Advertisement

ಮಕ್ಕಳ ಕೈಯಿಂದ ಜೀವ ತಳೆದ ಮಣ್ಣ ಗಣಪ

06:53 PM Sep 01, 2019 | Sriram |

ಕುಂದಾಪುರ: ಗಣಪನ ಹಬ್ಬದ ಸರಳ ಆಚರಣೆ ಹೇಗೆಂಬ ಪ್ರಶ್ನೆಯನ್ನು ಅವರ ಮನಸ್ಸಿನಲ್ಲಿ ಬಿತ್ತಿದ್ದಷ್ಟೇ. ಕಾಡಿನ ಸಾರಯುಕ್ತ ಕೆಂಪು ಮಣ್ಣನ್ನು ಹೊತ್ತು ತಂದ ಅವರು, ತಟ್ಟಿ ಕುಟ್ಟಿ ಹದಗೊಳಿಸಿ,ತಿಕ್ಕಿ ತೀಡಿ ಸಣ್ಣ ಸಣ್ಣ ಗಣಪನನ್ನು ರೂಪುಗೊಳಿಸಿದರು. ಮಣ್ಣಲ್ಲೇ ಮೂಷಿಕ, ಮೋದಕ ಮೂಡಿಸಿ,ಕಾಡ ಎಲೆ,ಹೂವು ಕಾಯಿಗಳಿಂದಲೇ ಅಲಂಕಾರ ಮಾಡಿ, ದೊಡ್ಡ ಎಲೆಯನ್ನು ಹಿನ್ನೆಲೆಯಲ್ಲಿಟ್ಟು ಪ್ರಭಾವಳಿಯನ್ನೂ ಮಾಡಿ ಇದು “ನಮ್ಮ ಗಣಪ’ ಎಂದರು. ಕೊನೆಯಲ್ಲಿ ಕಾಡ ಬೀಜಗಳನ್ನು ಗಣಪನ ಒಡಲಲ್ಲಿಟ್ಟು ಇವನು ಭೂಮಿಯಲ್ಲಿ ಹುಟ್ಟಿ ಬೆಳೆವ “ಜೀವ ಗಣಪ’ ಎಂದರು.

Advertisement

ವಂಡ್ಸೆಯ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮಣ್ಣ ಗಣಪನಿಗೆ “ಜೀವ’ ಕೊಟ್ಟ ಬಗೆ ಇದು.

ಗಣಪನ ಮೂರ್ತಿ ರಚನೆ ನಮ್ಮಿಂದ ಸಾಧ್ಯವೇ ಎಂಬ ಅಳುಕಿಗೆ ಅವರಿಗಿದ್ದ ಸಮಾಧಾನ ಗಣಪನ ಸರಳ ರೂಪ. ಎಲ್ಲರ ಕಲ್ಪನೆಗೊದಗುವ, ಯಾರ ಕೈಯಲ್ಲೂ ಸುಲಭವಾಗಿ ಅರಳುವ ಸರಳ ರೂಪಿ ಗಣಪ. ಅಷ್ಟು ಮಾತ್ರವಲ್ಲ ಗಣಪ ಮಣ್ಣ ಮಗ. ತಾಯಿ ಪಾರ್ವತಿಯ ದೇಹದ ಕೊಳೆಯೇ ಗಣಪನ ರೂಪ ಪಡೆದದ್ದಲ್ಲವೇ? ಬಳಿಕ ಅವನು ಪಡೆದ ಆನೆಯ ಮುಖ, ಹಾವಿನ ಪಟ್ಟಿ, ಮೂಷಕ ವಾಹನ ಇವೆಲ್ಲವೂ ಪ್ರಕೃತಿಯ ಸಂಕೇತ. ಹಾಗೆಯೇ ಗಣಪನ ಮೂರ್ತಿಯೂ ಮಣ್ಣ ಮೂರ್ತಿಯಾಗಬೇಕಲ್ಲವೇ? ವಿದ್ಯಾರ್ಥಿಗಳ ಪ್ರಶ್ನೆ.

ಸುಮಾರು ಒಂದೂವರೆ ಗಂಟೆಯ ಅವಧಿಯಲ್ಲಿ ಮೂವತ್ತೆ„ದು ವಿದ್ಯಾರ್ಥಿಗಳು ರಚಿಸಿದ್ದು ಹತ್ತು ವಿಗ್ರಹಗಳನ್ನು. ಬಗೆ ಬಗೆಯ ರೂಪ. ಬಗೆಬಗೆಯ ಅಲಂಕಾರ. ನೋಡಬೇಕಾದ್ದು ಅವರ ಸರಳ ಶ್ರದ್ಧೆಯ ತೊಡಗುವಿಕೆಯನ್ನೇ ಹೊರತು ಮೂರ್ತಿಗಳ ಗುಣಮಟ್ಟವನ್ನಲ್ಲ. ಇದು ಅವರ ಪರಿಸರ ಕಾಳಜಿಯ ಒಂದು ಸಣ್ಣ ವಿಭಿನ್ನ ಪ್ರಯತ್ನವೂ ಹೌದು.

ಈಗಿನ ಸಂದರ್ಭ ಹಬ್ಬಗಳೆಂದರೆ ಬರೀ ಗೌಜಿ ಗದ್ದಲ, ಆಡಂಬರದ ಪ್ರದರ್ಶನ ಮಾತ್ರವಲ್ಲ ಪರಿಸರ ವಿನಾಶಕವೂ ಆಗುತ್ತಿದೆ. ವಿದ್ಯಾರ್ಥಿಗಳು ರಚಿಸಿದ ಈ ಪರಿಸರ ಸ್ನೇಹಿ ಗಣಪನ ಮೂರ್ತಿಗಳು ನಮ್ಮ ನಡೆ ಬದಲಾವಣೆಯ ಸಂದೇಶವನ್ನು ನೀಡುತ್ತಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next