ಗಣೇಶ್ ಸ್ವಿಮ್ಮಿಂಗ್ ಮಾಡಿರೋದು ಗೊತ್ತು. ಆದರೆ, ಇದೇ ಮೊದಲ ಸಲ ಸ್ಕೂಬಾ ಡೈವಿಂಗ್ ಮಾಡಿದ್ದು ಗೊತ್ತಾ? ಹೌದು, ಗಣೇಶ್ ಅವರು ಮೊದಲ ಸಲ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಬರೀ ಅವರಷ್ಟೇ ಅಲ್ಲ, ನಟಿ ರಶ್ಮಿಕಾ ಮಂದಣ್ಣ ಕೂಡ ಸ್ಕೂಬಾ ಡೈವಿಂಗ್ ಮಾಡಿರುವುದು ಮೊದಲು. ಇಷ್ಟು ಹೇಳಿದ ಮೇಲೆ, ಇವರಿಬ್ಬರು ಸ್ಕೂಬಾ ಡೈವಿಂಗ್ ಮಾಡಿರುವುದು “ಚಮಕ್’ ಚಿತ್ರದಲ್ಲಿ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.
ಹೌದು, ಸಿಂಪಲ್ ಸುನಿ ನಿರ್ದೇಶನದ “ಚಮಕ್’ ಚಿತ್ರದಲ್ಲಿ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಇವರಿಬ್ಬರೂ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಆ ಚಿತ್ರದ ದೃಶ್ಯವನ್ನು ಮತ್ತಷ್ಟು ರೋಚಕ ಎನಿಸಿದ್ದಾರೆ. ಸಿನಿಮಾದಲ್ಲಿ ಅವರ ಮದುವೆ ಬಳಿಕ ಒಂದು ಟ್ರಿಪ್ ಹೋಗುವ ದೃಶ್ಯವಿದೆ. ಅಲ್ಲೊಂದು ಹಾಡು ಶುರುವಾಗುತ್ತೆ. ಆ ಹಾಡಲ್ಲಿ ಬರುವ ಸನ್ನಿವೇಶವೊಂದರಲ್ಲಿ ಇಬ್ಬರೂ ಸುಮಾರು ಒಂದುವರೆ ನಿಮಿಷದಷ್ಟು ಕಾಲ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.
ಅವರಿಬ್ಬರು ಸ್ಕೂಬಾ ಡೈವಿಂಗ್ ಮಾಡಿದ್ದು, ನೇತ್ರಾಣಿಯಲ್ಲಿ. ಇದಕ್ಕೂ ಮುನ್ನ, ಇಟಲಿಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸುವ ಯೋಚನೆ ನಿರ್ದೇಶಕರಿಗಿತ್ತು. ಆದರೆ, ಅಲ್ಲಿ ಅಷ್ಟೊಂದು ಸೇಫ್ಟಿ ಅನಿಸದ ಕಾರಣ, ಅವರು, ಅಂಡಮಾನ್ ಕಡೆ ಹೋಗುವ ಬಗ್ಗೆ ನಿರ್ಧರಿಸಿದರು. ಅಲ್ಲೂ ಅದು ಸರಿ ಎನಿಸದ್ದರಿಂದ, ಕೊನೆಗೆ ನೇತ್ರಾಣಿ ಆಯ್ಕೆ ಮಾಡಿಕೊಂಡು, ಆ ದೃಶ್ಯವನ್ನು ಪೂರ್ಣಗೊಳಿಸಿದ್ದಾರೆ. ಮೊದ ಮೊದಲು ಸ್ವಿಮ್ಮಿಂಗ್ ಫೂಲ್‌ನಲ್ಲಿ ಇವರಿಬ್ಬರಿಗೂ ತರಬೇತಿ ಕೊಡಿಸಲಾಗಿದೆ.
ನೇತ್ರಾಣಿಯ ಸ್ಕೂಬಾ ಡೈವ್ ತರಬೇತುದಾರ ಗಣೇಶ್ ಎಂಬುವವರೇ ಇವರಿಬ್ಬರಿಗೂ ತರಬೇತಿ ನೀಡಿದ್ದಾರೆ. ಒಂದು ದಿನ ತರಬೇತಿ ಬಳಿಕ ಎರಡನೇ ದಿನ ಇಬ್ಬರನ್ನೂ ನೇತ್ರಾಣಿ ಸಮುದ್ರಕ್ಕೆ ಇಳಿಸಿದ್ದಾರೆ. “ಮೊದ ಮೊದಲು ನೀರಿಗಿಳಿದಾಗ ಇಬ್ಬರಲ್ಲೂ ಭಯವಿತ್ತು. ಒಮ್ಮೆಲೆ ಭಯಗೊಂಡು ಮೇಲೆ ಬರೋರು. ಆದರೆ, ಸ್ವಲ್ಪ ಹೊತ್ತಿನ ಬಳಿಕ ಇಬ್ಬರು ನೀರಿಗಿಳಿದವರು ಮೇಲೆ ಬರಲಿಲ್ಲ.
ಅಲ್ಲೇ ಚಿತ್ರೀಕರಣ ಯಶಸ್ವಿಗೊಳಿಸಿದ್ದಲ್ಲದೆ, ಕೆಲಹೊತ್ತು ನೀರಲ್ಲಿ ಆಟ ಆಡಿ ಆ ನಂತರ ಮೇಲೆ ಬಂದರು. ಅರ್ಧ ದಿನದಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಬೇಕೆಂಬ ಯೋಚನೆ ಇತ್ತು. ಆದರೆ, ಅಲ್ಲೇ ಒಂದು ದಿನ ಚಿತ್ರೀಕರಣಕ್ಕೆ ಸಮಯ ಹಿಡಿಯಿತು. ಅಂಡರ್‌ವಾಟರ್‌ನಲ್ಲಿ ಡಿಪಿ5 ಎಂಬ ಕ್ಯಾಮೆರಾ ಬಳಸಿ, ಸೆರೆಹಿಡಿಯಲಾಗಿದೆ’ ಎಂದು ವಿವರಿಸುತ್ತಾರೆ ನಿರ್ದೇಶಕ ಸುನಿ.
ಅಂದಹಾಗೆ, “ಚಮಕ್’ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ಚಂದ್ರಶೇಖರ್ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಡಿ.22 ಅಥವಾ 29 ರಂದು ತೆರೆಗೆ ಬರಲು ತಯಾರಿ ಮಾಡಿಕೊಂಡಿದೆ ಚಿತ್ರತಂಡ. ಬಾಹರ್ ಫಿಲಂಸ್‌ನ ಬಾಷಾ ಅವರು ವಿತರಣೆ ಮಾಡುತ್ತಿದ್ದು, ಸುಮಾರು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.