ಸಿರುಗುಪ್ಪ: ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಆಚರಣೆಗಳಿಗೆ ಆಡಚಣೆ ಮಾಡುವುದು, ಮತೀಯ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಶಾಂತಿಯುತವಾಗಿ ಗಣೇಶ ವಿಸರ್ಜನೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ತಿಳಿಸಿದರು.
ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ ವೀರಸಾವರ್ಕರ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜರೋಹಣಕ್ಕೆ ಮುಸ್ಲಿಂರ ವಿರೋಧ ಇಲ್ಲದಿದ್ದರೂ ಪೊಲೀಸ್ ಅಧಿಕಾರಿಗಳು ಅವಕಾಶ ನೀಡದ್ದರಿಂದ ಮೂರು ವರ್ಷ ನಮ್ಮ ಪಕ್ಷ ಹೋರಾಟ ನಡೆಸಿ ಧ್ವಜಾರೋಹಣ ಮಾಡಲು ಸಾಧ್ಯವಾಗಿದೆ ಎಂದರು.
ವಿವಾದಗಳಿಂದ ಸುದ್ದಿಯಾಗುತ್ತಿದ್ದ ಹುಬ್ಬಳ್ಳಿಯಲ್ಲೂ ದಾಖಲೆಯ 26ಗಂಟೆ ಗಣೇಶ ಮೆರವಣಿಗೆ ನಡೆಸಿದರೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹುಬ್ಬಳ್ಳಿಯ ಕೆಲವು ಪೊಲೀಸ್ ಠಾಣೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ನನ್ನನ್ನು ಅತಿಥಿಯನ್ನಾಗಿ ಕರೆದಿದ್ದರು. ಆದರೆ ಸಿರುಗುಪ್ಪದಲ್ಲಿ ಹಿಂದೂ ಮಹಾಸಭಾದ ಗಣೇಶ ಸಮಿತಿಗೂ ಪೊಲೀಸ್ ಇಲಾಖೆ ನಡುವಿನ ಗೊಂದಲದಿಂದಾಗಿ ವಿವಾದ ನಡೆಯುವುದು ವಿಪರ್ಯಾಸವಾಗಿದೆ.
ಆದ್ದರಿಂದ ರಾಜ್ಯ ಸರ್ಕಾರವು ಕೂಡಲೆ ಮಧ್ಯಪ್ರವೇಶಿಸಿ ಹಿಂದೂ ಮಹಾಸಭಾ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು ಗಣೇಶ ವಿಸರ್ಜನೆಗೆ ಶಾಂತಿಯುತವಾಗಿ, ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡಬೇಕು. ವಿನಾಕಾರಣ ಬಂಧಿಸಿದರೆ ನಮ್ಮ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿಯ 33ಸದಸ್ಯರ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಮೊಕದ್ದಮೆ ದಾಖಲಿಸಲಾಗಿದ್ದು, ಇವರಲ್ಲಿ ಒಬ್ಬ ಕಾರ್ಯಕರ್ತರನ್ನು ಬಂಧಿಸಿದರೆ ಪುನಃ ನಾನು ಬಂದು ಜೊತೆಗೆ ರಾಜ್ಯದ ಬಿಜೆಪಿ ಮುಖಂಡರು ಇವರ ಬಿಡುಗಡೆಗಾಗಿ ಸಿರುಗುಪ್ಪದಲ್ಲಿ ಬೃಹತ್ ಹೋರಾಟ ನಡೆಸಲಿದೆ ಎಂದರು. ಗಣೇಶೋತ್ಸವ ಸಮಿತಿ ಕಾರ್ಯಕರ್ತರನ್ನು ಬಂಧಿಸುವ ಮೂಲಕ ನಗರದಲ್ಲಿ ಗೊಂದಲ ನಿರ್ಮಾಣವಾಗಿದೆ. ಈ
ಸಮಸ್ಯೆ ತಿಳಿಯಲೆಂದೇ ಇಲ್ಲಿಗೆ ಬಂದಿದ್ದೇನೆ. ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಎಸ್ಪಿಯೊಂದಿಗೆ ಈ ಸಮಸ್ಯೆ ಕುರಿತು ಚರ್ಚಿಸುತ್ತೇನೆ ಎಂದರು.
ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಚೆನ್ನಬಸವನಗೌಡ, ಕಾರ್ಯದರ್ಶಿ ರಾಮಲಿಂಗಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ, ಮಾಜಿ ಸಂಸದೆ ಜೆ.ಶಾಂತ, ಮಾಜಿ ಉಪಮೇಯರ ಶಶಿಕಲಾ, ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಅಶೋಕ, ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅನಿಲ್ ನಾಯ್ಡು, ಭಜರಂಗ ದಳ ಜಿಲ್ಲಾ ಕಾರ್ಯದರ್ಶಿ
ಗೋವಿಂದ ನಾಯಕ, ಆರ್‌ಎಸ್‌ಎಸ್ ತಾಲೂಕು ವ್ಯವಸ್ಥಾಪಕ ರಾಘವೇಂದ್ರ ಇದ್ದರು.