ಧಾರವಾಡ: ಭಾದ್ರಪದ ಶುಕ್ಲ ಚೌತಿಯಾದ ಸೋಮವಾರ ಸಾಂಸ್ಕೃತಿಕ ನಗರಿಯ ಎಲ್ಲರ ಮನೆ-ಮನೆಗಳಲ್ಲಿ ಗಜವದನ ಪ್ರತಿಷ್ಠಾಪನೆಗೊಂಡಿದ್ದಾನೆ.
ನಗರದಲ್ಲಿ 287ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೊಂಡಿದ್ದು, ಡಿಜೆ ಸಂಗೀತ, ಮೆರವಣಿಗೆ ಮೂಲಕ ಗಣೇಶನನ್ನು ಬರಮಾಡಿಕೊಳ್ಳಲಾಗಿದೆ. ಅದರಲ್ಲೂ ಈ ಸಲ ಬಹುತೇಕ ವನಸ್ಪತಿ, ಚೂರ್ಣಗಳಿಂದ ತಯಾರಿಸಲ್ಪಟ್ಟ ಬಣ್ಣ ಲೇಪಿತ ನೈಸರ್ಗಿಕ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು ಸಾರ್ವಜನಿಕ ಸ್ಥಳ ಹಾಗೂ ಮನೆಗಳಲ್ಲೂ ಪ್ರತಿಷ್ಠಾಪನೆಗೊಂಡಿವೆ. ಈ ಸಲ ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಪಿಒಪಿ ಗಣಪ ಪ್ರತಿಷ್ಠಾಪನೆ ನಿಷೇಧ ಮಾಡಿದ ಪರಿಣಾಮ ಬಹುತೇಕ ಕಡೆ ಪರಿಸರ ಸ್ನೇಹಿ ಮಣ್ಣಿನ ಗಣಪನೇ ಪ್ರತಿಷ್ಠಾಪನೆ ಆಗಿದ್ದಾನೆ.
ನಾನಾರೂಪ ಗಣಪ: ಪ್ರತಿ ಸಲದಂತೆ ಸುಭಾಷ ರೋಡ್, ಹೆಬ್ಬಳ್ಳಿ ಅಗಸಿ, ಸಂಗಮ ಸರ್ಕಲ್ ವೃತ್ತದ ಸಾರ್ವಜನಿಕ ಗಣಪ ಗಮನ ಸೆಳೆದಿದ್ದು, ರಾಘವೇಂದ್ರ ಸ್ವಾಮೀಜಿ, ಶಿವಾಜಿ, ಹನುಮ, ಕೃಷ್ಣ, ಬಾಲ ಗಣಪ ಸೇರಿದಂತೆ ವಿವಿಧ ರೂಪ ಆಕಾರಗಳಲ್ಲಿ ಗಣಪ ಅನಾವರಣಗೊಂಡಿದ್ದಾನೆ. ಗುಲಗಂಜಿಕೊಪ್ಪದಲ್ಲಿ ಸೈಕಲ್ ಮೇಲೆ ಕನ್ನಡ ಶಾಲೆಗೆ ಹೊರಟಿರುವ ಗಣಪ ಗಮನ ಸೆಳೆಯುತ್ತಿದ್ದಾನೆ. ನಗರದ ಬೂಸಪ್ಪ ಚೌಕ, ಹೊಸಯಲ್ಲಾಪುರ, ಮದಿಹಾಳ, ಗಾಂಧಿಚೌಕ, ಲೈನ್ ಬಜಾರ್, ಟಿಕಾರೆ ರಸ್ತೆ ಈ ಎಲ್ಲಾ ಭಾಗಗಳಲ್ಲಿ ನಾನಾ ರೀತಿಯ ಗಣೇಶ ಮೂರ್ತಿಗಳು ಸ್ಥಾಪಿಸಲಾಗಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ.
ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ತಯಾರಿಸಿದ 100 ಸಾರ್ವಜನಿಕ ಗಣಪತಿಗಳ ಪೈಕಿ 65 ಗಣಪ ಧಾರವಾಡ ನಗರದಲ್ಲೇ ಪ್ರತಿಷ್ಠಾಪಿಸಲಾಗಿದೆ. ಈ ಪೈಕಿ ಸುಭಾಸ ರೋಡಕಾ ರಾಜಾ ಗಣಪತಿ 10 ಪೂಟ್ ಇದ್ದು, ವಿಶೇಷವಾಗಿದೆ. ಇನ್ನು ಕೆಸಿಡಿ ಸರ್ಕಲ್ನಲ್ಲಿ ಸಂಪೂರ್ಣ ಅಷ್ಟಗಂಧ ಗಣಪ, ಗರಗದಲ್ಲಿ ಸಿದ್ಧಗಂಗಾ ಶ್ರೀಗಳ ರೂಪಿ ಗಣಪ, ಅಮ್ಮಿನಬಾವಿಯಲ್ಲಿ ಬಸವಣ್ಣ ರೂಪಿಯ 5 ರಿಂದ 6 ಪೂಟ್ ಎತ್ತರದ ಗಣಪ ಪ್ರತಿಷ್ಠಾಪನೆಗೊಂಡಿದ್ದಾನೆ.
ಡಿಜೆ, ಅಲಂಕಾರ ಅಬ್ಬರ ಕಡಿಮೆ: ಕಳೆದ ಬಾರಿ ಹೋಲಿಸಿದರೆ ಈ ಸಲ ಗಣೇಶನ ಸ್ವಾಗತ ಮೆರವಣಿಗೆಯಲ್ಲಿ ಡಿಜೆ ಅಬ್ಬರ ಕಡಿಮೆ ಆಗಿತ್ತು. ಕೆಲವೊಂದಿಷ್ಟು ಕಡೆ ಡಿಜೆ ಅಬ್ಬರದಲ್ಲಿಯೇ ಗಣೇಶನ್ನು ಕರೆ ತಂದರೂ ಯುವಕರ ಪಡೆಯಲ್ಲಿ ಜೋಶ್‌ನ ಕಳೆ ಕಡಿಮೆ ಇತ್ತು. ಇದಲ್ಲದೇ ನೆರೆ ಪ್ರವಾಹ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆ ಅಲಂಕಾರಕ್ಕೆ ಆದ್ಯತೆ ಕಡಿಮೆ ನೀಡಲಾಗಿದ್ದು, ಕೆಲವೊಂದಿಷ್ಟು ಗಜಾನನ ಯುವಕ ಮಂಡಳಗಳು ಚಂದಾ ವಸೂಲಿ ಮಾಡದೇ ತಾವೇ ಹಣ ಹಾಕಿ ಗಣೇಶನ ಪ್ರತಿಷ್ಠಾಪನೆ ಮಾಡಿವೆ. ಇನ್ನು ಸೋಮವಾರ ಸಂಜೆ ವೇಳೆ ಶುರುವಾದ ಜಿಟಿ ಜಿಟಿ ಮಳೆ ಗಣೇಶನ ಸಂಭ್ರಮಕ್ಕೆ ಸ್ವಲ್ಪ ಅಡಚಣೆ ಮಾಡಿತ್ತು. ಗ್ರಾಮೀಣ ಭಾಗದಲ್ಲಿ ಸಡಗರದಿಂದ ಗಣೇಶನ ಮೂರ್ತಿ ಅಭೂತ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಲಾಗಿದೆ.