಿಮಣ್ಣಿನ ಅಭಾವದ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತ ಮೂರ್ತಿ ತಯಾರಿಕೆ ಸಾಧ್ಯವಾಗುತ್ತಿಲ್ಲ ಎಂದು ಮೂರ್ತಿ ತಯಾರಕ ಮತ್ತು ಮಾರಾಟಗಾರ ನವೀನ್‌ ಹೇಳುತ್ತಾರೆ.

ಇಲ್ಲಿ ಕೆರೆಗಳೇ ಮಾಯ, ಮಣ್ಣು ಇನ್ನೆಲ್ಲಿ?: ಬೆಂಗಳೂರಿನಲ್ಲೂ ಈ ಹಿಂದೆ ಜೇಡಿ ಮಣ್ಣುಗಳನ್ನು ಕೆರೆಗಳಿಂದ ತೆಗೆಯಲಾಗುತ್ತಿತ್ತು. ಗಣಪತಿ ಮೂರ್ತಿಗೆ ಬೇಕಾದ ಉತ್ತಮ ಮಣ್ಣು ಸಿಲಿಕಾನ್‌ ಸಿಟಿಯ ಸುತ್ತಮುತ್ತಲಿನ ಪ್ರದೇಶಗಳಲ್ಲೆ ದೊರಕು ತ್ತಿತ್ತು. ಆದರೆ ಈಗ ಒತ್ತುವರಿಯ ಹಿನ್ನೆಲೆಯಲ್ಲಿ ನಗರದಲ್ಲಿ ಕೆರೆಗಳೇ ಮಾಯವಾಗಿವೆ. ಕೆರೆಗಳಿದ್ದ ಸ್ಥಳದಲ್ಲಿ ಬಹುಮಹಡಿ ಕಟ್ಟಡಗಳು ಎದ್ದು ನಿಂತಿವೆ. ಹೀಗಾಗಿ ಜೇಡಿಮಣ್ಣು ಸಕಾಲಕ್ಕೆ ಬೇಕು ಎಂದರೆ ಎಲ್ಲಿ ಸಿಗುತ್ತೇ ಎಂದು ಶೀನಪ್ಪ ಪ್ರಶ್ನಿಸುತ್ತಾರೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next