ಕೋಲಾರ: ಕೋವಿಡ್ ಆತಂಕದ ನಡುವೆ ಸಾಮೂಹಿಕ ಗಣಪನ ಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆಗೆ ಷರತ್ತು ಗಳನ್ವಯ ಅವಕಾಶ ಸಿಕ್ಕಿದ್ದು, ಹೂ, ಹಣ್ಣು, ಮೂರ್ತಿಗಳ ಖರೀದಿ ಭರಾಟೆ ಜೋರಾಗಿಯೇ ಇದೆ.
ಸಾಮೂಹಿಕ ಗಣಪನ ಪ್ರತಿಷ್ಠಾಪಿಸಲು ಸರ್ಕಾರ ಅನುಮತಿ ನೀಡುವುದೇ ಅನು ಮಾನವಿದ್ದ ಕಾರಣ ಮಾರಾಟಗಾರರು ಹೊರಗಿನ ಜಿಲ್ಲೆ, ರಾಜ್ಯಗಳಿಂದ ಮೂರ್ತಿಗಳನ್ನು ತರುವ ದುಸ್ಸಾಹಸಕ್ಕೆ ಇಳಿಯಲಿಲ್ಲ. ಜತೆಗೆ ವಾರ್ಡ್‌ಗೊಂದು ಗಣಪನ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ಇರುವುದು ಜತೆಗೆ ನಗರಸಭೆ, ಆರೋಗ್ಯ, ಪೊಲೀಸ್, ಅಗ್ನಿ ಶಾಮಕ ಇಲಾಖೆಗಳ ಅನುಮತಿ ಕಡ್ಡಾಯವಾಗಿರುವುದರಿಂದ ಹೆಚ್ಚಿನ ಯುವಕರು ಕಳೆದ ವರ್ಷದಷ್ಟು ಉತ್ಸಾಹದಿಂದ ಗಣಪನ ಪ್ರತಿಷ್ಠಾಪನೆಗೆ ಮುಂದಾಗುತ್ತಿಲ್ಲ. ಸಾಲುದ್ದ ಹಣ್ಣಿನ ಅಂಗಡಿಗಳು,ರಸ್ತೆ ಬದಿಯ ಫುಟ್ ಪಾತ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಹೂವಿನ ಅಂಗಡಿಗಳು ಹಬ್ಬದ ವಹಿವಾಟಿನ ಭರಾಟೆಗೆ ಇಂಬು ನೀಡಿವೆ.
ವ್ಯಾಪಾರದ ಭರಾಟೆ: ಇದರೊಂದಿಗೆ ನಗರದ ಹಳೆ ಬಸ್ ನಿಲ್ದಾಣದ ಹೂವಿನ ಮಾರು ಕಟ್ಟೆ, ರಂಗಮಂದಿರದ ಮುಂಭಾಗದ ರಸ್ತೆಯಲ್ಲೂ ಹಬ್ಬದ ವ್ಯಾಪಾರ ಜೋರಾಗಿದ್ದು, ಜನಜಂಗುಳಿ ಕಂಡು ಬರುತ್ತಿದೆ. ಹಳೆ ಬಸ್ ನಿಲ್ದಾಣದಲ್ಲಿ ವಿವಿಧ ತರಹೇ ವಾರಿ ಹೂಗಳನ್ನು ರಾಶಿ ಹಾಕಿ ಮಾರುತ್ತಿದ್ದರೆ, ರಂಗಮಂದಿರದ ಮುಂಭಾಗದ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಣ್ಣಿನ ಅಂಗಡಿಗಳು, ಬಾಳೆಗಿಡ, ವಿವಿಧ ತರಾವರಿ ಪ್ಲಾಸ್ಟಿಕ್ ಹೂಗಳ ಅಂಗಡಿಗಳು ತಲೆಯೆತ್ತಿವೆ. ದೊಡ್ಡ ಗಣೇಶನಿಗೆ ಸಿಗದ ಅವಕಾಶ: ಗಣೇಶ ಮೂರ್ತಿಗಳ ಅಂಗಡಿಗಳನ್ನು ರಸ್ತೆ ಬದಿ ಹಾಕಿಕೊಂಡಿದ್ದು, ಈ ಬಾರಿ ಅತಿ ಹೆಚ್ಚು ಅಂದರೆ 4 ಅಡಿ ಗಣಪನನ್ನು ಮಾತ್ರ ಪ್ರತಿ ಷ್ಠಾಪಿಸಲು ಅವಕಾಶವಿದೆ. ಆದ್ದರಿಂದ ದೊಡ್ಡ ಗಣಪನ ಮೂರ್ತಿಗಳು ಕಾಣುತ್ತಿಲ್ಲ. ಪಿಒಪಿ ಗಣಪನ ಮಾರಾಟ ನಿಷೇಧಿಸಿರುವುದರಿಂದ ಗಣಪನ ಮೂರ್ತಿಗಳ ಬೆಲೆ ಮತ್ತಷ್ಟು ಏರಿಕೆ ಕಂಡಿದೆ, ಜತೆಗೆ ನಾಗರಿಕರು ಪರಿಸರ ಸ್ನೇಹಿ ಗಣಪನನ್ನೇ ಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರುವುದು ಪರಿಸರ ಸಂರಕ್ಷಣೆಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ಹಣ್ಣು, ಹೂಬೆಲೆ ಗಗನದತ್ತ: ಸೇಬಿನ ಬೆಲೆ ಪ್ರತಿ ಕೇಜಿಗೆ 200 ರೂ. ಹಾಗೆಯೇ ಸೀಬೆ, ಮೂಸಂಬಿ, ದಾಳಿಂಬೆಯ ಬೆಲೆಯೂ ಕೆ.ಜಿ. ಗೆ 150 ರೂ. ದಾಟಿದೆ, ಬಾಳೆ ಹಣ್ಣಿನ ಬೆಲೆಯೂ ಹೆಚ್ಚಿದ್ದು, ಏಲಕ್ಕಿ ಬಾಳೆ ಕೆ.ಜಿ.ಗೆ 60 ರೂ. ಆದರೆ, ಪಚ್ಚಬಾಳೆ ಕೆ.ಜಿ.ಗೆ 40 ರೂ. ಮಾರಾಟವಾಗುತ್ತಿತ್ತು. ಹೂಗಳು ಹಬ್ಬದ ಕಾರಣ ದಿಢೀರ್ ಬೆಲೆ ಏರಿಸಿಕೊಂಡಿದ್ದು, ಬಟನ್ ರೋಸ್ ಕೆ.ಜಿ.ಗೆ 250 ರೂ.ನಿಂದ 280, ಸೇವಂತಿ ಕೆ.ಜಿ.ಗೆ 160 ರೂ. ಇದ್ದು, ಮಲ್ಲಿಗೆ 600 ರೂ. ಇದ್ದರೆ ಕನಕಾಂಬರ ಅದರ ಹೆಸರೇ ಹೇಳುವಂತೆ ಕನಕದಂತೆ ಬೆಲೆ ಏರಿಸಿಕೊಂಡು ಕೆ.ಜಿ.ಗೆ 1500ರೂ ದಾಟಿದೆ. ಅಕ್ಕಿ, ಬೆಲ್ಲ, ಶೇಂಗಾ, ಎಣ್ಣೆಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬಾರದಿದ್ದರೂ, ಬೆಲೆ ಏರಿಕೆ ನಾಗರಿಕರ ಜೇಬಿಗೆ ಕತ್ತರಿ ಹಾಕಿರುವುದಂತೂ ದಿಟ.