Advertisement

ಭಾದ್ರಪದ ಶುಕ್ಲದ ತದಿಗೆಯಂದು…

11:58 PM Aug 27, 2019 | mahesh |

ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ ಬಂದಿರುತ್ತದೆ. ಆಗ ತಾನೇ ಶ್ರಾವಣದ ಕಡೆಯ ಬಿಕ್ಕಳಿಕೆ ಮುಗಿದು, ಅಳಿದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕ್ಕೆ ಹಬ್ಬದ ಸಂಭ್ರಮವೂ ಸೇರಿ, ಮನೆ-ಮನಗಳು ಮತ್ತಷ್ಟು ಕಳೆಗಟ್ಟುತ್ತವೆ. ನಿತ್ಯದ ಎಲ್ಲ ಜಂಜಾಟಗಳ ನಡುವೆಯೂ ಜನ, ಗೌರಿ-ಗಣೇಶನನ್ನು ಸ್ವಾಗತಿಸಲು ಸಜ್ಜಾಗುತ್ತಾರೆ. ಅರಿಶಿನದ ಗೌರಿಯನ್ನು ಪೂಜಿಸುವವರು ಕೆಲವರಾದರೆ, ಹಸಿಮಣ್ಣಿನ ಮೂರ್ತಿಯನ್ನು ಪೂಜಿಸುವ ಪದ್ಧತಿ ಕೆಲವರದು. ಪೂಜೆಯ ನಂತರ ಬಾಗಿನ ಕೊಡುವುದು ಹಿಂದಿನಿಂದ ಬಂದ ಸಂಪ್ರದಾಯ. ಜೋಡಿ ಮೊರದಲ್ಲಿ ಆಹಾರ ಪದಾರ್ಥಗಳ ಜೊತೆಗೆ ಮಂಗಳ ದ್ರವ್ಯಗಳನ್ನಿಟ್ಟು ಅರ್ಪಿಸುತ್ತಾರೆ. ಗೌರಿಯನ್ನು ಮನೆ ಮಗಳೆಂದು ಭಾವಿಸಿ, ಪ್ರತಿ ವರ್ಷವೂ ಆಕೆಯನ್ನು ತವರಿಗೆ ಆಹ್ವಾನಿಸಿ ಉಡಿ ತುಂಬುವುದು ಈ ಹಬ್ಬದ ವಿಶೇಷ.

Advertisement

ಆಪ್ತವೆನಿಸಲು ಹಲವು ಕಾರಣ
ಎರಡು ಸಂದರ್ಭಗಳಲ್ಲಿ ಗೌರಿಯನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ. ಶ್ರಾವಣದ ಮಂಗಳಗೌರಿ ವ್ರತ ಹಾಗೂ ಭಾದ್ರಪದದ ಸ್ವರ್ಣಗೌರಿವ್ರತ. ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಹಬ್ಬ.

ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿಯೇ ಗೌರಿ ಹಬ್ಬವನ್ನು ಆಚರಿಸಿದರೂ, ಈಗ ಹಬ್ಬಕ್ಕೂ ಆಧುನಿಕತೆಯ ಸ್ವರೂಪ ಬಂದಿರುವುದು ಕಾಲಮಹಿಮೆ.

ಜನಪದದ ದೃಷ್ಟಿಯಲ್ಲಿ, ಗೌರಿ-ಗಣೇಶನ ಜೊತೆಗೆ ಶಿವನೂ ಭೂಲೋಕಕ್ಕೆ ಬರುತ್ತಾನೆ. ವರ್ಷಕೊಮ್ಮೆ ಮಾವನ ಮನೆಗೆ ಬರುವ ಅಳಿಯನಿಗೆ, ಮಗಳು ಮೊಮ್ಮಗನಿಗೆ ನೀಡುವ ಪ್ರೀತಿ ಆದರವನ್ನೇ ನೀಡಿ ಸತ್ಕರಿಸುತ್ತಾರೆ.

ಬೇರೆಲ್ಲಾ ಹಬ್ಬಗಳಿಗಿಂತ ಗೌರಿ ಹಬ್ಬ ಆಪ್ತವೆನಿಸುವುದು ಹಲವು ಕಾರಣಗಳಿಗಾಗಿ. ಇದು ದೇವತಾರಾಧನೆಯ ಹಬ್ಬವಾದರೂ, ಇದರ ಮೂಲತಣ್ತೀ ಸಾಂಸ್ಕೃತಿಕ ಹಿನ್ನೆಲೆಯಿಂದ ಕೂಡಿದೆ. ನಮ್ಮೆಲ್ಲರಂತೆ ಸಂಸಾರದ ಒಳ-ಹೊರಗೆ ಗಂಡ ಮಕ್ಕಳೊಡನಾಡುವ ಪಾರ್ವತಿಯ ಹಬ್ಬ ಇದು. ಪರ್ವತರಾಜನ ಮಗಳಾದರೂ ತಾನು ಇಷ್ಟಪಟ್ಟ ಬೂದಿ ಬಡುಕ ಬೋಲಾ ಶಂಕರನನ್ನೇ ಮದುವೆಯಾಗುತ್ತಾಳೆ. ದಾಕ್ಷಾಯಣಿಯಾಗಿ, ತಂದೆ ದಕ್ಷ ಪ್ರಜಾಪತಿಯಿಂದ ಗಂಡನಿಗೆ ಆದ ಅಪಮಾನವನ್ನು ಸಹಿಸಲಾಗದೇ ಚಿತೆಗೆ ಹಾರುವ ಈಕೆ ಪುನರ್ಜನ್ಮದಲ್ಲಿ ಪಾರ್ವತಿಯಾಗುತ್ತಾಳೆ.

