Advertisement

Festival ಕರಾವಳಿಯಲ್ಲಿ ಸಂಭ್ರಮದ ಗಣೇಶ ಚತುರ್ಥಿ

12:48 AM Sep 09, 2024 | Team Udayavani |

ಉಡುಪಿ/ಮಂಗಳೂರು: ಶನಿವಾರ ನಾಡಿನಾದ್ಯಂತ ಶ್ರೀ ಗಣೇಶ ಚತುರ್ಥಿ ಶ್ರದ್ಧಾ ಭಕ್ತಿ ಸಂಭ್ರಮದಿಂದ ಜರಗಿತು.

Advertisement

ಭಕ್ತರು ವಿವಿಧ ದೇವಸ್ಥಾನಗಳು ಮತ್ತು ಸಾರ್ವಜನಿಕ ಗಣೇಶೋತ್ಸವ ಕೇಂದ್ರಗಳಿಗೆ ಅಪಾರ ಸಂಖ್ಯೆಯಲ್ಲಿ ತೆರಳಿ ಪ್ರಸಾದ ಸ್ವೀಕರಿಸಿದರು. ಚೌತಿಯಂದು ಮತ್ತು ರವಿವಾರ ಸಾರ್ವಜನಿಕ ಗಣೇಶೋತ್ಸವ ಕೇಂದ್ರಗಳಿಗೆ ಭಕ್ತರು ಭೇಟಿ ನೀಡಿದರು.

ದೇವಸ್ಥಾನಗಳು, ಪೆಂಡಾಲುಗಳಲ್ಲಿ 108, 1,008 ಗಣಪತಿ ಹೋಮ, ಮೂಡುಗಣಪತಿ, ರಂಗಪೂಜೆ, ಮಹಾಪೂಜೆ, ಹೂವಿನ ಪೂಜೆ, ಅನ್ನದಾನ ಸೇವೆಗಳು ಜರಗಿದವು. ಉಡುಪಿ ಜಿಲ್ಲೆಯಲ್ಲಿ 481 ಕಡೆಗಳಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು.

ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನ, ವಿವಿಧ ಮಠಗಳಲ್ಲೂ ಸಂಪ್ರದಾಯದಂತೆ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ದ.ಕ. ಜಿಲ್ಲೆಯ ಶರವು, ಸೌತಡ್ಕ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಪೆರ್ಣಂಕಿಲ, ಬಾರಕೂರು ಬಟ್ಟೆವಿನಾಯಕ, ಉದ್ಯಾವರ, ಉಪ್ಪೂರು, ಪಡುಬಿದ್ರಿ ದೇವಸ್ಥಾನ, ಹಿರಿಯಡಕ ಪುತ್ತಿಗೆಯ ಸ್ತಂಭೋದ್ಭವ ಗಣಪತಿ, ಉಡುಪಿ ಅನಂತೇಶ್ವರ ದೇವಸ್ಥಾನದ ಗಣಪತಿ ಸಾನ್ನಿಧ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.

ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್ಪ, ಅಷ್ಟದ್ರವ್ಯ ಪಂಚಕಜ್ಜಾಯ, ಕಡಲೆಬೇಳೆ ಪಂಚಕಜ್ಜಾಯ, ಲಡ್ಡು, ಮೋದಕ, ಕೊಟ್ಟೆ ಕಡುಬು ದೇವರಿಗೆ ಸಮರ್ಪಿಸಿ ಭಕ್ತರಿಗೆ ವಿತರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ, ಸಾರ್ವಜನಿಕ ಗಣೇಶೋತ್ಸವ ಕೇಂದ್ರದಲ್ಲಿ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Advertisement

ಗಣಪತಿ ಹೋಮಗಳು, ಮುಡಿಅಕ್ಕಿ ಕಡುಬು, ಮೂಡುಗಣಪತಿ ಸೇವೆಗಳು, ಮನೆಗಳಲ್ಲಿ ಗಣಪತಿ ವಿಗ್ರಹವಿಟ್ಟು ಪೂಜಿಸುವವರು ಮೊದಲ ದಿನವೇ ಜಲಸ್ತಂಭನ ಮಾಡಿದರು. ಹಲವು ಗಣೇಶೋತ್ಸವ ಪೆಂಡಾಲುಗಳಲ್ಲಿಯೂ ಮೊದಲ ದಿನವೇ ಜಲಸ್ತಂಭನ ಮಾಡಲಾಯಿತು. ಶನಿವಾರ ಆಗಾಗ್ಗೆ ಮಳೆ ಸುರಿದಿತ್ತಾದರೂ ಹಬ್ಬದ ಸಂಭ್ರಮಕ್ಕೆ ತೊಡಕಾಗಲಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗಣೇಶೋತ್ಸವ ಸಂಭ್ರಮ ಕಂಡು ಬಂತು.ವಿವಿಧ ದೇವಸ್ಥಾನ, ಗಣೇಶೋತ್ಸವ ಸಮಿತಿ ನೇತೃತ್ವದ ಸಂಘ-ಸಂಸ್ಥೆಗಳು ಹಾಗೂ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವದ ಪೆಂಡಾಲಿಗೆ ತೆರಳಿ ಪ್ರಸಾದ ಸ್ವೀಕರಿಸಿದರು.

