Advertisement

7ನೇ ದಿನ ಗಣೇಶನಿಗೆ ಅದ್ಧೂರಿ ವಿದಾಯ..

12:36 PM Sep 01, 2017 | Team Udayavani |

ಧಾರವಾಡ: ಪಟಾಕಿ ಅಬ್ಬರ, ಡಿಜೆ ಸಂಗೀತ, ಯುವಕರ ನೃತ್ಯದ ಸಂಭ್ರಮದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ 7ನೇ ದಿನವಾದ ಗುರುವಾರ ಸಂಭ್ರಮದಿಂದ ವಿದಾಯ ಹೇಳಲಾಯಿತು. ಉಪನಗರ ಪೊಲೀಸ್‌ ಠಾಣೆ, ವಿದ್ಯಾಗಿರಿ ಪೊಲೀಸ್‌ ಠಾಣೆ ಹಾಗೂ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯ 125  ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಅದ್ಧೂರಿಯಾಗಿ ನೆರವೇರಿಸಲಾಯಿತು.

Advertisement

ಆ ಪೈಕಿ ಮದಾರಮಡ್ಡಿ, ಮಾಳಮಡ್ಡಿ, ಎಮ್ಮಿಕೇರಿ, ನೆಹರು ನಗರ, ಸುಭಾಷ ರಸ್ತೆ,  ದುರ್ಗಾದೇವಿ ಗುಡಿ, ಜೋಶಿ ಗಲ್ಲಿ, ಹಾವೇರಿಪೇಟ ಸೇರಿದಂತೆ ಅನೇಕ ಕಡೆಗಳಲ್ಲಿ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗಳನ್ನು ಯುವಕರು ಡಿಜೆ  ಸಂಗೀತದೊಂದಿಗೆ ಕುಣಿಯುತ್ತ ನಗರದ ಪ್ರಮುಖ ರಸ್ತೆ ಮತ್ತು ಬೀದಿಗಳಲ್ಲಿ ಮೆರವಣಿಗೆ ಮಾಡಿ, ಹೊಸಯಲ್ಲಾಪುರದ ನುಚ್ಚಂಬಲಿ ಬಾವಿಯಲ್ಲಿ ವಿಸರ್ಜಿಸಿದರು. 

ಇದಲ್ಲದೇ ಕೆಲ  ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನೂ 7 ದಿನದಂದು ವಿಸರ್ಜನೆ ಮಾಡಲಾಯಿತು. ಉಳಿದಂತೆ ಹು-ಧಾ ಹೊರತು ಪಡಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯಾಲಯ  ವ್ಯಾಪ್ತಿಯ ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 215 ಸಾರ್ವಜನಿಕ ಗಣಪತಿ ವಿಸರ್ಜನೆ ಕಾರ್ಯ ತಡರಾತ್ರಿವರೆಗೂ ಜರುಗಿತು. 

ಕರಗಿದ ಮಣ್ಣಿನ ಗಣಪ: ಧಾರವಾಡ ನಗರದ ಸುಭಾಷ ರೋಡ್‌ನ‌ಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಸುಭಾಷ ರೋಡ್‌ ಕಾ ರಾಜಾ ಗಣಪತಿಯ ವಿಸರ್ಜನೆ ಪರಿಸರ ಸ್ನೇಹಿಯಾಗಿ ಮಾಡಲಾಯಿತು. ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನೇ ಪ್ರತಿಷ್ಠಾಪಿಸಿದ್ದ ವಿನಾಯಕ ಉತ್ಸವ ಸಮಿತಿಯು, ಈ ಸಲವೂ ಪೆಂಡಾಲ್‌ ಎದುರಿನಲ್ಲಿಯೇ ಕೃತಕ ಹೊಂಡ ನಿರ್ಮಿಸಿ ಪರಿಸರ ಸ್ನೇಹಿ ಗಣೇಶನಿಗೆ ಪರಿಸರ ಸ್ನೇಹಿ ವಿಸರ್ಜನೆ ಮಾಡುವ ಮೂಲಕ ವಿದಾಯ ಹೇಳಿ ಗಮನ ಸೆಳೆಯಿತು. 

ಕೃತಕ ಹೊಂಡದಲ್ಲಿ ಕುಳಿತ ಗಣಪನಿಗೆ ನೀರಿನಿಂದ ಅಭಿಷೇಕ ಮಾಡಲಾಯಿತು. ಬರೋಬ್ಬರಿ 17 ನಿಮಿಷದಲ್ಲಿ ನೀರಿನ ಅಭಿಷೇಕದಲ್ಲಿ ಮಣ್ಣಿನ ಗಣಪ ಕರಗಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಗಣೇಶ ಮೂರ್ತಿ ಮೆರವಣಿಗೆ ದೇಸಿ ಶೈಲಿಯಲ್ಲಿ ಮಾಡಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next