Advertisement

ಪುರಾಣದ ಹಿನ್ನೆಲೆ
ಶುಂಭ ನಿಶುಂಭರೆಂಬ ರಾಕ್ಷಸರು, ದೇವತೆಗಳಿಗೆ ಹಾಗೂ ಲೋಕಕ್ಕೆ ಕಂಟಕಪ್ರಾಯರಾಗಿರುತ್ತಾರೆ. ಅವರ ಕಾಟದಿಂದ ಪಾರಾಗಲು ದೇವತೆಗಳೆಲ್ಲರೂ ಸೇರಿ, ದೇವಿಯನ್ನು ಸ್ತುತಿಸುತ್ತಾರೆ. ಆಗ, ಗಂಗಾ ಸ್ನಾನಕ್ಕಾಗಿ ಬಂದ ಪಾರ್ವತಿಯ ಶರೀರದಿಂದ ಅತ್ಯಂತ ರೂಪವತಿಯಾದ ಸ್ತ್ರೀ ಹೊರ ಬರುತ್ತಾಳೆ. ಅವಳು ಪಾರ್ವತಿಯ ಶರೀರಕೋಶದಿಂದ ಹೊರಬಂದವಳಾದ್ದರಿಂದ ಕೌಶಿಕಿ’ ಎಂದು ಕರೆಯಲಾಗುತ್ತದೆ. ಆಗ ಪಾರ್ವತಿಯ ದೇಹ ಕಪ್ಪಾಗಿ ಕಾಣುತ್ತದೆ. ಹಾಗಾಗಿ, ಈಶ್ವರನು ಪಾರ್ವತಿಯನ್ನು ‘ಕಾಳಿ’ (ಕಾಲಿ) ಎಂದು ಕರೆಯುತ್ತಾನೆ. ಮುಂದೆ, ಕಾಳಿಯು ತಪಸ್ಸು ಮಾಡಿ, ಗೌರವರ್ಣವನ್ನು ಪಡೆಯುತ್ತಾಳೆ. ಅವಳೇ ಗೌರಿ ಎಂದು ಮತ್ಸ್ಯಪುರಾಣ ಸಾರುತ್ತದೆ.

ಗೌರಿಯೆಂದ ಕೂಡಲೆ ನಮ್ಮ ಕಣ್ಮುಂದೆ ಬರುವುದು ಮುಗುಳ್ನಗೆಯ ಶಾಂತ ಸುಂದರ ಮುಖ. ಆಕೆ, ಸಮಯ ಬಂದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲ ಚತುರೆ, ತೋಳ್ಬಲವುಳ್ಳ ಸಬಲೆ. ಹಾಗೆಂದೇ ಗೌರಿ ಕಾಳಿಯೂ ಆಗಿ ಅಭಿವ್ಯಕ್ತಗೊಂಡಿದ್ದಾಳೆ. ಇವಳು ಸೌಮ್ಯ ಭಾವದವಳೆಂದು ಕೆಣಕುವಂತಿಲ್ಲ. ಅಂತಃಸತ್ವವುಳ್ಳ ಹೆಣ್ಣುಗಳೂ ಹೀಗೆಯೇ. ಹೂವಿನಂತೆ ಮೃದುವಾಗಿದ್ದರೂ ಅಗತ್ಯ ಬಿದ್ದಾಗ ವಜ್ರದಂತೆ ಕಠೊರವಾಗುತ್ತಾರೆ. ದುಷ್ಟಶಕ್ತಿಗಳು ಇಂದಿಗೂ, ಎಂದೆಂದಿಗೂ ಜಾಗೃತವಾಗಿರುವುದರಿಂದ ಹೆಣ್ಣು ಮಕ್ಕಳು ಗೌರಿಯಂತೆ ಸಬಲರಾಗುವುದು ಅವಶ್ಯಕ. ಗೌರಿ ಸ್ವರೂಪದ ಸಂಕೇತ, ಗುಣಗಳನ್ನು ಅರ್ಥೈಸಿಕೊಂಡು ಆನುಸರಿಸಿದರೆ ಭಾದ್ರಪದ ತದಿಗೆಯ ಆಚರಣೆ ಸಾರ್ಥಕವಾಗುತ್ತದೆ.

– ಡಾ. ಗುರುರಾಜ ಪೋಶೆಟ್ಟಿಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next