Advertisement
ಇಲ್ಲಿಗೆ ಮೊದಲ ಬಾರಿ ಬಂದಾಗ ಗಣೇಶನ ಹಬ್ಬ ಹೇಗಿರುತ್ತದೋ ಎಂದು ಕೊಂಡಿದ್ದೆ. ಮೊದಲ ಸಲ ಹಳೆ ದುಬೈನ ಬರ್ ದುಬೈಯಲ್ಲಿ ಪುಟ್ಟ ಬೋಟಿನಲ್ಲಿ ಗಣೇಶಮೂರ್ತಿಯನ್ನು ಕೂರಿಸಿಕೊಂಡು ಭಜನೆ ಮಾಡುತ್ತ ಸಾಗುತ್ತಿದ್ದರು ಗುಜರಾತಿ ದಂಪತಿ. ಅವರನ್ನೇ ತನ್ಮಯನಾಗಿ ನೋಡುತ್ತ ಬೆರಗುಗೊಂಡಿದ್ದೆ. ಊರಿನ ಹಬ್ಬದ ಸಡಗರ ಕಣ್ಣೆದುರು ಕಟ್ಟಲಾರಂಭಿಸಿತ್ತು.
Related Articles
Advertisement
ವೀಕೆಂಡ್ ಆಗಿದ್ದರೆ ಹಬ್ಬದ ಸಂಭ್ರಮ ಹೆಚ್ಚು. ಹಬ್ಬದ ದಿನ ಬೆಳಗ್ಗೆ ನಮ್ಮ ಮನೆಯ ಎಲ್ಲ ಗಣಪತಿಗಳು ಪೂಜೆಗೆ ಕೂರುತ್ತಾರೆ ! ಅಂದರೆ, ಉಡುಗೊರೆಯಾಗಿ ಬಂದ ಎಲ್ಲ ಗಣಪತಿ ವಿಗ್ರಹಗಳನ್ನು ಇಟ್ಟು, ಗಣೇಶ ಅಥರ್ವಶೀರ್ಷ ಹೇಳಿ ಪೂಜೆ ಮಾಡುತ್ತೇವೆ.
ಹಬ್ಬದ ನೆಪದಲ್ಲಿ ಎಷ್ಟೊಂದು ಮಂದಿ ಸ್ನೇಹಿತರು ಆಗಮಿಸುತ್ತಾರೆ! ಸ್ನೇಹಿತರ ಮಕ್ಕಳಿಂದ ಗಣೇಶನ ಮುಂದೆ ಬಸ್ಕಿಹೊಡೆಯುವ ಸ್ಪರ್ಧೆ ಬೇರೆ ಏರ್ಪಡಿಸುತ್ತೇವೆ.ಕೊಲ್ಲಿ ರಾಷ್ಟ್ರವಾದರೂ ಬಾಳೆಎಲೆಯಲ್ಲಿಯೇ ಊಟ. ಗಣೇಶಚತುರ್ಥಿ ಎಂದರೆ ಉಪವಾಸವಿರುತ್ತೇವೆ. ಕಟ್ಟುನಿಟ್ಟಿನ ನಿರಾಹಾರ ವೇನೂ ಇಲ್ಲ. ನನ್ನವಳಂತೂ 21 ಬಗೆಯ ನೈವೇದ್ಯ ಮಾಡಿಟ್ಟಿರುತ್ತಾಳೆ. ಅವಳಿಗೆ ವಿನಾಯಕ ಇಷ್ಟದೇವತೆ. ನಾವು ನಮಗೆ ಇಷ್ಟವಾದ ಕಡುಬು, ಮೋದಕ, ಕರ್ಜಿಕಾಯಿ, ಉಂಡಲುಕ, ಪಂಚಕಜ್ಜಾಯ, ಉಂಡೆ, ಚಕ್ಕುಲಿ, ಕೋಡುಬಳೆ- ಹೀಗೆ ಹಲವು ಬಗೆ ತಿನಿಸುಗಳನ್ನು ಆಗಾಗ ತಿನ್ನುತ್ತ ಕಾಲ ಕ್ಷೇಪ ಮಾಡುತ್ತೇವೆ.
ನಮ್ಮ ಪಾಲಿಗೆ ಹಬ್ಬ ಕೇವಲ ಆಚರಣೆ ಅಲ್ಲ. ಊರಿನಿಂದ ದೂರವಾಗಿ ನೆಲೆಸಿರುವ ನಮ್ಮಂಥವರ ಯಾಂತ್ರಿಕ ಬದುಕಿನಲ್ಲಿ ಹೊಸ ಹುರುಪು ಮೂಡಲು ಇದೊಂದು ನೆಪ.
ಮತ್ತೆ ಗಣಪತಿ ಬಪ್ಪನ ಹುಟ್ಟುಹಬ್ಬ ಬಂದಿದೆ. ತವರೂರಿನ ಸಂಭ್ರಮವೇ ನೆನಪಾಗುತ್ತಿದೆ. ಅದನ್ನು ಮನಸ್ಸಿನಲ್ಲಿಟ್ಟು ಕೊಂಡು ಇಲ್ಲಿಯೂ ಹಬ್ಬದ ತಯಾರಿ ನಡೆಸುತ್ತಿದ್ದೇವೆ. ಒಂದೇ ದಿನದಲ್ಲಿ ಜಗವಿಡೀ ಸುತ್ತುವ ಗಣೇಶ ನಾವಿರುವ ದುಬೈಗೆ ಬಾರದಿರನು !
ಶ್ರೀಕೃಷ್ಣ ಕುಳಾಯಿ ದುಬೈ