ಮಂಗಳೂರಿನ ಸಂಘನಿಕೇತನ, ಹಿಂದೂ ಯುವ ಸೇನೆ ವತಿಯಿಂದ ನೆಹರೂ ಮೈದಾನ ಸಹಿತ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ನಡೆಯಿತು. ಕೆಲವೆಡೆ ಪೂಜಿಸಲ್ಪಟ್ಟ ಗಣಪತಿ ವಿಗ್ರಹಗಳನ್ನು ಮಂಗಳವಾರವೇ ಜಲಸ್ತಂಭನ ಮಾಡ‌ಲಾಯಿತು. ಉಳಿದ ಬಹುತೇಕ ಕಡೆ ಎರಡು ದಿನಗಳಿಂದ ಏಳು ದಿನಗಳವರೆಗೆ ಪೂಜಿಸಿ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ವಿವಿಧೆಡೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶನಿವಾರ, ರವಿವಾರ ಆಗಾಗ್ಗೆ ಮಳೆ ಬಂದಿತ್ತಾದರೂ ಹಬ್ಬದ ಸಂಭ್ರಮಕ್ಕೆ ತೊಡಕಾಗಲಿಲ್ಲ.

ಮಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯನ್ನು ಒಳಗೊಂಡಿ ರುವ ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 165 ಕಡೆಗಳಲ್ಲಿ ಮತ್ತು ಜಿಲ್ಲಾ ವ್ಯಾಪ್ತಿಯ 221 ಸಹಿತ ಒಟ್ಟು 386 ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ನಡೆಯಿತು.

ದೇವಸ್ಥಾನಗಳು, ಪೆಂಡಾಲುಗಳಲ್ಲಿ 108, 1,008 ಗಣಪತಿ ಹೋಮ, ಮೂಡುಗಣಪತಿ ಸೇವೆಗಳು ನಡೆದವು. ಗಣಪತಿ ದೇವಸ್ಥಾನಗಳಲ್ಲದೆ ಇತರ ದೇವಸ್ಥಾನಗಳಲ್ಲಿ, ಸಂಪ್ರದಾಯದಂತೆ ಗಣಪತಿ ವಿಗ್ರಹವನ್ನು ಇರಿಸಿ ಪೂಜಿಸಲಾಯಿತು.
ದ.ಕ. ಜಿಲ್ಲೆಯ ಶರವು, ಸೌತಡ್ಕ ಸಹಿತ ವಿವಿಧ ಗಣಪತಿ ಸನ್ನಿಧಿಗಳಲ್ಲಿ ಜನಸಂದಣಿ ಇತ್ತು. ವಿವಿಧ ದೇವಸ್ಥಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್ಪ, ಅಷ್ಟದ್ರವ್ಯ ಪಂಚಕಜ್ಜಾಯ, ಕಡಲೆಬೇಳೆ ಪಂಚಕಜ್ಜಾಯ, ಲಡ್ಡು, ಮೋದಕ, ಕೊಟ್ಟೆ ಕಡುಬು ದೇವರಿಗೆ ಸಮರ್ಪಿಸಿದ್ದು, ಬಳಿಕ ಭಕ್ತರು ಸ್ವೀಕರಿಸಿದರು.

ಸೌತಡ್ಕ: 108 ಕಾಯಿ
ಗಣಹೋಮ, ರಂಗಪೂಜೆ
ಬೆಳ್ತಂಗಡಿ: ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೆ.7ರಂದು ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಬೆಳಗ್ಗೆ 8 ರಿಂದ ಶ್ರೀ ದೇಗುಲದಲ್ಲಿ 108 ಕಾಯಿ ಗಣಹೋಮ, ರಂಗಪೂಜೆ, ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ಜರಗಿತು. ದೇವರನ್ನು ವಿವಿಧ ಫಲಪುಷ್ಪಗಳಿಂದ ಅಲಂಕರಿಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆ, ಸೇವೆ ಸಲ್ಲಿಸಿದರು.

ಆನೆಗುಡ್ಡೆ: ಸಂಭ್ರಮದ
ಶ್ರೀ ವಿನಾಯಕ ಚತುರ್ಥಿ
ತೆಕ್ಕಟ್ಟೆ: ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಳೀಕೇರ ಗಣಯಾಗ ವಿಶೇಷ ಪೂಜೆಯೊಂದಿಗೆ ಸೆ.7ರಂದು ಸಂಭ್ರಮದಿಂದ ಜರಗಿತು.

ಶ್ರೀ ದೇಗುಲವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಹಿರಿಯ ವಿಶ್ರಾಂತ ಆನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮ ದರ್ಶಿ ಕೆ.ನಿರಂಜನ ಉಪಾಧ್ಯಾಯ, ಕೆ.ಪದ್ಮನಾಭ ಉಪಾಧ್ಯಾಯ ಹಾಗೂ ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ, ದೇಗುಲದ ವ್ಯವಸ್ಥಾಪಕ ನಟೇಶ್‌ ಕಾರಂತ್‌ ತೆಕ್ಕಟ್ಟೆ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಕರಾವಳಿಯ ವಿವಿಧ ಪ್ರದೇಶಗಳಿಂದ ಅಸಂಖ್ಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದರು.

ಹಟ್ಟಿಯಂಗಡಿ: ಅಷ್ಟೋತ್ತರ ಸಹಸ್ರ ನಾಳೀಕೇರ ಮಹಾಗಣಯಾಗ
ಕುಂದಾಪುರ: ಹಟ್ಟಿಯಂ ಗಡಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶನಿವಾರ ಅಷ್ಟೋತ್ತರ ಸಹಸ್ರ ನಾಳಿಕೇರ (1008 ತೆಂಗಿನಕಾಯಿ) ಮಹಾಗಣಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ಮಧ್ಯಾಹ್ನ ಅಷ್ಟೋತ್ತರ ಸಹಸ್ರ ನಾಳೀಕೇರ ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ ಜರಗಿತು. ಬೆಳಗ್ಗಿನಿಂದ ಸಂಜೆಯವರೆಗೂ ಊರ – ಪರವೂರ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿ, ಶ್ರೀ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ಟ, ಶ್ರೀ ಗಣೇಶ ಚತುರ್ಥಿ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಊರ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next